ಬೆಂಗಳೂರು : ಬಿಬಿಎಂಪಿ ನಿರ್ಮಾಣ ಮಾಡಿರುವ ಕಣ್ಣೂರು ಬಳಿಯ ಡಾಂಬರು ಮಿಶ್ರಣ ಘಟಕ (ಹಾಟ್ ಮಿಕ್ಸ್ ಪ್ಲಾಂಟ್)ಕ್ಕೆ ಆಡಳಿತಗಾರರಾದ ಗೌರವ್ ಗುಪ್ತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ವಿಶೇಷ ಆಯುಕ್ತರಾದ(ಯೋಜನೆ) ಮನೋಜ್ ಜೈನ್, ಪಾಲಿಕೆ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಎಂ ಆರ್ ವೆಂಕಟೇಶ್, ಮುಖ್ಯ ಅಭಿಯಂತರ (ರಸ್ತೆ ಮೂಲಭೂತ ಸೌಕರ್ಯ) ಪ್ರಹ್ಲಾದ್ ಸಾಥ್ ನೀಡಿದರು.
ಘಟಕದಲ್ಲಿ ಡಾಂಬರು ಮಿಶ್ರಣ ಉತ್ಪಾದಿಸಿ ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮಕೈಗೊಳ್ಳಲಾಗಿದೆ. ಆದರೆ, ಸಮರ್ಪಕವಾಗಿ ರಸ್ತೆಗುಂಡಿ ಮುಚ್ಚದೇ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ನಿತ್ಯ ಎಷ್ಟು ಲೋಡ್ ಡಾಂಬರು ಯಾವ ವಲಯಕ್ಕೆ ಕಳುಹಿಸಲಾಗುತ್ತಿದೆ. ಯಾವ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಲಾಗುತ್ತಿದೆ. ಇದುವರೆಗೆ ಎಷ್ಟು ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಲಾಗಿದೆ, ಯಾವ ಮೆಟಿರಿಯಲ್ ಬಳಸುತ್ತಿದ್ದೀರಾ, ಅದರ ಕ್ವಾಲಿಟಿ ಮತ್ತು ಕ್ವಾಂಟಿಟಿ ಏನಿದೆ, ಇಂಜಿನಿಯರ್‌ಗಳು ನೀಡುವ ಇಂಡೆಂಟ್ ಮಾಹಿತಿಯ ರಿಜಿಸ್ಟರ್‌ನ ನಿಖರ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಾಟ್ ಮಿಕ್ಸ್ ಪ್ಲಾಂಟ್‌ನ ಸಾಮರ್ಥ್ಯವನ್ನು ಪೂರ್ಣವಾಗಿ ಸದ್ಬಳಕೆ ಮಾಡಿಕೊಂಡು, ತ್ವರಿತವಾಗಿ ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮವಹಿಸಬೇಕು. ಪ್ಲಾಂಟ್ನಿಂದ ಪ್ರತಿನಿತ್ಯ ಡಾಂಬರು ಎಲ್ಲಿಗೆ ಹೋಗುತ್ತಿದೆ ಎಂಬ ಸಂಪೂರ್ಣ ಮಾಹಿತಿ ರಿಜಿಸ್ಟರ್‌ನಲ್ಲಿ ನಮೂದಿಸಲು ಸೂಚನೆ ನೀಡಿದರು.
ಡಾಂಬರಿಗೆ ಅವಶ್ಯವಿರುವ ಮೆಟೀರಿಯಲ್ಸ್‌ನ ಎಲ್ಲಿಂದ ತರಲಾಗುತ್ತಿದೆ. ಯಾವ ಜೆಲ್ಲಿ ಬಳಕೆ ಮಾಡಲಾಗುತ್ತಿದೆ. ನಿತ್ಯ ಹೊರ ಹೋಗುವ ಡಾಂಬರು ಪ್ರಮಾಣದ ಅಳತೆಯ ರಿಜಿಸ್ಟರ್ ನಿರ್ವಹಣೆ ಮಾಡಬೇಕು. ಗುತ್ತಿಗೆದಾರರಿಂದ ಸರಿಯಾಗಿ ಕೆಲಸ ಮಾಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಜೊತೆಗೆ ಡಾಂಬರು ಕಳುಹಿಸುವ ಬಗ್ಗೆ ರಿಯಲ್ ಟೈಮ್ ಮಾಹಿತಿ ನೀಡಬೇಕು. ಯಾವ ಟ್ರಕ್ ಎಲ್ಲಿಗೆ ಕಳುಹಿಸಲಾಗುತ್ತಿದೆ, ಎಷ್ಟು ಗುಂಡಿಗಳನ್ನು ಮುಚ್ಚಲಾಗಿದೆ ಎಂಬ ಮಾಹಿತಿಯನ್ನು ಸಂಗ್ರಹಿಸಬೇಕು ಎಂದು ಸೂಚಿಸಿದರು.
ನಂತರ ಪ್ರಹ್ಲಾದ್ ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಮುಖವಾಗಿ ರಸ್ತೆ ಗುಂಡಿಗಳನ್ನು ಮುಚ್ಚಲು ಕಣ್ಣೂರು ಬಳಿ ಪಾಲಿಕೆಯ 4.5 ಎಕರೆ ಜಾಗದಲ್ಲಿ ಸುಮಾರು 7.5 ಕೋಟಿ ರೂ. ವೆಚ್ಚದಲ್ಲಿ ಡಾಂಬರು ಮಿಶ್ರಣ ಘಟಕ ಸ್ಥಾಪಿಸಲಾಗಿದೆ. ಒಂದು ಗಂಟೆಗೆ 100/120 TPH (Tonnes Per Hour) ಸಾಮರ್ಥ್ಯವುಳ್ಳ ಡಾಂಬರನ್ನು ತಯಾರಿಸಬಹುದಾಗಿದೆ. ದಿನಕ್ಕೆ 50 ರಿಂದ 60 ಟ್ರಕ್ ಡಾಂಬರನ್ನು ತಯಾರಿಸಬಹುದಾಗಿದೆ.
ಡಾಂಬರು ಮಿಶ್ರಣ ಘಟಕವು ಸಂಪೂರ್ಣ ಸ್ವಯಂಚಾಲಿತವಾಗಿದೆ. ಡಾಂಬರು ಮಿಶ್ರಣಕ್ಕೆ ಕಚ್ಚಾ ವಸ್ತುಗಳಾದ ಜಲ್ಲಿ, ಜಲ್ಲಿಪುಡಿ, ಬಿಟುಮಿನ್‌ನ ಡಾಂಬರು ಮಿಶ್ರಣಕ್ಕೆ ಅಗತ್ಯ ಪ್ರಮಾಣದಲ್ಲಿ ಪಡೆಯಲಿದೆ ಮತ್ತು ಅಗತ್ಯ ಇರುವ ವಲಯಗಳಿಗೆ ಗುತ್ತಿಗೆದಾರರನ್ನು ನೇಮಕ ಮಾಡಿ, ಕಳಿಸಲಾಗ್ತಿದೆ ಎಂದು ಮಾಹಿತಿ ನೀಡಿದರು.
ಆಡಳಿತಗಾರರು ಪ್ರತಿಕ್ರಿಯಿಸಿ, ಯಾಕೆ ಎಲ್ಲಾ ರಸ್ತೆಗಳಿಗೆ ಡಾಂಬರು ಕಳುಹಿಸುತ್ತಿಲ್ಲ. ಇರುವ ಸಾಮರ್ಥ್ಯವನ್ನು ಸಮರ್ಪಕವಾಗಿ ಬಳಸಿಕೊಂಡು ಸರಿಯಾಗಿ ಕೆಲಸ ಮಾಡಬೇಕು. ಮಳೆ, ಸಿಬ್ಬಂದಿ, ಯಂತ್ರೋಪಕರಣಗಳ ಕೊರತೆಯಿದೆ ಎಂಬ ಸಬೂಬು ಹೇಳದೆ ಸರಿಯಾಗಿ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.