ಬೆಂಗಳೂರು : ಪಿಎಸ್‌ಎಲ್‌ವಿ-ಸಿ57 ಮೂಲಕ ಉಡಾವಣೆಗೊಂಡ ಭಾರತದ ಮೊದಲ ಸೌರ ಬಾಹ್ಯಾಕಾಶ ವೀಕ್ಷಣಾಲಯ ಆದಿತ್ಯ-ಎಲ್1 ಶನಿವಾರ ಶ್ರೀಹರಿಕೋಟಾದಿಂದ ಉಡಾವಣೆಗೊಂಡಿದೆ. ಆದಿತ್ಯ-ಎಲ್ 1 ಸೂರ್ಯನನ್ನು ಅಧ್ಯಯನ ಮಾಡಲು 7 ವಿಭಿನ್ನ ಪೇಲೋಡ್‌ಗಳನ್ನು ಹೊತ್ತೊಯ್ದಿದೆ. ಅದರಲ್ಲಿ 4 ಪೇ ಲೋಡ್ಗಳು ಸೂರ್ಯನ ಬೆಳಕನ್ನು ವೀಕ್ಷಿಸಲಿವೆ. ಮತ್ತು 3 ಪ್ಲಾಸ್ಮಾ ಮತ್ತು ಕಾಂತೀಯ ಕ್ಷೇತ್ರಗಳಂತಹ ಇತರ ವಿಷಯಗಳು ಬಗ್ಗೆ ಅಧ್ಯಯನ ನಡೆಸಲಿವೆ.
ಆದಿತ್ಯ-ಎಲ್ 1 ಲಗ್ರಾಂಜಿಯನ್ ಪಾಯಿಂಟ್ 1ನ ಸುತ್ತ ಹಾಲೋ ಕಕ್ಷೆಯಲ್ಲಿ ಲ್ಯಾಂಡ್ ಆಗಲಿದೆ. ಇದು ಸೂರ್ಯನ ದಿಕ್ಕಿನಲ್ಲಿ ಭೂಮಿಯಿಂದ 1.5 ಮಿಲಿಯನ್ ಕಿ.ಮೀ ದೂರದ ಸ್ಥಳವಾಗಿದೆ. ಅದೇ ಸ್ಥಾನದಿಂದ ಸೂರ್ಯನ ಸುತ್ತ ಸುತ್ತಲಿದೆ ಮತ್ತು ಸೂರ್ಯನನ್ನು ನಿರಂತರವಾಗಿ ವೀಕ್ಷಿಸಲಿದೆ.
ಆದಿತ್ಯ-ಎಲ್ 1ನ ಅತಿ ದೊಡ್ಡ ಮತ್ತು ತಾಂತ್ರಿಕವಾಗಿ ಅತ್ಯಂತ ಜಟಿಲವಾದ ಕೆಲಸ ಮಾಡುವ ಪೇಲೋಡ್ ಎಂದರೆ ವಿಸಿಬಲ್ ಎಮಿಷನ್ ಲೈನ್ ಕರೋನಾಗ್ರಾಫ್/ವಿ.ಇ.ಎಲ್.ಸಿ. ಇದನ್ನು ಇಸ್ರೋದ ಸಹಯೋಗದೊಂದಿಗೆ ಸಿಲಿಕಾನ್ ಸಿಟಿಯ ಬಳಿ ಇರುವ ಹೊಸಕೋಟೆಯಲ್ಲಿರುವ ಐ.ಐ.ಎನ ಕ್ರೆಸ್ಟ್ (ವಿಜ್ಞಾನ ತಂತ್ರಜ್ಞಾನ ಸಂಶೋಧನೆ ಮತ್ತು ಶಿಕ್ಷಣ ಕೇಂದ್ರ) ಕ್ಯಾಂಪಸ್‌ನಲ್ಲಿ ಇದನ್ನು ಸಂಯೋಜಿಸಿ, ಪರೀಕ್ಷಿಸಿ ಮತ್ತು ಮಾಪನ ಮಾಡಲಾಗಿದೆ.
ವಿ.ಇ.ಎಲ್.ಸಿ ಆಂತರಿಕವಾಗಿ ನಿಗೂಢವಾದ ಕರೋನಾಗ್ರಾಫ್ ಆಗಿದೆ. ಇದರಲ್ಲಿ 40 ವಿಭಿನ್ನ ಆಪ್ಟಿಕಲ್ ಅಂಶಗಳನ್ನು (ಕನ್ನಡಿಗಳು, ಗ್ರ್ಯಾಟಿಂಗ್‌ಗಳು, ಇತ್ಯಾದಿ) ನಿಖರವಾಗಿ ಜೋಡಿಸಲಾಗಿದೆ. ಸೂರ್ಯನ ವಾತಾವರಣದ ಕರೋನಾವನ್ನು ಸಂಪೂರ್ಣ ಸೂರ್ಯಗ್ರಹಣದ ಸಮಯದಲ್ಲಿ ಮಾತ್ರ ನೋಡುತ್ತೇವೆ. ಆದರೆ ಈ ಕರೋನಗ್ರಾಫ್ ಎಲ್ಲಾ ಸಮಯದಲ್ಲೂ ಮಸುಕಾಗಿರುವ ಕರೋನಾವನ್ನು ಚಿತ್ರಿಸಲಿದೆ.
ಕರೋನಲ್ ಮಾಸ್ ಎಜೆಕ್ಷನ್‌ಗಳ ಮೂಲಕ ಡೈನಾಮಿಕ್ಸ್ ಮತ್ತು ಪ್ರಸರಣವನ್ನು ಅರ್ಥಮಾಡಿಕೊಳ್ಳುವುದು ಮತ್ತು ಕರೋನಲ್ ಹೀಟಿಂಗ್ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುವುದು ಆದಿತ್ಯ-ಎಲ್ 1ನ ಮುಖ್ಯ ಗುರಿಯಾಗಿದೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋ ಫಿಸಿಕ್ಸ್ ನ ವಿ.ಇ.ಎಲ್.ಸಿ ಪೇಲೋಡ್ ಆಪರೇಷನ್ ಸೆಂಟರ್ ಇಸ್ರೋದ ಭಾರತೀಯ ಬಾಹ್ಯಾಕಾಶ ವಿಜ್ಞಾನ ದತ್ತಾಂಶ ಕೇಂದ್ರದಿಂದ ಕಚ್ಚಾ ಡೇಟಾವನ್ನು ಸ್ವೀಕರಿಸಲಿದೆ. ವೈಜ್ಞಾನಿಕ ವಿಶ್ಲೇಷಣೆಗೆ ಸೂಕ್ತವಾಗುವಂತೆ ಅವುಗಳನ್ನು ಮತ್ತಷ್ಟು ಪ್ರಕ್ರಿಯೆಗೊಳಪಡಿಸಿ ಮತ್ತೆ ದತ್ತಾಂಶ ಕೇಂದ್ರಕ್ಕೆ ಕಳುಹಿಸಿಕೊಡಲಿದೆ.
ವಿ.ಇ.ಎಲ್.ಸಿ ಪೇಲೋಡ್ ವಿಶಿಷ್ಟವಾಗಿ ಸೌರ ಕರೋನಾವನ್ನು ಇತರ ಸೌರ ಬಾಹ್ಯಾಕಾಶ ವೀಕ್ಷಣಾಲಯಕ್ಕಿಂತ ಸೂರ್ಯನ ಹತ್ತಿರ ಹೋಗಿ ಚಿತ್ರಿಸಲಿದೆ. ಇಸ್ರೋದ ಲಿಯಾಸ್ನಿಂದ ತಯಾರಿಸಲ್ಪಟ್ಟ ಅತ್ಯಂತ ನಿಖರವಾಗಿ ಪಾಲಿಶ್ ಮಾಡಿದ ಕನ್ನಡಿ ಇದಕ್ಕೆ ಕಾರಣವಾಗಿದೆ. ಇದು ವಿ.ಇ.ಎಲ್.ಸಿ ಉಪಕರಣದ ಒಳಗೆ ಬೆಳಕಿನ ಚದುರುವಿಕೆಯನ್ನು ಕಡಿಮೆ ಮಾಡುತ್ತದೆ. ಕರೋನಾವನ್ನು ಹೆಚ್ಚಿನ ರೆಸಲ್ಯೂಶನ್‌ನೊಂದಿಗೆ ಮತ್ತು ಅತ್ಯಂತ ಕ್ಷಿಪ್ರವಾಗಿ (ಸೆಕೆಂಡಿಗೆ ಸುಮಾರು 3 ಬಾರಿ) ಚಿತ್ರಿಸಲಿದೆ.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಸ್ಟ್ರೋ ಫಿಸಿಕ್ಸ್ ಇತಿಹಾಸ : ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಸ್ಟ್ರೋ ಫಿಸಿಕ್ಸ್ 15 ಕ್ಕೂ ಹೆಚ್ಚು ಅಧ್ಯಾಪಕರು ಮತ್ತು 20 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಅತಿದೊಡ್ಡ ಸೌರ ಆಸ್ಟ್ರೋಫಿಸಿಕ್ಸ್ ಸಮುದಾಯವಾಗಿದೆ. ಹೆಚ್ಚಿನ ಸಂಖ್ಯೆಯ ಎಂಜಿನಿಯರ್‌ಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೀಕ್ಷಣೆಗಳು, ಉಪಕರಣಗಳು ಮತ್ತು ಡೇಟಾ ವಿಶ್ಲೇಷಣೆಯಿಂದ ಹಿಡಿದು, ಸಿದ್ಧಾಂತ, ಮಾಡೆಲಿಂಗ್ ಮತ್ತು ಕಂಪ್ಯೂಟರ್ ಸಿಮ್ಯುಲೇಶನ್‌ಗಳನ್ನು ಒಳಗೊಂಡಿರುವ ಸೌರ ಖಗೋಳ ಭೌತಶಾಸ್ತ್ರದ ಅಧ್ಯಯನ ಮತ್ತು ಪ್ರಚಾರವನ್ನು ಇಲ್ಲಿ ಕೈಗೊಳ್ಳಲಾಗುತ್ತಿದೆ.
ಪೇಲೋಡ್ಗಳ ಬಗ್ಗೆ ವಿವರ : ಆದಿತ್ಯ ಎಲ್1 ನೌಕೆ 7 ಪೆಲೋಡ್ ಗಳನ್ನು ಹೊಂದಿದೆ. ಇವುಗಳಲ್ಲಿ ವಿ.ಇ.ಎಲ್.ಸಿ, ಸೂಟ್, ಹೆಲ್10ಎಸ್, ಮತ್ತು ಸೋಲಕ್ಸಸ್ ದೂರದರ್ಶಕಗಳು ಮುಖ್ಯವಾಗಿ ಸೂರ್ಯನ ಕಿರಣಗಳ ಕುರಿತು ಮಾಹಿತಿ ರವಾನಿಸಲಿದೆ. ಪಾಪ ಮತ್ತು ಅಸ್ಪೆಕ್ಸ್ ಸೌರ ಮಾರುತದ ಪ್ಲಾಸ್ಮಾ ಗುಣಲಕ್ಷಣಗಳನ್ನು ಅಳೆಯಲಿದೆ ಮತ್ತು ಮ್ಯಾಗ್ ಕಾಂತೀಯ ಕ್ಷೇತ್ರವನ್ನು ಅಳೆಯಲಿದೆ.
ಆದಿತ್ಯ-ಎಲ್ 1 ನ ಪ್ರಮುಖ ಉದ್ದೇಶಗಳು :
1. ಕರೋನಲ್ ತಾಪಮಾನ ಮತ್ತು ಸೌರ ಮಾರುತದ ವೇಗವರ್ಧನೆಯನ್ನು ಅಳೆಯುವುದು
2. ಸೌರ ವಾತಾವರಣದ ಜೋಡಣೆ ಮತ್ತು ಡೈನಾಮಿಕ್ಸ್ ಕುರಿತ ಅಧ್ಯಯನ
3. ಸೌರ ಮಾರುತಗಳ ವಿತರಣೆ ಮತ್ತು ತಾಪಮಾನದ ವಿವರ ಸಂಗ್ರಹಣೆ
4. ಕರೋನಲ್ ಮಾಸ್ ಎಜೆಕ್ಷನ್‌ಗಳ ಮೂಲಕ ಉಂಟಾಗುವ ಜ್ವಾಲೆಗಳ ಗುಣಲಕ್ಷಣಗಳು ಮತ್ತು ಭೂಮಿಯ ವಾತಾವರಣದ ಮೇಲೆ ಅವುಗಳ ಪರಿಣಾಮದ ಕುರಿತ ಡೇಟಾಗಳ ರವಾನೆ ಮಾಡಲಿದೆ.
ಇಸ್ರೋ ಪಿಎಸ್‌ಎಲ್‌ವಿ- ಸಿ57 ರಾಕೆಟ್ ಮೂಲಕ ಆದಿತ್ಯ ಎಲ್ 1 ನೌಕೆಯನ್ನು ಉಡಾವಣೆ ಮಾಡಿದೆ. ಇದು ಯಶಸ್ವಿಯಾಗಿ ತನ್ನ ಪಥದಲ್ಲಿ ಸಾಗುತ್ತಿದೆ. ವಿ.ಇ.ಎಲ್.ಸಿ ಇದರಲ್ಲಿರುವ ಅತಿ ದೊಡ್ದ ಪೇಲೋಡ್ ಆಗಿದೆ.ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋ ಫಿಸಿಕ್ಸ್ ನೇತೃತ್ವದಲ್ಲಿ ಈ ಪೇ ಲೋಡ್ ನಿರ್ಮಾಣವಾಗಿದೆ. ಸದ್ಯ ಆದಿತ್ಯ ಎಲ್ 1 ನೌಕೆ ಸುಸ್ಥಿಯಲ್ಲಿದೆ ಎಂದು ಇಸ್ರೊ ಮಾಹಿತಿ ನೀಡಿದೆ. ನಮ್ಮ ಪೇಲೋಡ್ ಎಲ್ 1 ಪಾಯಿಂಟ್ ತಲುಪಿದ ಮೇಲೆ ಕೆಲಸ ಪ್ರಾರಂಭಿಸಲಿದೆ.
- ಡಾ. ಮಂಜುನಾಥ್ ಹೆಗಡೆ, ವಿಜ್ಞಾನಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋ ಫಿಸಿಕ್ಸ್
ಇದನ್ನೂ ಓದಿ : ಚಂದ್ರಯಾನ-3: ಕೆಲಸ ಮುಗಿಸಿ 'ಸ್ಲೀಪ್ ಮೋಡ್'ಗೆ ಜಾರಿದ ಪ್ರಗ್ಯಾನ್; ಸೆಪ್ಟೆಂಬರ್ 22ರಿಂದ ಮತ್ತೆ ಕಾರ್ಯಾರಂಭದ ಭರವಸೆ