ಬೆಂಗಳೂರು: ಪ್ರೊಫೆಸರ್ ಕೆ.ಎಸ್. ಭಗವಾನ್ ಮುಖಕ್ಕೆ ಮಸಿ ಬಳಿದಿದ್ದ ಮೀರಾ ಅವರ ವಕೀಲಿಕೆ ಸನ್ನದು ರದ್ದುಪಡಿಸುವಂತೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್ಬಿಸಿ)ಗೆ ಶಿಫಾರಸು ಮಾಡಲಾಗಿದೆ.
ಕೋರ್ಟ್ ಆವರಣದಲ್ಲಿ ನಡೆದಿದ್ದ ಘಟನೆ ಸಂಬಂಧ ವಿಚಾರಣೆ ನಡೆಸಿ ವರದಿ ನೀಡುವಂತೆ ಕೆಎಸ್ಬಿಸಿ ಉಪಸಮಿತಿ ರಚಿಸಿತ್ತು. ಬಾರ್ ಕೌನ್ಸಿಲ್ ಉಪಸಮಿತಿ ಇದೀಗ ವರದಿ ನೀಡಿದ್ದು, ಶಿಸ್ತು ವಿಚಾರಣೆ ಮುಗಿಯುವವರೆಗೆ ಮೀರಾ ಅವರ ವಕೀಲಿಕೆ ಸನ್ನದು ಅಮಾನತು ಮಾಡುವಂತೆ ಶಿಫಾರಸು ಮಾಡಿದೆ.
ಪ್ರಕರಣದ ವಿಚಾರಣೆ ನಡೆಸಲು ಕೆಎಸ್ಬಿಸಿ ಇತ್ತೀಚೆಗೆ ಸದಸ್ಯರಾದ ಎನ್.ಶಿವಕುಮಾರ್, ಎಂ.ದೇವರಾಜ, ಎಂ. ಎನ್.ಮಧುಸೂದನ್ ಅವರನ್ನು ಒಳಗೊಂಡ ಉಪಸಮಿತಿಯನ್ನು ರಚಿಸಿತ್ತು.
ಹಿಂದೂ ಧರ್ಮದ ಬಗ್ಗೆ ಹಗುರವಾಗಿ ಮಾತನಾಡಿದರು ಎಂಬ ಕಾರಣಕ್ಕೆ ಸಾಹಿತಿ ಪ್ರೊ. ಕೆ.ಎಸ್ ಭಗವಾನ್ ವಿರುದ್ಧ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿತ್ತು. ಈ ಪ್ರಕರಣದ ವಿಚಾರಣೆಗೆಂದು ಫೆ.4ರಂದು ನಗರದ ಎಸಿಎಂಎಂ ನ್ಯಾಯಾಲಯಕ್ಕೆ ಆಗಮಿಸಿದ್ದ ಭಗವಾನ್ ವಾಪಸ್ ಆಗುವ ಸಂದರ್ಭದಲ್ಲಿ ವಕೀಲೆ ಮೀರಾ ಮುಖಕ್ಕೆ ಮಸಿ ಬಳಿದಿದ್ದರು.
ಓದಿ: ತೈಲ ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ಕಾರಣವಲ್ಲ: ಡಿಸಿಎಂ ಲಕ್ಷ್ಮಣ ಸವದಿ
ವಕೀಲೆಯ ಈ ಕೃತ್ಯಕ್ಕೆ ಬೆಂಗಳೂರು ವಕೀಲರ ಸಂಘ ಸೇರಿದಂತೆ ಹಲವು ಸಾಹಿತಿಗಳು, ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಓರ್ವ ನ್ಯಾಯವಾದಿಯಾಗಿ ಮೀರಾ ನಡೆದುಕೊಂಡ ರೀತಿ ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದವು. ಆದರೆ, ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದ ಮೀರಾ, ಹಿಂದೂ ಧರ್ಮದ ಬಗ್ಗೆ ಭಗವಾನ್ ಹಗುರವಾಗಿ ಮಾತನಾಡಿದ್ದು ಸರಿಯಲ್ಲ ಎಂದಿದ್ದರು.