ಬೆಂಗಳೂರು: ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಮನೆಗೆ ಬೆಂಕಿ ಹಚ್ವಿದ ಪ್ರಕರಣದಲ್ಲಿ ಮಾಜಿ ಕಾರ್ಪೋರೆಟರ್ ಜಾಕೀರ್ ಹುಸೇನ್ ಪಾತ್ರ ಇರುವುದು ತನಿಖೆಯಲ್ಲಿ ಬಯಲಾಗಿತ್ತು. ಅಲ್ಲದೇ ಇದರಲ್ಲಿ ಜಾಕೀರ್ ತಮ್ಮ ಯಾಸೀರ್ ಕೂಡ ಭಾಗಿಯಾಗಿರುವುದು ಬಯಲಾಗಿದೆ. ಸದ್ಯ ಅಣ್ಣ, ತಮ್ಮ ಇಬ್ಬರೂ ತಲೆಮರೆಸಿಕೊಂಡಿದ್ದು, ಸಿಸಿಬಿ ಪೊಲೀಸರು ಇಬ್ಬರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಮಾಜಿ ಕಾರ್ಪೊರೇಟರ್ ಜಾಕೀರ್ ಪುಲಕೇಶಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ಜೊತೆ ಸೇರಿಕೊಂಡು ತಮ್ಮದೇ ಅಧಿಪತ್ಯ ಸಾಧಿಸಲು ಅಖಂಡ ಶ್ರೀನಿವಾಸ್ ಮೂರ್ತಿಯನ್ನು ರಾಜಕೀಯವಾಗಿ ಕುಗ್ಗಿಸಲು ಯೋಜನೆ ಮಾಡಿದ್ರು. ಹೀಗಾಗಿ ಡಿ.ಜೆ ಹಳ್ಳಿ ಗಲಭೆಯನ್ನ ಗಾಳವಾಗಿಟ್ಟುಕೊಂಡು ಅಖಂಡ ಮನೆಗೆ ಬೆಂಕಿ ಹಚ್ಚಿದ್ದಾರೆ. ಹಾಗೆ ಬೆಂಕಿ ಹಚ್ವಿದ ಆರೋಪಿಗಳಿಗೆ ಹಣದ ಸಹಾಯ ಕೂಡ ಮಾಡಿದ್ದಾರೆ. ಸದ್ಯ ಈ ಎಲ್ಲ ಅಂಶ ಸಿಸಿಬಿ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖ ಮಾಡಿದ್ದಾರೆ.
ಸದ್ಯ ಬಂಧನ ಭೀತಿಯಲ್ಲಿರುವ ಜಾಕೀರ್ ಹಾಗೂ ಯಾಸೀರ್ ಇಬ್ಬರು ತಲೆ ಮರೆಸಿಕೊಂಡಿದ್ದು, ಸಿಸಿಬಿ ಕೂಡ ವಿಶೇಷ ತನಿಖಾ ತಂಡ ರಚನೆ ಮಾಡಿ ಶೋಧ ಕಾರ್ಯದಲ್ಲಿ ಮುಂದಾಗಿದ್ದಾರೆ. ಮತ್ತೊಂದೆಡೆ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕು ಎಂದು ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮೇಯರ್ ಸಂಪತ್ ಮೇಲೆ ಕೂಡ ಸಿಸಿಬಿ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ.