ಬೆಂಗಳೂರು: ಟಾಟಾ ಟೆಕ್ನಾಲಜೀಸ್ ಮತ್ತು ಇತರ ಉದ್ಯಮಗಳ ಸಹಭಾಗಿತ್ವದಲ್ಲಿ ರಾಜ್ಯದ 150 ಐಟಿಐ ಉನ್ನತೀಕರಣಕ್ಕೆ ಮಾಡಿಕೊಂಡಿರುವ ಒಪ್ಪಂದ ರಾಜ್ಯದ ಹೂಡಿಕೆ ಸ್ನೇಹಿ ವಾತಾವರಣಕ್ಕೆ ಪೂರಕವಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸರ್ಕಾರಿ ಐಟಿಐಗಳನ್ನು ಆಯ್ಕೆ ಮಾಡಲಾಗುತ್ತದೆ. ಕೈಗಾರಿಕೆಗಳಿಗೆ ಅಗತ್ಯವಿರುವ ಸ್ಮಾರ್ಟ್ ಉತ್ಪಾದನೆಯನ್ನು ನಿರ್ವಹಿಸಲು ಪ್ರಸ್ತುತ ನಮ್ಮ ಐಟಿಐಗಳು ಪೂರ್ಣವಾಗಿ ಸಜ್ಜುಗೊಂಡಿಲ್ಲ.
ಹಾಗಾಗಿ ಈ ಯೋಜನೆಯಡಿ 20 ಕೈಗಾರಿಕಾ ಪಾಲುದಾರರೊಂದಿಗೆ ಟಾಟಾ ಟೆಕ್ನಾಲಜಿ ಸಂಸ್ಥೆಯ ಬೇಡಿಕೆಗೆ ಅನುಗುಣವಾಗಿ ಅತ್ಯಾಧುನಿಕ ತಂತ್ರಜ್ಞಾನದ ಜೊತೆಗೆ ನಾವು ತರಬೇತಿ ಮತ್ತು ಹೆಚ್ಚುವರಿ ಪ್ರಮಾಣಿಕೃತ ಸೇವೆಯನ್ನು ಐಟಿಐ, ಪಾಲಿಟೆಕ್ನಿಕ್ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ನೀಡಲಿದ್ದೇವೆ ಎಂದು ತಿಳಿಸಿದರು.
ಟಾಟಾ ಸಂಸ್ಥೆ ಹಾಗೂ ಮತ್ತಿತರ ಸಂಸ್ಥೆಗಳ ತರಬೇತಿಯು ವಿದ್ಯಾರ್ಥಿಗಳಿಗೆ ರಾಜ್ಯ, ದೇಶ ಮತ್ತು ಜಾಗತಿಕ ಮಟ್ಟದಲ್ಲಿ ಉತ್ತಮ ಉದ್ಯೋಗ ಪಡೆಯಲು ಸಹಕಾರಿಯಾಗಲಿದೆ ನಮ್ಮ ಸರ್ಕಾರವು ಈಗಾಗಲೇ ಕೈಗೊಂಡಿರುವ ಹೂಡಿಕೆ ಸ್ನೇಹಿ ವಾತಾವರಣಕ್ಕೆ ಪೂರಕವಾಗಲಿದೆ ಎನ್ನುವ ವಿಶ್ವಾಸ ನನಗಿದೆ ಎಂದರು.