ಬೆಂಗಳೂರು : ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಟಿ.ಎಂ.ವಿಜಯ ಭಾಸ್ಕರ್ ಅವರು ಬಿಬಿಎಂಪಿ ಆಡಳಿತ ಸುಧಾರಣೆ ಕುರಿತ ವರದಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಇಂದು ಸಲ್ಲಿಸಿದರು. ಸಚಿವರಾದ ಸಿ.ಸಿ.ಪಾಟೀಲ್, ಡಾ.ಸುಧಾಕರ್, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಈ ವೇಳೆ ಉಪಸ್ಥಿತರಿದ್ದರು.
ವರದಿಯಲ್ಲೇನಿದೆ?: ಆಯೋಗವು ಬಿಬಿಎಂಪಿ ವಿಕೇಂದ್ರಿಕರಣಕ್ಕೆ ಶಿಫಾರಸು ಮಾಡಿದೆ. ವಿಭಾಗೀಯ ಮಟ್ಟದಲ್ಲಿ ಸ್ಥಳೀಯ ಆಡಳಿತವನ್ನು ಸುಧಾರಿಸಲು ಮತ್ತು ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು 30 ಡೆಪ್ಯುಟಿ ಕಮಿಷನರ್ ಹುದ್ದೆಗಳನ್ನು ಸೃಷ್ಟಿಮಾಡುವಂತೆ ತಿಳಿಸಿದೆ. ನೇರ ನೇಮಕಾತಿಯಾಗುವ ಸಾಮಾನ್ಯ ವರ್ಗದ ಕೆಎಎಸ್ ಎ-ಗುಂಪಿನ ಕಿರಿಯ ವೇತನ ಶ್ರೇಣಿಯ ಮಾದರಿಯಲ್ಲಿ ಬಿಬಿಎಂಪಿಯಲ್ಲಿ ಸಹಾಯಕ ಆಯುಕ್ತರ ಹುದ್ದೆಗಳನ್ನು ಸೃಜಿಸಬಹುದು.
ಮಧ್ಯಮ-ಅವಧಿಯ ನೇಮಕಾತಿಯ ಯೋಜನೆಯನ್ನು ಸಹ ತಯಾರಿಸಬೇಕು. ಬಿಬಿಎಂಪಿ ಕಂದಾಯ ವಿಭಾಗದಲ್ಲಿ 70 ಹೆಚ್ಚುವರಿ ಕಂದಾಯ ನಿರೀಕ್ಷಕರು ಮತ್ತು 94 ಹೆಚ್ಚುವರಿ ತೆರಿಗೆ ನಿರೀಕ್ಷಕರ ಹುದ್ದೆಗಳನ್ನು ಬಿಬಿಎಂಪಿ ಸೃಜಿಸಬಹುದು ಮತ್ತು ನೇಮಕಾತಿ ಮಾಡಿಕೊಳ್ಳಬಹುದು ಎಂದು ಶಿಫಾರಸ್ಸು ಮಾಡಿದೆ. ಪ್ರತಿ 3 ವಾರ್ಡ್‌ಗಳಿಗೆ 1 ಸಹಾಯಕ ಕಂದಾಯ ಅಧಿಕಾರಿ ಹುದ್ದೆ ಇರಬಹುದು. 17 ಹೊಸ ಸಹಾಯಕ ಕಂದಾಯ ಅಧಿಕಾರಿ ಹುದ್ದೆಗಳನ್ನು ಸೃಜಿಸಬಹುದು ಮತ್ತು ಕೆಲಸದ ಹೊರೆಯ ಆಧಾರದ ಮೇಲೆ ಮರುಹಂಚಿಕೆ ಮಾಡಬಹುದು.
ಎಲ್ಲಾ ಕಂದಾಯ ನಿರೀಕ್ಷಕರನ್ನು ಮತ್ತು ತೆರಿಗೆ ನಿರೀಕ್ಷಕರನ್ನು ಕಡ್ಡಾಯವಾಗಿ ಪ್ರತಿ 5 ವರ್ಷಗಳಿಗೊಮ್ಮೆ ಅದೇ ವಲಯದೊಳಗಿನ ಮತ್ತೊಂದು ವಾರ್ಡ್‌ಗೆ ಮತ್ತು ಪ್ರತಿ 10 ವರ್ಷಗಳಿಗೊಮ್ಮೆ ಬೇರೆ ವಲಯಗಳ ಮತ್ತೊಂದು ವಾರ್ಡ್‌ಗೆ ವರ್ಗಾಯಿಸಬಹುದು. ಆಸ್ತಿ ತೆರಿಗೆ ಸಂಗ್ರಹಣೆ ಮತ್ತು ತೆರಿಗೆ ಆಕರಣೆಯನ್ನು ಹೆಚ್ಚಿಸಲು ಜಾರಿ ಕೋಶ ಒಂದನ್ನು ರಚಿಸಬಹುದು ಎಂದು ಶಿಫಾರಸು ಮಾಡಿದೆ. ಎಲ್ಲಾ 243 ವಾರ್ಡ್‌ಗಳಿಗೆ ಪ್ರತಿ ವಾರ್ಡ್‌ಗೆ 1 ಕಿರಿಯ ಸಹಾಯಕ ಅಭಿಯಂತರರ ಹುದ್ದೆ ಮತ್ತು ಎಲ್ಲಾ 243 ವಾರ್ಡ್‌ಗಳಿಗೆ ಪ್ರತಿ ವಾರ್ಡ್‌ಗೆ 1 ವರ್ಕ್ ಇನ್ಸ್‌ಪೆಕ್ಟರ್ ಹುದ್ದೆ ಇರಬಹುದು. 214 ವರ್ಕ್ ಇನ್ಸ್‌ಪೆಕ್ಟರ್ ಮತ್ತು 89 ಕಿರಿಯ/ಸಹಾಯಕ ಅಭಿಯಂತರರನ್ನು ನೇಮಕಾತಿ ಮಾಡಿಕೊಳ್ಳಬಹುದು.
ತುರ್ತು ಕಾಮಗಾರಿಗಳಿಗೆ ಬಳಸಿಕೊಳ್ಳಲು ಪ್ರತಿ ವಾರ್ಡ್ ಇಂಜಿನಿಯರ್‌ಗೆ, ಹೊಸ ವಾರ್ಡ್‌ಗಳಿಗೆ ವಾರ್ಷಿಕ ಗರಿಷ್ಠ ರೂ. 10 ಲಕ್ಷದ ವರೆಗೆ ಮತ್ತು ಕೋರ್ ವಾರ್ಡ್‌ಗಳಿಗೆ ವಾರ್ಷಿಕ ರೂ. 5 ಲಕ್ಷದವರೆಗೆ ಆವರ್ತ ನಿಧಿಯನ್ನು ಒದಗಿಸಬೇಕು. ಪ್ರತಿ ವಾರ್ಡ್‌ಗೆ ಒಬ್ಬ ಕಿರಿಯ ಆರೋಗ್ಯ ನಿರೀಕ್ಷಕರು (JHI) ಮತ್ತು ಪ್ರತಿ 1 ವಾರ್ಡ್‌ಗಳಿಗೆ ಒಬ್ಬ ಹಿರಿಯ ಆರೋಗ್ಯ ನಿರೀಕ್ಷಕರು ಇರಬಹುದು. 192 ಹೆಚ್ಚುವರಿ JHI ಹುದ್ದೆಗಳನ್ನು ಸೃಜಿಸಬಹುದು ಮತ್ತು ಭರ್ತಿ ಮಾಡಬಹುದು.
ವರದಿಯಲ್ಲಿ ತೋರಿಸಿರುವಂತೆ ಹೊಸ ಹುದ್ದೆಗಳನ್ನು ರಚಿಸದೇ 12 SHI ಹುದ್ದೆಗಳನ್ನು ಬೇರೆ ಬೇರೆ ವಲಯಗಳಿಗೆ ಮರುನಿಯೋಜನೆ ಮಾಡಬಹುದು. ವಲಯವಾರು ಕಾನೂನು ಕೋಶಗಳ ರಚನೆ (BMC ಮಾದರಿ)ಗೆ ಶಿಫಾರಸು ಮಾಡಲಾಗಿದೆ. ಸಹಾಯಕ ಕಾನೂನು ಅಧಿಕಾರಿಗಳು (ALO) ಗಳು, ಉಪ ಕಾನೂನು ಅಧಿಕಾರಿಗಳು( DLO) ಮತ್ತು ಕಾನೂನು ಅಧಿಕಾರಿ (ಕಾನೂನು ಕೋಶದ ಮುಖ್ಯಸ್ಥರು)ಗೆ ಸಹಾಯ ಮಾಡಲು 10 ಹೆಚ್ಚುವರಿ ಕಿರಿಯ ಕಾನೂನು ಅಧಿಕಾರಿ(JLO) ಹುದ್ದೆಗಳನ್ನು ಸೃಜಿಸುವ ಮೂಲಕ ಬಿಬಿಎಂಪಿ ಕೇಂದ್ರ ಕಾನೂನು ಕೋಶವನ್ನು ಬಲಪಡಿಸಬೇಕು ಎಂದು ವರದಿಯಲ್ಲಿ ಆಯೋಗ ಶಿಫಾರಸು ಮಾಡಿದೆ.
ಇದನ್ನೂ ಓದಿ: 'ಕುಮಾರಸ್ವಾಮಿ ಯಾವಾಗ ಬೇಕಾದ್ರೂ ಯೂಟರ್ನ್ ಹೊಡಿತಾರೆ': ಸಿ.ಟಿ ರವಿ ವ್ಯಂಗ್ಯ