ಬೆಂಗಳೂರು : ಕಾಂಗ್ರೆಸ್ - ಜೆಡಿಎಸ್ ದೋಸ್ತಿ ಪಕ್ಷಗಳ ಶಾಸಕರನ್ನು ಸೆಳೆಯುವ ಆಪರೇಷನ್ ಕಮಲಕ್ಕೆ ಈ ಬಾರಿ ಬಿಜೆಪಿಯ ಹೈಕಮಾಂಡೇ ಸಾರಥ್ಯವಹಿಸಿದೆ ಎಂದು ಹೇಳಲಾಗುತ್ತಿದೆ.
ಈವರೆಗೆ ರಾಜ್ಯ ಬಿಜೆಪಿ ನಾಯಕರ ಮುಂದಾಳತ್ವದಲ್ಲಿ ನಡೆದ ಆಪರೇಷನ್ ಕಮಲದ ಪ್ರಯತ್ನಗಳು ಹಲವು ಬಾರಿ ವಿಫಲವಾಗಿದ್ದರಿಂದ ಸಾಕಷ್ಟು ಮುಜುಗರ ಅನುಭವಿಸಿದ್ದ ಪಕ್ಷವು, ಈ ಸಾರಿ ಸದ್ದಿಲ್ಲದೇ ನಡೆಯುತ್ತಿರುವ ಆಪರೇಷನ್ ಕಮಲದ ಚಟುವಟಿಕೆಗಳನ್ನು ಹೈಕಮಾಂಡ್ ಮಟ್ಟದಲ್ಲಿಯೇ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ದೆಹಲಿಯಿಂದಲೇ ರಾಜ್ಯದ ಕಾಂಗ್ರೆಸ್ ಮತ್ತು ಜೆಡಿಎಸ್ ಅತೃಪ್ತ ಶಾಸಕರನ್ನು ಸಂಪರ್ಕಿಸಿ ಕಮಲಕ್ಕೆ ಸೆಳೆಯುವ ಕಸರತ್ತು ನಡೆದಿದೆ ಎನ್ನಲಾಗುತ್ತಿದೆ. ದಿಢೀರನೆ ಆನಂದ್ ಸಿಂಗ್ ಮತ್ತು ರಮೇಶ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿಂದೆ ಬಿಜೆಪಿ ಹೈಕಮಾಂಡ್ನ ತಂತ್ರಗಾರಿಕೆ ಇರಬಹುದೆಂದು ರಾಜಕೀಯವಾಗಿ ವಿಶ್ಲೇಷಣೆ ಮಾಡಲಾಗುತ್ತಿದೆ.
ಬಿಜೆಪಿಯ ಹೈಕಮಾಂಡ್ ಜತೆಗೆ ಆರ್ಎಸ್ಎಸ್ ಸಹ ಆಪರೇಷನ್ ಕಮಲದ ಚಟುವಟಿಕೆಗಳಲ್ಲಿ ರಹಸ್ಯವಾಗಿ ತೆರೆಯಮರೆಯಲ್ಲಿ ಭಾಗಿಯಾಗಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಸ್ವಲ್ಪವೂ ಸುಳಿವು ಸಿಗದ ಹಾಗೆ ಅತೃಪ್ತ ಶಾಸಕರಿಗೆ ಗಾಳ ಹಾಕಲಾಗುತ್ತಿದೆ. ಅದರ ಪರಿಣಾಮ ಶಾಸಕ ಆನಂದ್ ಸಿಂಗ್ ಮತ್ತು ರಮೇಶ ಜಾರಕಿಹೊಳಿ ರಾಜೀನಾಮೆ ಸಲ್ಲಿಕೆ ಮಾಡಿರುವುದು ತಿಳಿದುಬಂದಿದೆ. ಮೈತ್ರಿ ಸರ್ಕಾರ ಬೀಳುವಷ್ಟು ಶಾಸಕರ ರಾಜೀನಾಮೆಯನ್ನು ಹಂತ ಹಂತವಾಗಿ ಕೊಡಿಸುವ ತಂತ್ರಗಾರಿಕೆ ಆಪರೇಷನ್ ಕಮಲದ ರೂವಾರಿಗಳು ಹೆಣೆದಿದ್ದಾರೆ ಎನ್ನಲಾಗಿದೆ.
ಅತೃಪ್ತ ಶಾಸಕರಾದ ನಾಗೇಂದ್ರ, ಮಹೇಶ್ ಕುಮಟಳ್ಳಿ, ಶ್ರೀಮಂತ್ ಪಾಟೀಲ್, ಪ್ರತಾಪಗೌಡ ಪಾಟೀಲ್, ಶಿವರಾಮ್ ಹೆಬ್ಬಾರ್, ಬಿ ಸಿ ಪಾಟೀಲ್ ಅಲ್ಲದೇ ಜೆಡಿಎಸ್ ಶಾಸಕರಿಗೂ ಗಾಳ ಹಾಕಲಾಗಿದೆ ಎನ್ನಲಾಗುತ್ತಿದೆ. ರಾಜ್ಯ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ವಿಶ್ವನಾಥ್, ಶಾಸಕರಾದ ನಾರಾಯಣಗೌಡ ಸೇರಿ ಐದಾರು ಜಾತ್ಯಾತೀತ ಜನತಾದಳ ಶಾಸಕರ ಪಟ್ಟಿಯನ್ನ ಬಿಜೆಪಿ ಸಿದ್ಧಪಡಿಸಿದೆ ಎಂದು ಹೇಳಾಗುತ್ತಿದೆ.
ಆಪರೇಷನ್ ಕಮಲದ ಕುರಿತು ಬಿಜೆಪಿ ನಾಯಕರಿಗೂ ಸಹ ಮಾಹಿತಿ ತಿಳಿಯದಂತೆ ಎಚ್ಚರಿಕೆ ವಹಿಸಲಾಗಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರಿಗೆ ಮಾತ್ರ ಮಾಹಿತಿ ತಿಳಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಳೆದ ಸಾರಿ ಬಿಜೆಪಿ ನಾಯಕರಿಂದಲೇ ಮಾಹಿತಿ ಸೋರಿ ಶಾಸಕರನ್ನು ಸೆಳೆಯುವ ಯತ್ನಕ್ಕೆ ಹಿನ್ನೆಡೆಯಾಗಿದ್ದರ ಅನುಭವದ ಹಿನ್ನೆಲೆ ಹೆಚ್ಚಿನ ರಹಸ್ಯ ಕಾಪಾಡಲಾಗುತ್ತಿದೆ.
ಆರೋಪ ಬರದಂತೆ ಆಪರೇಷನ್..!
ಈ ಹಿಂದೆ ನಡೆದ ಆಪರೇಷನ್ ಕಮಲದ ಪ್ರಕ್ರಿಯೆಯಲ್ಲಿ ಬಿಜೆಪಿಯ ಕೈವಾಡ ಇರುವುದು ಗೋಚರವಾಗುವ ಹಾಗೆ ಇತ್ತು. ಈ ಬಾರಿ ಆಪರೇಷನ್ನಲ್ಲಿ ಶಾಸಕರ ರಾಜೀನಾಮೆಗೂ ಬಿಜೆಪಿಗೂ ಯಾವುದೇ ಸಂಬಂಧವೇ ಇಲ್ಲದ ಹಾಗೆ ವರ್ತಿಸಲಾಗುತ್ತಿದೆ. ಶಾಸಕ ಆನಂದ್ ಸಿಂಗ್ ತಮ್ಮ ರಾಜೀನಾಮೆಗೆ ಜಿಂದಾಲ್ ಭೂಮಿ ವಿವಾದ ಕಾರಣವೆಂದು ತಿಳಿಸಿದ್ದಾರೆ. ರಮೇಶ್ ಜಾರಕಿಹೊಳಿ ಅವರ ರಾಜೀನಾಮೆಗೆ ಸಚಿವ ಡಿ ಕೆ ಶಿವಕುಮಾರ್ ಬೆಳಗಾವಿ ಜಿಲ್ಲೆಯಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ಕಾರಣವೆಂದು ಬಿಂಬಿಸಲಾಗಿದೆ.
ಅತೃಪ್ತರಿಂದ ಏಕಕಾಲದಲ್ಲಿ ರಾಜೀನಾಮೆ ಕೊಡಿಸುವ ಬದಲು ಹಂತ ಹಂತವಾಗಿ ರಾಜೀನಾಮೆ ಕೊಡಿಸಿ ಕಾನೂನು ತೊಂದರೆ ಬರದಂತೆ ಗಮನ ವಹಿಸಲಾಗಿದೆ. ಪಕ್ಕಾ ರಾಜಕೀಯ ತಂತ್ರಗಾರಿಕೆ ರೂಪಿಸಿ ಆಪರೇಷನ್ ಚಟುವಟಿಕೆಯ ಜಾಡು ಸಿಗದಂತೆ ರಹಸ್ಯವಾಗಿ ಕಾರ್ಯಾಚರಣೆ ನಡೆಯುತ್ತಿರುವುದು ದೋಸ್ತಿ ಪಕ್ಷಗಳ ಅನುಭವಿ ರಾಜಕಾರಣಿಗಳಾದ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನೂ ಸಹ ಬೆಚ್ಚಿಬೀಳಿಸಿದೆ.