ಬೆಂಗಳೂರು: ಯುನಿಫೈಡ್ ಕಾಲೇಜ್ ಮ್ಯಾನೇಜ್ಮೆಂಟ್ ಸಿಸ್ಟಮ್ ಅಡಿಯಲ್ಲಿ ಪದವಿ ಕಾಲೇಜುಗಳ ಅಡ್ಮಿಷನ್ ನಡೆಯಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಇಂದು ಉಪ ಕುಲಪತಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈಗಾಗಲೇ ಜುಲೈ 15ರಿಂದ ಪದವಿ ಕೋರ್ಸ್ಗಳಿಗೆ ಅಡ್ಮಿಷನ್ ಪೋರ್ಟಲ್ ಸಿದ್ಧವಾಗಲಿದೆ. ರಾಷ್ಟ್ರೀಯ ಶಿಕ್ಷಣ ನೀತಿಯೂ ಈ ಬಾರಿ ಅನುಷ್ಠಾನ ಆಗುತ್ತಿರುವ ಹಿನ್ನೆಲೆಯಲ್ಲಿ ಅಕಾಡೆಮಿಕ್ ಫ್ರೇಂ ವರ್ಕ್ ಸಿದ್ಧಪಡಿಸಿ ವರದಿ ಕೊಡಬೇಕು ಎಂದು ಹೇಳಿದರು.
ಮುಂದಿನ ಎರಡು ವರ್ಷ ಶೈಕ್ಷಣಿಕ ಕ್ಯಾಲೆಂಡರ್ ನಿಶ್ಚಯ ಮಾಡಿದ್ದೇವೆ. ಅಕ್ಟೋಬರ್ ಮೊದಲ ವಾರದಲ್ಲಿ ಹೊಸ ಪದವಿ ಕೋರ್ಸ್ ಗಳನ್ನು ಪ್ರಾರಂಭಿಸುವುದರ ಬಗ್ಗೆ ಚರ್ಚೆ ಮಾಡಿದ್ದೇವೆ. ಯಾವ ಯೂನಿವರ್ಸಿಟಿಗಳಲ್ಲಿ ಪದವಿ ಕೋರ್ಸ್ಗಳಿಗೆ ಪರೀಕ್ಷೆ ನಡೆದಿಲ್ಲವೋ ಅವುಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇವೆ. ರೆಗ್ಯುಲರ್ ಸೆಮಿಸ್ಟರ್ ಕೂಡ ರೆಗ್ಯುಲರ್ ಟೈಂ ಟೇಬಲ್ ಪ್ರಕಾರವೇ ನಡೆಸಬೇಕಾ ಎಂಬ ಬಗ್ಗೆ ಕೂಡ ಚರ್ಚೆ ಮಾಡಿದ್ದೇವೆ ಎಂದರು.
ಯಾವುದೇ ಸಂಬಂಧ ಇಲ್ಲ:
ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯಕ್ಕೆ ಹಂಗಾಮಿ ಉಪ ಕುಲಪತಿ ನೇಮಕ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ, ಇದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಇದು ರಾಜ್ಯಪಾಲರಿಂದ ಆದ ನೇಮಕ. ಕಾನೂನು ಚೌಕಟ್ಟು ಬಿಟ್ಟು ಯಾರೂ ಏನೂ ಮಾಡುವುದಕ್ಕೆ ಆಗುವುದಿಲ್ಲ. ಇದಕ್ಕೂ ನನಗೂ ಯಾವುದೇ ಸಂಬಂಧವೇ ಇಲ್ಲ. ಎಲ್ಲವೂ ಕೂಡ ಪಾರದರ್ಶಕವಾಗಿ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದರು. ರಾಜೀವ್ ಗಾಂಧಿ ಯುನಿವರ್ಸಿಟಿಯಲ್ಲಿ ಯಾವುದೂ ವೈಯಕ್ತಿಕ ವಿಚಾರಗಳು ಬರುವುದಿಲ್ಲ. ಕಾನೂನು ಪ್ರಕಾರವೇ ಎಲ್ಲ ನಡೆದಿದೆ. ಸಂಬಂಧಪಟ್ಟ ಸಚಿವರನ್ನೇ ಕೇಳಿ ಎಂದು ಅಶ್ವತ್ಥ್ ನಾರಾಯಣ್ ಹೇಳಿದರು.
ಬಿಜೆಪಿಯಲ್ಲಿ ಬಣ ಇಲ್ಲ:
ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸರ್ಕಾರದ ನೀತಿ, ಸುಧಾರಣೆ ಕುರಿತು ಪಕ್ಷದ ಶಾಸಕರು ಸಲಹೆ ಸೂಚನೆ ಕೊಡಲಿದ್ದಾರೆ. ಅರುಣ್ ಸಿಂಗ್ ಅವರು ಎಲ್ಲರ ಜೊತೆಗೆ ಸಭೆ ಮಾಡುತ್ತಾರೆ. ಇದರಲ್ಲೇನೂ ವಿಶೇಷತೆ ಇಲ್ಲ. ಇರುವವರೆಲ್ಲ ಬಿಜೆಪಿಯವರೇ. ಇಲ್ಲಿ ಯಾವುದೇ ಬಣಗಳಿಗೆ ಅವಕಾಶ ಇಲ್ಲ. ನಮ್ಮಲ್ಲಿ ಬಿಜೆಪಿ ಬಣ ಬಿಟ್ಟರೆ ಯಾರ ಅಶ್ರಯದ ಬಣವೂ ಇಲ್ಲ. ಯಾರೇ ಗುಂಪು ಮಾಡಿಕೊಂಡರೂ ಅದಕ್ಕೆ ಮನ್ನಣೆ ಇಲ್ಲ ಎನ್ನುವುದನ್ನು ಖಡಾಖಂಡಿತವಾಗಿ ಹೇಳಬಹುದು ಎಂದರು.