ಬೆಂಗಳೂರು: ಲಾಕ್ ಡೌನ್ ಹಿನ್ನೆಲೆ ಸ್ಥಗಿತಗೊಳಿಸಿರುವ ರಾಜ್ಯದ ಎಲ್ಲಾ ನ್ಯಾಯಾಲಯಗಳ ಭೌತಿಕ ಕಾರ್ಯಕಲಾಪಗಳನ್ನು ಒಂದು ವಾರದೊಳಗೆ ಪುನರಾರಂಭಿಸುವಂತೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಮುಖ್ಯ ನ್ಯಾಯಮೂರ್ತಿಗಳಿಗೆ ಒತ್ತಾಯಿಸಿದೆ.
ಈ ಕುರಿತು ವಕೀಲರ ಪರಿಷತ್ತಿನ ಅಧ್ಯಕ್ಷ ಜೆ. ಎಂ. ಅನಿಲ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶಾದ್ಯಂತ ಅನ್ ಲಾಕ್ 4 ಜಾರಿಯಾಗಿದ್ದು, ಬಹುತೇಕ ಎಲ್ಲ ಚಟುವಟಿಕೆಗಳು ಆರಂಭವಾಗಿವೆ. ಸರ್ಕಾರಿ ಕಚೇರಿಗಳು ಸಹ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ, ನ್ಯಾಯಾಲಯಗಳ ಕಲಾಪ ಇನ್ನೂ ಆರಂಭವಾಗಿಲ್ಲ. ಹೀಗಾಗಿ ಮುಖ್ಯ ನ್ಯಾಯಮೂರ್ತಿಗಳು ತಕ್ಷಣವೇ ಪೂರ್ಣ ಪ್ರಮಾಣದಲ್ಲಿ ನ್ಯಾಯಾಲಯಗಳ ಕಾರ್ಯಕಲಾಪಕ್ಕೆ ಆದೇಶಿಸಬೇಕು ಎಂದು ಆಗ್ರಹಿಸಿದರು.
ಲಾಕ್ ಡೌನ್ ನಿಂದಾಗಿ ನ್ಯಾಯಾಂಗದ ಮೇಲೆ ಪ್ರತಿಕೂಲ ಪರಿಣಾಮವಾಗಿದೆ. ಬಾಕಿ ಪ್ರಕರಣಗಳ ವಿಚಾರಣೆ ಇನ್ನಷ್ಟು ವಿಳಂಬವಾಗಿದ್ದು, ವಿಚಾರಣಾ ಹಂತದಲ್ಲಿರುವ ಪ್ರಕರಣಗಳು ಬಹುತೇಕ ಸ್ಥಬ್ಧವಾಗಿದೆ. ಕೋರ್ಟ್ ಕಲಾಪಗಳನ್ನು ವರ್ಚುಯಲ್ ಮೂಲಕ ನಡೆಸುತ್ತಿರುವ ಕೆಲವೇ ರಾಜ್ಯಗಳಲ್ಲಿ ಕರ್ನಾಟಕವೂ ಸಹ ಒಂದಾಗಿದೆ. ಆದರೆ, ಇದೀಗ ಮಾಮೂಲಿಯಂತೆ ಕೋರ್ಟ್ ಕಲಾಪ ನಡೆಸಲು ವಕೀಲ ಸಮೂಹ ಕೋರಿದ್ದು, ಅದಕ್ಕೆ ಮುಖ್ಯ ನ್ಯಾಯಮೂರ್ತಿ ಸ್ಪಂದಿಸುತ್ತಾರೆಂಬ ವಿಶ್ವಾಸವಿದೆ ಎಂದು ಅನಿಲ್ ಕುಮಾರ್ ಹೇಳಿದರು.