ಬೆಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಜೆಡಿಎಸ್ ಪಾಲಿನ ಎರಡು ಸಚಿವ ಸ್ಥಾನ ಭರ್ತಿ ಮಾಡಿ, ಉಳಿದ ನಿಗಮ ಮಂಡಳಿಗೆ ನೇಮಕ ಮಾಡುವ ಬಗ್ಗೆ ಜೆಡಿಎಲ್ಪಿ ಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಆಶ್ವಾಸನೆ ನೀಡಿದ್ದಾರೆ.
ಖಾಸಗಿ ಹೋಟೆಲ್ನಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಪಕ್ಷ ಸಂಘಟನೆಯತ್ತ ಒತ್ತು ನೀಡುವುದು, ಮೇ. 23ರ ನಂತರ ಆಪರೇಷನ್ ಕಮಲ ಎಂಬ ಸುದ್ದಿ ಹಿನ್ನೆಲೆಯಲ್ಲಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ಈ ಹಿಂದೆ ಪಕ್ಷದ ಪಾಲಿನ ಸ್ಥಾನಗಳನ್ನು ಭರ್ತಿ ಮಾಡಿಲ್ಲವೆಂದು ಜೆಡಿಎಸ್ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಭರ್ತಿಗೆ ಒತ್ತು ನೀಡಲು ಸಿಎಂ ಆಶ್ವಾಸನೆ ನೀಡಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ, ಪಕ್ಷದ ಜಿಲ್ಲಾ, ರಾಜ್ಯ ಸಂಘಟನೆ, ತಾಲೂಕು ಪದಾಧಿಕಾರಿಗಳ ನೇಮಕ ಮಾಡುವುದಾಗಿ ಸಭೆಯಲ್ಲಿ ಭರವಸೆ ನೀಡಲಾಗಿದೆ. ಜೊತೆಗೆ ಎರಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಇಂದು ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ ಸ್ಥಳೀಯ ಜೆಡಿಎಸ್ ನಾಯಕರು ಹಾಜರಿರಲು ಸೂಚಿಸಲಾಗಿದ್ದು, ಚಿಂಚೋಳಿಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಸಚಿವ ಬಂಡೆಪ್ಪ ಕಾಶಂಪೂರ್ ಭಾಗಿಯಾಗಲಿದ್ದಾರೆ. ಕುಂದಗೋಳ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ವೇಳೆ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಎಸ್.ಕೋನರೆಡ್ಡಿ ಭಾಗಿಯಾಗಲಿದ್ದಾರೆ.
ಪಕ್ಷ ಸಂಘಟನೆ ಹಿನ್ನೆಲೆ ರಾಜ್ಯ ಪದಾಧಿಕಾರಿಗಳ ಬದಲಾವಣೆ ಕುರಿತು ಸಭೆಯಲ್ಲಿ ಚರ್ಚೆ ನಡೆದಿದ್ದು, ಮೇ. 7ರಂದು ರಾಜ್ಯ ಪದಾಧಿಕಾರಿಗಳ ನೇಮಕ ಕುರಿತು ಸಭೆ ನಡೆಸಲು ನಿರ್ಧರಿಸಲಾಗಿದೆ. ಜೆಡಿಎಲ್ಪಿ ಸಭೆಯಲ್ಲಿ ಮಂಡ್ಯ ಲೋಕಸಭೆ ಚುನಾವಣೆ ವಿಚಾರ ಚರ್ಚೆಗೆ ಬಂದಿದ್ದು, ಮಂಡ್ಯದಲ್ಲಿ ನಿಖಿಲ್ ಗೆಲ್ಲುತ್ತಾರೆ. ಯಾವುದೇ ಸಂಶಯ ಬೇಡ ಅಂತ ಸಭೆಗೆ ದೇವೇಗೌಡರು ತಿಳಿಸಿದ್ದಾರೆ ಎನ್ನಲಾಗಿದೆ.
ಇನ್ನು ಮೇ 23ರ ನಂತರ ಬಿಜೆಪಿ ಮುಖಂಡರು ಜೆಡಿಎಸ್ ಶಾಸಕರಿಗೆ ಮಂತ್ರಿ ಸ್ಥಾನ ಸೇರಿದಂತೆ ವಿವಿಧ ಆಮಿಷಗಳನ್ನು ಒಡ್ಡಲಿದ್ದಾರೆ. ಈ ರೀತಿಯ ಯಾವುದೇ ಆಮಿಷ ಒಡ್ಡಿದರೆ ತಕ್ಷಣ ನನ್ನ ಗಮನಕ್ಕೆ ತನ್ನಿ. ನಾನು ನಿಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತೇನೆ. ಬಿಜೆಪಿ ಅವರ ಮಾತು ನಂಬಿ ದುಡುಕಿನ ನಿರ್ಧಾರ ಕೈಗೊಳ್ಳಬೇಡಿ. ಬಿಜೆಪಿ ಅವರಿಂದ ಸರ್ಕಾರ ರಚಿಸಲು ಸಾಧ್ಯವಿಲ್ಲ. ಬಿಜೆಪಿ ಅವರ ಮಾತು ನಂಬಿ ನೀವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ತ್ರಿಶಂಕು ಪರಿಸ್ಥಿತಿ ಅನುಭವಿಸಬೇಕಾಗುತ್ತದೆ. ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳುವುದು ನಮಗೆ ಗೊತ್ತಿದೆ. ಯಾವುದೇ ಜೆಡಿಎಸ್ನ ಶಾಸಕರು, ಸಚಿವರು ತಪ್ಪು ನಿರ್ಧಾರ ಕೈಗೊಳ್ಳಬೇಡಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.