ಬೆಂಗಳೂರು: ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯವು 2023 ನೇ ಸಾಲಿನ ವಿವಿಧ ಸ್ನಾತಕೋತ್ತರ, ಪದವಿ, ಪಿಜಿ ಡಿಪ್ಲೋಮಾ, ಡಿಪ್ಲೋಮಾ ಪ್ರಮಾಣ ಪತ್ರ ಮಟ್ಟದ ಕಾರ್ಯಕ್ರಮಗಳ ಪ್ರವೇಶಾತಿ ಪ್ರಾರಂಭಗೊಂಡಿದೆ. ವಿದ್ಯಾರ್ಥಿಗಳು ಸಕಾಲದಲ್ಲಿ ಅರ್ಜಿ ಸಲ್ಲಿಸಿ ಪ್ರವೇಶಾತಿ ಪಡೆಯಬಹುದು ಎಂದು ಇಗ್ನೋ ಬೆಂಗಳೂರು ಪ್ರಾದೇಶಿಕ ಕೇಂದ್ರದ ಹಿರಿಯ ನಿರ್ದೇಶಕಿ ಡಾ.ಎಸ್.ರಾಧಾ ಮಾಹಿತಿ ನೀಡಿದ್ದಾರೆ.
ಇಂದು ಶಾಂತಿನಗರದಲ್ಲಿರುವ ಪ್ರಾದೇಶಿಕ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ದೈಹಿಕ ಅಶಕ್ತ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಮತ್ತು ಶುಲ್ಕ ಮರು ಪಾವತಿ ಸೌಲಭ್ಯ ಪಡೆಯಲು ಅವಕಾಶವಿದೆ ಎಂದು ಅವರು ಹೇಳಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪಂಗಡ (ಎಸ್ಸಿ/ಎಸ್ಟಿ ವಿದ್ಯಾರ್ಥಿಗಳು ಸಾಮಾನ್ಯ ಬಿಕಾಂ, ಬಿಎ ಮತ್ತು ಬಿಎಸ್ಟಿಗೆ ಅರ್ಜಿ ಸಲ್ಲಿಸುವಾಗ ಪರಿಶಿಷ್ಟ ಜಾತಿ ಉಪಜಾತಿ ಯೋಜನೆ (SCSP) ಮತ್ತು ಬುಡಕಟ್ಟು (TSP) ಅಡಿ ಶುಲ್ಕ ವಿನಾಯಿತಿ ಪಡೆಯಬಹುದು. ಅರ್ಹ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಕೂಡಾ ಸಲ್ಲಿಸಬಹುದು ಮತ್ತು ವಿದ್ಯಾ ಲಕ್ಷ್ಮಿ ಪೋರ್ಟಲ್ ಮೂಲಕ ಶಿಕ್ಷಣ ಸಾಲ ಸೌಲಭ್ಯವನ್ನು ಸಹ ಪಡೆಯಬಹುದು ಎಂದು ಮಾಹಿತಿ ನೀಡಿದರು.
ಡಿಜಿಟಲ್ ಮೀಡಿಯಾ, ಎಲೆಕ್ಟ್ರಾನಿಕ್ ಮೀಡಿಯಾ, ಡೆವಲಪ್ಮೆಂಟ್ ಜರ್ನಲಿಸಂ, ಜ್ಯೋತಿಷ್ಯ, ಸೇವಾ ನಿರ್ವಹಣೆಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ, ಭೌಗೋಳಿಕಶಾಸ್ತ್ರ, ಭೌತಶಾಸ್ತ್ರ, ಅನ್ವಯಿಕ ಅಂಕಿ ಅಂಶಗಳು ಮತ್ತು ಜಿಯೋ ಇನ್ಫಾರ್ಮೆಷನ್ ಟೆಕ್ನಾಲಜಿ, ಎಂಎಸ್ಟಿ ಮತ್ತಿತರ ಉಪಯುಕ್ತ ಮತ್ತು ಉದ್ಯಮದಲ್ಲಿ ಅಗತ್ಯವಿರುವ ಕೋರ್ಸ್ಗಳನ್ನು ಪ್ರಾರಂಭಿಸಿದೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ಅನುಗುಣವಾಗಿ ತಮ್ಮಿಷ್ಟದ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಂಡು ವ್ಯಾಸಂಗ ಮಾಡಬಹುದು ಎಂದು ಹಿರಿಯ ನಿರ್ದೇಶಕಿ ಡಾ ಎಸ್ ರಾಧಾ ವಿವರಣೆ ನೀಡಿದ್ದಾರೆ.
ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು https://ignouadmission.samarth.edu.im/ ಲಿಂಗ್ ಕ್ಲಿಕ್ ಮಾಡಿ ಮತ್ತು www.ignou.ac.in ಗೆ ಭೇಟಿ ನೀಡಿ ಸಮಗ್ರ ವಿವರ ಪಡೆಯಬಹುದು. ಅರ್ಹತಾ ಷರತ್ತು, ಇತರ ವಿವರಗಳಿಗೆ http://www.ignou.ac.in/userfiles/Common-Prospectus-English.pdf ನಲ್ಲಿ ನೋಡಬಹುದು.
ಹೆಚ್ಚಿನ ಮಾಹಿತಿಗೆ 9449337272 ಗೆ ವಾಟ್ಸ್ಆ್ಯಪ್, ಎಸ್.ಎಂ.ಎಸ್ ಅಥವಾ 080- 29607272 ಗೆ ಕರೆ ಮಾಡಬಹುದು ಹಾಗೂ admissionrc13@ignou.ac.in ಗೆ ಮೇಲ್ ಮಾಡುವ ಮೂಲಕ ಮಾಹಿತಿ ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.
ಪ್ರಾದೇಶಿಕ ಸಹಾಯಕ ನಿರ್ದೇಶಕ ಡಾ. ಷಣ್ಮುಗ, ಡಾ. ಹೇಮಾಮಾಲಿನಿ, ಸಹಾಯಕ ನಿರ್ದೇಶಕಿ ಡಾ. ಕಸ್ತೂರಿ.ಪಿ ಹಾಜರಿದ್ದರು.
ಇದನ್ನೂ ಓದಿ:Banana Price: ಶ್ರಾವಣ ಮಾಸದ ಹಬ್ಬಗಳ ಋತು ಆರಂಭ: ಕೆ.ಜಿಗೆ ₹100 ದಾಟಿದ ಬಾಳೆಹಣ್ಣು!