ರೆಬೆಲ್ ಸ್ಟಾರ್ ದಿ.ಅಂಬರೀಶ್ ಮನೆಗೆ ಈಗ ಹೊಸ ಅತಿಥಿಯ ಆಗಮನವಾಗಿದೆ. ಅಂಬರೀಶ್ ಮತ್ತು ಸುಮಲತಾ ದಂಪತಿಯ ಪುತ್ರ ಅಭಿಷೇಕ್ ಅವರ ಪತ್ನಿ ಅವಿವಾ ಬಿದ್ದಪ್ಪ ಇಂದು ಬೆಳಗ್ಗೆ 8.30ರ ಸುಮಾರಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಹಾಗು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಆಪ್ತಮೂಲಗಳು ತಿಳಿಸಿವೆ.
ಕೆಲವು ತಿಂಗಳ ಹಿಂದೆ ಅಭಿಷೇಕ್ ಅಂಬರೀಶ್ ಅವರ ಜೆ.ಪಿ.ನಗರದ ನಿವಾಸದಲ್ಲಿ ಆಪ್ತರು ಹಾಗು ಚಿತ್ರರಂಗದ ಸ್ನೇಹಿತರ ಸಮ್ಮುಖದಲ್ಲಿ ಅವಿವಾ ಅವರ ಸೀಮಂತ ಶಾಸ್ತ್ರ ನಡೆದಿತ್ತು.
2023 ಜೂನ್ 7ರಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಂಬರೀಶ್ ಅವರ ಏಕೈಕ ಪುತ್ರ ಅಭಿಷೇಕ್ ಹಾಗೂ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಪುತ್ರಿ ಅವಿವಾ ಬಿದ್ದಪ್ಪ ಮದುವೆ ನಡೆದಿತ್ತು. ಸೂಪರ್ ಸ್ಟಾರ್ ರಜನಿಕಾಂತ್, ಮೆಗಾ ಸ್ಟಾರ್ ಚಿರಂಜೀವಿ, ಮೋಹನ್ ಬಾಬು, ಸೇರಿದಂತೆ ದೊಡ್ಡ ದೊಡ್ಡ ರಾಜಕೀಯ ಗಣ್ಯರು ಅದ್ಧೂರಿ ಮದುವೆಗೆ ಸಾಕ್ಷಿಯಾಗಿದ್ದರು.