ಬೆಂಗಳೂರು : ದಕ್ಷಿಣ ಭಾರತ ಬಿಜೆಪಿ ಮುಕ್ತವಾಗಿದೆ. ಯಾರೇ ಅಹಂಕಾರದಿಂದ ಮಾತನಾಡಿದರೂ ಅದು ಜಾಸ್ತಿ ದಿನ ನಡೆಯುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದ ಬಳಿಕ ಇಲ್ಲಿನ ಜೋಡೋ ಸಭಾಂಗಣದಲ್ಲಿ ಜಂಟಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಇದು ಯಾವುದೇ ಒಬ್ಬ ವ್ಯಕ್ತಿಯ ಗೆಲುವಲ್ಲ. ಇದು ಕರ್ನಾಟಕದ ಜನತೆಯ ಗೆಲುವು. ಕರ್ನಾಟಕದ ಜನತೆಗೆ ನಾನು ಕೈ ಮುಗಿದು ಧನ್ಯವಾದ ಹೇಳುತ್ತೇನೆ ಎಂದರು.
ಇನ್ನು, ಜನರಿಗೆ ಕೊಟ್ಟಿರುವ ಭರವಸೆಗಳನ್ನು ಮೊದಲ ಕ್ಯಾಬಿನೆಟ್ ನಲ್ಲೇ ಈಡೇರಿಸಬೇಕು ಎಂದು ನಾನು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಜೊತೆಯಾಗಿ ಮಾತನಾಡಿದ್ದೇನೆ. ನಾವು ಕೊಟ್ಟಿರುವ ಮಾತುಗಳನ್ನು ಈಡೇರಿಸುತ್ತೇವೆ ಎಂದು ಖರ್ಗೆ ಭರವಸೆ ನೀಡಿದರು. ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ, ನೀವು ಗುಜರಾತ್ ಭೂಮಿ ಪುತ್ರ. ನಾನು ಕರ್ನಾಟಕದ ಭೂಮಿ ಪುತ್ರ ಎಂದು ಟಾಂಗ್ ಕೊಟ್ಟರು.
ನಮ್ಮ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಅವರಿಗೆ ನೋಟಿಸ್ ಕೊಡುತ್ತಾರೆ. ವಿಚಾರಣೆ ಎಂದು ಮಾನಸಿಕವಾಗಿ ಹಿಂಸೆ ಕೊಡುತ್ತಾರೆ. ಇವೆಲ್ಲದಕ್ಕೂ ಜನ ಇಂದು ಉತ್ತರ ಕೊಟ್ಟಿದ್ದಾರೆ. ನಮ್ಮ ಪಕ್ಷದವರೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬರುತ್ತೋ ಇಲ್ವೋ ಎಂದು ಅನುಮಾನ ಪಟ್ಟಿದ್ದರು. ಆದರೆ ಕರ್ನಾಟಕದ ಜನತೆ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಬಹುಮತದ ಸರ್ಕಾರವನ್ನು ಕೊಟ್ಟಿದ್ದಾರೆ. ಇನ್ನು ಮುಂದೆ ಎಲ್ಲಾ ಗ್ಯಾರಂಟಿಗಳನ್ನು ಜಾರಿಗೆ ತರುವತ್ತಾ ಗಮನ ಹರಿಸುತ್ತೇವೆ ಎಂದು ಹೇಳಿದರು.
2024ರ ಲೋಕ ಚುನಾವಣೆಗೆ ಎಲ್ಲರೂ ಒಟ್ಟಾಗಿ ದುಡಿಯಬೇಕಿದೆ. ಮತ ನೀಡಿದವರಿಗೂ,ನೀಡದವರಿಗೂ ಎಲ್ಲರಿಗೂ ಒಳ್ಳೆಯದಾಗಲಿ. ನಾವು ಈಗ ಯುದ್ಧವನ್ನು ಗೆದ್ದಿದ್ದೇವೆ. ಮುಂದೆ ಸಾಕಷ್ಟು ಚುನಾವಣೆಯಲ್ಲಿಯೂ ನಾವು ಯುದ್ಧ ಮಾಡಬೇಕಿದೆ ಎಂದು ಹೇಳಿದರು. ಬಳಿಕ ಒಬ್ಬರಿಗೊಬ್ಬರು ಕೈ ಹಿಡಿದೆತ್ತಿ ಜೈ ಘೋಷ ಕೂಗಿ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿದರು.
ಈ ವೇಳೆ ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಪ್ರತಿಯೊಬ್ಬರು ರಾಜ್ಯದಲ್ಲಿನ 40% ಕಮಿಷನ್ ಸರ್ಕಾರವನ್ನು ತೆಗೆದುಹಾಕಬೇಕು ಎಂದು ಬಯಸಿದ್ದರು. ಇದು ಪಕ್ಷದ ಕಾರ್ಯಕರ್ತರು ಗೆಲುವು. ಇದು ಸಿದ್ದರಾಮಯ್ಯ ಹಾಗು ಡಿ.ಕೆ ಶಿವಕುಮಾರ್ ಅವರ ಗೆಲುವು. ಸೋನಿಯಾ ಗಾಂಧಿ ಅವರ ಆಶೀರ್ವಾದ ಇಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಎಲ್ಲ ಕೆಲಸವನ್ನೂ ಸಮರ್ಥವಾಗಿ ನಿಭಾಯಿಸಿ ಯಾವುದೇ ಕ್ರೆಡಿಟ್ ತೆಗೆದುಕೊಳ್ಳದವರು ರಾಹುಲ್ ಗಾಂಧಿ ಎಂದು ಹೇಳಿದರು. ರಾಹುಲ್ ಗಾಂಧಿ ಅವರು ಕನ್ನಡಿಗ, ಕರ್ನಾಟಕದ ಭಾಗ ಎಂಬಂತೆ ಇಲ್ಲಿ ಸಮಯ ಕಳೆದಿದ್ದಾರೆ. ನಾನು ನನ್ನ ಹೃದಯದಿಂದ 6.5 ಕೋಟಿ ಕರ್ನಾಟಕದ ಜನರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು.
ಇದು ಪ್ರತಿ ಕನ್ನಡಿಗನ ಗೆಲುವು. ಪ್ರತಿ ಮತದಾರನ ಗೆಲುವು. ಇಂದು ಸ್ವಾಭಿಮಾನ, ಬ್ರ್ಯಾಂಡ್ ಕರ್ನಾಟಕದ ಗೆಲುವು. ಪ್ರಜಾತಂತ್ರವನ್ನು ಉಳಿಸುವ ಹೊಸ ಮಂತ್ರವನ್ನು ಇಡೀ ಕರ್ನಾಟಕದ ಜನತೆ ದೇಶಕ್ಕೆ ನೀಡಿದೆ. ಇಂದು ಕಾಂಗ್ರೆಸ್ ಮುಕ್ತ ಭಾರತ ಅಲ್ಲ. ಬಿಜೆಪಿ ಮುಕ್ತ ದಕ್ಷಿಣ ಭಾರತವನ್ನಾಗಿ ಜನರೇ ಮಾಡಿದ್ದಾರೆ ಎಂದು ಟೀಕಿಸಿದರು. ನಾವು ಚುನಾವಣಾ ಸಂದರ್ಭದಲ್ಲಿ ನೀಡಿದ ಗ್ಯಾರಂಟಿಗಳನ್ನು ಈಡೇರಿಸುತ್ತೇವೆ. ನಮಗೆ ಮತ ಹಾಕದವರಿಗೂ ನಾವು ನಮ್ಮ ಭರವಸೆಯನ್ನು ಈಡೇರಿಸುತ್ತೇವೆ ಎಂದು ಹೇಳಿದರು.
ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಇದು ಭಾರತ್ ಜೋಡೋ ಭವನ. ಈ ಚುನಾವಣೆ ಭಾರತವನ್ನು ಜೋಡಿಸುವ ಚುನಾವಣೆಯಾಗಿದೆ. ಇದು ನನ್ನ ಗೆಲುವಲ್ಲ, ಸಿದ್ದರಾಮಯ್ಯ ಗೆಲುವಲ್ಲ. ಇದು ವೇದಿಕೆ ಮೇಲೆ ಇರುವವರ ಗೆಲುವಲ್ಲ. ಇದು ಜನರ ಗೆಲುವು. ಜನರ ಮುಖದಲ್ಲಿ ಈಗ ನಗು ಅರಳುತ್ತಿದೆ. ಮೂರುವರೆ ವರ್ಷದಿಂದ ರಾಜ್ಯಕ್ಕೆ ಹಿಡಿದಿದ್ದ ಗ್ರಹಣ ಕಳೆದಿದೆ. ಇದನ್ನು ಅಳಿಸಿದ ಜನರಿಗೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು. ನಮ್ಮ ಪಕ್ಷದಲ್ಲಿ ವ್ಯಕ್ತಿ ಪೂಜೆ ಇಲ್ಲ. ಇಲ್ಲಿ ಪಕ್ಷದ ಪೂಜೆ ಮಾತ್ರ ಇರುವುದು. ನಾಳೆ ಸಂಜೆ 5.30ಕ್ಕೆ ಕಾಂಗ್ರೆಸ್ ಶಾಸಕಾಂಗ ಸಭೆ ಇದೆ. ನಾಳೆ ಸಂಜೆ ಮುಖ್ಯಮಂತ್ರಿ ಯಾರಾಗಬೇಕೆಂದು ಚರ್ಚೆ ನಡೆಸುತ್ತೇವೆ ಎಂದು ಹೇಳಿದರು.
ಇದು ಬರೀ ಗೆಲುವಲ್ಲ. ಭ್ರಷ್ಟಾಚಾರ, 40% ಸರ್ಕಾರ, ಗೃಹಿಣಿಯರ ಕಣ್ಣೀರಿನ ವಿರುದ್ಧದ ಗೆಲುವು. ಕಾಂಗ್ರೆಸ್ ನ ಗ್ಯಾರಂಟಿಗಳ ಗೆಲುವು. ಇನ್ಮುಂದೆ ಗೃಹ ಜ್ಯೋತಿ ಬೆಳಗಲಿದೆ. ನಮ್ಮ ಸರ್ಕಾರ ಬಂದ ಮೊದಲ ದಿನ ಗೃಹ ಲಕ್ಷ್ಮಿ ನಗುತ್ತಾಳೆ. ಬಡವರ ಹೊಟ್ಟೆಯನ್ನು ಅನ್ನ ಭಾಗ್ಯ ತುಂಬಲಿದೆ. ನಾವು ಐದು ಗ್ಯಾರಂಟಿಗಳನ್ನು ನೀಡುತ್ತೇನೆ ಎಂದು ನಾನು ಮತ್ತು ಸಿದ್ದರಾಮಯ್ಯ ಚಾಮುಂಡೇಶ್ವರಿ ಮುಂದೆ ಪ್ರಮಾಣ ಮಾಡಿದ್ದೇವೆ. ಕರ್ನಾಟಕದ ಚುನಾವಣೆ ಗೆಲುವನ್ನು ನಿಮಗೆ ಅರ್ಪಿಸುತ್ತೇನೆ ಎಂದು ನಾನು ಸೋನಿಯಾ ಗಾಂಧಿಗೆ ಮಾತು ಕೊಟ್ಟಿದ್ದೆ ಎಂದು ಹೇಳಿದರು.
ಬಳಿಕ ಮಾತನಾಡಿದ ವಿಪಕ್ಷನಾಯಕ ಸಿದ್ದರಾಮಯ್ಯ, ಬಿಜೆಪಿ ಅಧಿಕಾರಕ್ಕೆ ಬಂದಾಗ ಯಾವತ್ತೂ ಕೂಡ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದರು. ಯಾವಾಗೆಲ್ಲ ಅತಂತ್ರ ವಿಧಾನಸಭೆ ಆಗಿದೆಯೋ ಆ ಕಾಲದಲ್ಲಿ ಸುಭದ್ರ ಸರ್ಕಾರ ಸಾಧ್ಯವಾಗಿಲ್ಲ. ಸಮ್ಮಿಶ್ರ ಸರ್ಕಾರ ಮಾಡಿದರೆ, ಒಬ್ಬರಿಗಿಂತ ಹೆಚ್ಚು ಜನ ಸಿಎಂ ಆದರೆ, ಒಂದಕ್ಕಿಂತ ಹೆಚ್ಚು ಪಾರ್ಟಿಗಳು ಸೇರಿ ಸರ್ಕಾರ ಮಾಡಿದರೆ ಸುಭದ್ರ ಸರ್ಕಾರ ಕೊಡಲು ಸಾಧ್ಯವೇ ಇಲ್ಲ. 2013ರಲ್ಲಿ ಜನರು ಸ್ಪಷ್ಟ ಬಹುಮತ ಕೊಟ್ಟಿದ್ದರು. ಆಗ 5 ವರ್ಷ ಜನರ ನಿರೀಕ್ಷೆಗೆ ಅನುಗುಣವಾಗಿ ಆಡಳಿತ ನೀಡಲು ಸಾಧ್ಯವಾಯಿತು. ಜನರ ಭರವಸೆ ಈಡೇರಿಸಲು ಸಾಧ್ಯವಾಗಿತ್ತು ಎಂದು ಅಭಿಪ್ರಾಯಪಟ್ಟರು.
ಇದು 7 ಕೋಟಿ ಕನ್ನಡಿಗರ ಗೆಲುವು : ಬಿಜೆಪಿ ಈವರೆಗೆ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್ ಮೂಲಕ ಮಾತ್ರ ಅಧಿಕಾರಕ್ಕೆ ಬಂದಿದೆ. ಸಮ್ಮಿಶ್ರ ಸರ್ಕಾರ ಇದ್ದರೆ, ಮುಖ್ಯಮಂತ್ರಿಗಳು ಬದಲಾಗುತ್ತಿದ್ದರೆ ರಾಜ್ಯದ ಅಭಿವೃದ್ಧಿ ಆಗಲ್ಲ. ಸುಭದ್ರ ಸರ್ಕಾರ ರಚನೆ ಮಾಡಲು ಆಗುವುದಿಲ್ಲ. ಸಮ್ಮಿಶ್ರ ಸರ್ಕಾರ, ಆಪರೇಷನ್ ಕಮಲದಿಂದ ಜನ ಬೇಸತ್ತಿದ್ದಾರೆ. ಇದರಿಂದಾಗಿ ಒಂದು ಪಕ್ಷವನ್ನು ಅಧಿಕಾರಕ್ಕೆ ತರಲು ಜನ ತೀರ್ಮಾನಿಸಿದ್ದರು.
ಈಗ ಕಾಂಗ್ರೆಸ್ ಪಕ್ಷದ ಅಲೆಯಿಂದ ರಾಜ್ಯದಲ್ಲಿ ಗೆದ್ದಿದ್ದೇವೆ. ಮಂಡ್ಯದಲ್ಲಿ 7 ರಲ್ಲಿ 6 ಸ್ಥಾನಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ನಮಗೆ ಎಲ್ಲಾ ಜಾತಿ ಧರ್ಮದವರು ಮತ ಹಾಕಿದ್ದಾರೆ. ದರ್ಶನ್ ಪುಟ್ಟಣ್ಣಯ್ಯ ಅವರು ನಮಗೆ ಬೆಂಬಲ ಸೂಚಿಸಿದ್ದಾರೆ. ನಮ್ಮ ಕಾರ್ಯಕರ್ತರು ಅವರ ಗೆಲುವಿಗೆ ಕೆಲಸ ಮಾಡಿದ್ದಾರೆ. ದರ್ಶನ್ ಪುಟ್ಟಣ್ಣಯ್ಯ ಸೇರಿ ನಮಗೆ 137 ಸ್ಥಾನ ಸಿಕ್ಕಿದೆ. ಅಧಿಕಾರ ಸಿಕ್ಕಿರುವುದು ಮಜಾ ಮಾಡಲು ಅಲ್ಲ, ಕೆಲಸ ಮಾಡಲು. ಮೊದಲ ಕ್ಯಾಬಿನೆಟ್ ನಲ್ಲೇ ನಮ್ಮ ಎಲ್ಲಾ ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ : ಮೈಸೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಮೆಲುಗೈ: ಭದ್ರಕೋಟೆ ಕಳೆದುಕೊಂಡ ಜೆಡಿಎಸ್, ಇದ್ದ ಸ್ಥಾನವನ್ನೂ ನಷ್ಟ ಮಾಡಿಕೊಂಡ ಬಿಜೆಪಿ