ಬೆಂಗಳೂರು: ಆಪ್ರಾಪ್ತ ವಯಸ್ಕರ ಜೊತೆ ಲೈಂಗಿಕ ಸಂಪರ್ಕ ನಡೆಸಿ ಬಳಿಕ ಅವರ ಸಮ್ಮತಿಯ ಮೇರೆಗೆ ಸಂಬಂಧವೇರ್ಪಟ್ಟಿತ್ತು ಎಂದು ಹೇಳಿದರೆ ಅದನ್ನು ಒಪ್ಪಲು ಸಾಧ್ಯವಿಲ್ಲ. ಇದೂ ಕೂಡ ಅಪರಾಧವೇ ಎಂದು ಹೈಕೋರ್ಟ್ ಜಾಮೀನು ಅರ್ಜಿಯೊಂದರ ವಿಚಾರಣೆ ವೇಳೆ ಮಹತ್ವದ ಆದೇಶ ಹೊರಡಿಸಿದೆ.
ಬೆಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಪಿ.ಯು ಓದುತ್ತಿರುವ 16 ವರ್ಷದ ಬಾಲಕಿ 2019ರ ನವೆಂಬರ್ 28ರಂದು ತನ್ನ ಪ್ರಿಯಕರ ಕೃಷ್ಣ ಎಂಬಾತನೊಂದಿಗೆ ಕೇರಳದ ತಿರುನೆಲ್ಲಿಯ ಮನೆಗೆ ಹೋಗಿದ್ದಳು. ಆಕೆಯ ತಂದೆ ತಮ್ಮ ಮಗಳು ನಾಪತ್ತೆಯಾಗಿದ್ದಾಳೆ ಎಂದು ಮರುದಿನ ಗಿರಿನಗರ ಠಾಣೆ ಪೊಲೀಸರಿಗೆ ದೂರು ಸಲ್ಲಿಸಿದ್ದರು. ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ನ್ಯಾಯಾಲಯದ ಎದುರು ಹಾಜರುಪಡಿಸಿದ್ದರು. ಜತೆಗೆ ಯುವಕನ ವಿರುದ್ಧ ಪೋಕ್ಸೊ ಕಾಯ್ದೆ ಅಡಿ ಅತ್ಯಾಚಾರ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಜೈಲು ಪಾಲಾದ ಯುವಕ ಜಾಮೀನು ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಆದರೆ ಜಾಮೀನು ಸಿಕ್ಕಿರಲಿಲ್ಲ. ಬಳಿಕ ಜಾಮೀನು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ. ಆರೋಪಿ ಯುವಕನ ಪರ ವಕೀಲರು ವಾದಿಸಿ, ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಸಮ್ಮತಿಯ ಮೇರೆಗೆ ಮನೆ ಬಿಟ್ಟು ಹೋಗಿದ್ದರು. ದಾಖಲೆಗಳ ಪ್ರಕಾರ 16.2 ವರ್ಷ ತುಂಬಿರುವ ಬಾಲಕಿ ಎಲ್ಲಿಯೂ ತನ್ನ ಮೇಲೆ ಅತ್ಯಾಚಾರ ನಡೆದಿದೆ ಅಥವಾ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆದಿದೆ ಎಂದು ಹೇಳಿಲ್ಲ. ಆರೋಪಿಯ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಹೀಗಾಗಿ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದ್ದರು.
ಮನವಿ ತಿರಸ್ಕರಿಸಿರುವ ಹೈಕೋರ್ಟ್, ಪೋಕ್ಸೊ ಕಾಯ್ದೆ ಪ್ರಕಾರ 18 ವರ್ಷಕ್ಕಿಂತ ಚಿಕ್ಕ ವಯಸ್ಸಿನವರನ್ನು ಅಪ್ರಾಪ್ತರೆಂದೇ ಪರಿಗಣಿಸಲಾಗುತ್ತದೆ. ಬಾಲಕಿಗೆ 16.2 ವರ್ಷವಷ್ಟೇ ವಯಸ್ಸಾಗಿರುವುದರಿಂದ ಒಪ್ಪಿತ ಲೈಂಗಿಕ ಸಂಬಂಧವನ್ನು ಚರ್ಚಿಸುವ ಅಗತ್ಯವೇ ಉದ್ಭವಿಸುವುದಿಲ್ಲ. ವೈದ್ಯಕೀಯ ವರದಿಗಳ ಪ್ರಕಾರ ಬಾಲಕಿ ಲೈಂಗಿಕ ಕ್ರಿಯೆಗೆ ಒಳಗಾಗಿರುವುದು ಕಂಡು ಬಂದಿದೆ. ಹೀಗಾಗಿ ಆರೋಪಿ ಯುವಕನಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ತಿರಸ್ಕರಿಸಿದೆ.