ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆ ಮುಗಿಯುವುದನ್ನು ಕಾಯುತ್ತಿದ್ದು, ಆ ಬಳಿಕ ಸರ್ಕಾರ ಗಟ್ಟಿ ನಿರ್ಧಾರ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಸಿಎಂ ನಿವಾಸದಲ್ಲಿ ತುರ್ತು ಸಭೆ ಬಳಿಕ ಮಾತನಾಡಿದ ಅವರು, ಪರೀಕ್ಷೆ ಮುಗಿದ ಬಳಿಕ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತೇವೆ. ಆದರೆ ಲಾಕ್ಡೌನ್ ಮಾಡುವುದಿಲ್ಲ. ಅದನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ಇಂದು ಸಭೆಯಲ್ಲಿ ಮೂರು ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ:
ಸರ್ಕಾರ ನಿಗದಿಗೊಳಿಸಿರುವ ಕೋವಿಡ್ ಚಿಕಿತ್ಸಾ ದರವನ್ನು ಒಪ್ಪದೇ ಇರುವ ಖಾಸಗಿ ಆಸ್ಪತ್ರೆಗಳಿಗೆ ಸಚಿವ ಆರ್. ಅಶೋಕ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಲು ಸರ್ಕಾರ ಸೂಚನೆ ನೀಡಿದ್ದು, ದರ ಪಟ್ಟಿಯನ್ನು ಸರ್ಕಾರ ಪ್ರಕಟಿಸಿದೆ. ಅದರಂತೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಬೇಕು. ಖಾಸಗಿ ಆಸ್ಪತ್ರೆಗಳನ್ನು ಸರ್ಕಾರ ಬೇಡಿಕೊಳ್ಳುವ ಅಗತ್ಯ ಇಲ್ಲ. ಇದು ಆದೇಶ ಎಂದು ಎಚ್ಚರಿಕೆ ನೀಡಿದರು.
ಸರ್ಕಾರದ ಸೂಚನೆಗಳನ್ನು ಖಾಸಗಿ ಆಸ್ಪತ್ರೆಗಳು ಪಾಲಿಸಲೇಬೇಕು. ಸೂಚನೆಗಳನ್ನು ಪಾಲಿಸದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಒಂದು ವರ್ಷ ಜೈಲು ಶಿಕ್ಷೆಯೂ ಆಗಬಹುದು. ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಗೆ ಒಪ್ಪಿಕೊಂಡಿವೆ. ಸೋಮವಾರ ಖಾಸಗಿ ಆಸ್ಪತ್ರೆಗಳ ಜೊತೆ ಈ ಬಗ್ಗೆ ಸಭೆ ನಡೆಸಿ ಮನವೊಲಿಸುತ್ತೇನೆ ಎಂದರು.
ಗೋವಿಂದ್ ರಾಜ್ ಮಾಡಿದ್ದು ಸರಿಯಲ್ಲ:
ಕಂಠೀರವ ಸ್ಟೇಡಿಯಂನಿಂದ ಕೋವಿಡ್ ಕೇರ್ ಸೆಂಟರ್ ಬೆಡ್ಗಳ ಸ್ಥಳಾಂತರ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸ್ಟೇಡಿಯಂನಲ್ಲಿ ಬೆಡ್ಗಳನ್ನು ಹಾಕಬಾರದೆಂದು ಗಲಾಟೆ ಮಾಡಿರುವ ಬಗ್ಗೆ ಅಧಿಕಾರಿಗಳು ತಿಳಿಸಿದ್ದಾರೆ. ಗೋವಿಂದ ರಾಜು ನಡವಳಿಕೆ ತಪ್ಪು ಎಂದು ಕಿಡಿಕಾರಿದರು.
ಸದ್ಯಕ್ಕೆ ಕಂಠೀರವ ಸ್ಟೇಡಿಯಂನಲ್ಲಿ ಚಿಕಿತ್ಸೆ ಕೊಡುವ ಸ್ಥಿತಿ ಸೃಷ್ಟಿಯಾಗಿಲ್ಲ. ಬೇರೆ ಕಡೆ ಹೆಚ್ಚುವರಿ ಬೆಡ್ಗಳ ವ್ಯವಸ್ಥೆ ಮಾಡಲಾಗಿದೆ. ಸರ್ಕಾರದ ನಿರ್ಧಾರದ ವಿರುದ್ಧ ಗೋವಿಂದ ರಾಜ್ ನಡೆದುಕೊಂಡಿರುವುದು ತಪ್ಪು. ಆ ಬಗ್ಗೆ ಅವರೊಂದಿಗೆ ಮಾತನಾಡಿದ್ದೇವೆ ಎಂದರು.
ಕೃಷಿ ವಿವಿಯಲ್ಲೂ ಸುಮಾರು 900 ಹೆಚ್ಚುವರಿ ಬೆಡ್ಗಳಿಗೆ ವ್ಯವಸ್ಥೆ ಮಾಡಲಾಗಿದೆ. ಇನ್ನು ಮುಂದೆ ಬೆಡ್ ವ್ಯವಸ್ಥೆಗಾಗಿ ಗ್ರೌಂಡ್ಗೆ ಹೋಗುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.