ಬೆಂಗಳೂರು: ಡ್ರಗ್ಸ್ ಜಾಲದ ನಂಟು ಆರೋಪದಲ್ಲಿ ಹೆಸರು ಕೇಳಿ ಬಂದಿರುವ ಆದಿತ್ಯ ಆಳ್ವಾ ನಾಪತ್ತೆಯಾಗಿದ್ದು, ಮೂಲಗಳ ಪ್ರಕಾರ ಹೊರ ದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗುತ್ತಿದೆ.
ಡ್ರಗ್ಸ್ ಜಾಲದ ನಂಟು ಪ್ರಕರಣ ದೊಡ್ಡ ಮಟ್ಟದಲ್ಲಿ ಸುದ್ದಿಯಾಗ್ತಿದ್ದಂತೆ ಆದಿತ್ಯ ಆಳ್ವಾ ಸದ್ದಿಲ್ಲದೆ ದೇಶ ಬಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಪ್ರಭಾವಿ ಕುಟುಂಬಕ್ಕೆ ಸೇರಿರುವ ಆದಿತ್ಯ ಆಳ್ವಾ, ಬಾಲಿವುಡ್ ನಟ ವಿವೇಕ್ ಒಬೆರಾಯ್ನ ಬಾಮೈದನಾಗಿದ್ದಾನೆ. ಮೂಲಗಳ ಪ್ರಕಾರ ಈತ ಕ್ಯಾಲಿಫೋರ್ನಿಯಾದಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗ್ತಿದೆ.
ಪ್ರಕರಣ ದಾಖಲಾಗಿ 11 ದಿನ ಕಳೆದರೂ ಆದಿತ್ಯ ಆಳ್ವಾ ಸುಳಿವು ಇನ್ನೂ ಸಿಕ್ಕಿಲ್ಲ. ಇನ್ನೊಂದೆಡೆ ಅದಿತ್ಯ ಆಳ್ವಾ ಮನೆ ಮೇಲೆ ಸಿಸಿಬಿ ದಾಳಿ ನಡೆಸಿದ್ದು, ಹಲವು ವಸ್ತುಗಳನ್ನು ವಶಪಡಿಸಿಕೊಂಡಿದೆ. ಆದಿತ್ಯ ಮುಂಬೈನಲ್ಲಿ ತಲೆಮರೆಸಿಕೊಂಡಿರುವ ಶಂಕೆ ವ್ಯಕ್ತವಾದ ಹಿನ್ನೆಲೆ, ಸಿಸಿಬಿ ಅಧಿಕಾರಿಗಳ ವಿಶೇಷ ತಂಡ ಮುಂಬೈಗೂ ತೆರಳಿತ್ತು. ಆದರೆ ಅಲ್ಲೂ ಆದಿತ್ಯ ಸುಳಿವು ಪತ್ತೆಯಾಗಿರಲಿಲ್ಲ.
ಆದಿತ್ಯ ಆಳ್ವಾನ 'ಲೈಪ್ ಆಫ್ ಹೌಸ್'ನಲ್ಲಿ ಕೇವಲ ಡ್ರಗ್ಸ್ ಪಾರ್ಟಿ ಮಾತ್ರವಲ್ಲ, ಆಕ್ರಮವಾಗಿ ಫ್ಲೈ ಡೈನಿಂಗ್ ಕೂಡ ನಡೆಯುತ್ತಿತ್ತು ಎಂಬ ಆರೋಪ ಕೇಳಿ ಬಂದಿದೆ. ಬಾನೆತ್ತರಕ್ಕೆ ಕ್ರೇನ್ ರೂಪದ ಯಂತ್ರದಲ್ಲಿ ಹೋಗಿ ಕೆರೆಯ ಸುತ್ತಲಿನ ವಿಹಂಗಮ ನೋಟ ನೋಡುತ್ತಾ ಊಟ ಮಾಡುವ ವ್ಯವಸ್ಥೆ(ಫ್ಲೈ ಡೈನಿಂಗ್)ಯನ್ನು ಆಕ್ರಮವಾಗಿ ಆಳ್ವಾ ಕುಟುಂಬ ಆಳವಡಿಸಿಕೊಂಡಿತ್ತು. ನಂತರ ಅದನ್ನು ನಿಲ್ಲಿಸಲಾಗಿತ್ತು ಎನ್ನಲಾಗಿದೆ.
ಏನಿದು ಫ್ಲೈ ಡೈನಿಂಗ್?
ಫ್ಲೈ ಡೈನಿಂಗ್ ಅಂದರೆ ಅದೊಂದು ವಿಶಿಷ್ಟ ಕಲ್ಪನೆ. ಭೂಮಿ ಮತ್ತು ಆಕಾಶದ ನಡುವೆ ಪ್ರೀತಿ ಪಾತ್ರರನ್ನು ಕರೆದುಕೊಂಡು ಹೋಗಿ ಸುತ್ತಲಿನ (ಪ್ರಕೃತಿ, ನಗರ) ಸೌಂದರ್ಯ ಸವಿಯುತ್ತಾ ಊಟ ಮಾಡುವ ಹೊಸ ಟ್ರೆಂಡ್. ವಿದೇಶಗಳಲ್ಲಿ ಫ್ಲೈ ಡೈನಿಂಗ್ ರೆಸ್ಟೋರೆಂಟ್‌ಗಳಿಗೆ ಜನ ಮುಗಿಬೀಳ್ತಾರೆ. ಅದರಲ್ಲೂ ಪ್ರೇಮಿಗಳು ಈ ರೀತಿಯ ರೆಸ್ಟೋರೆಂಟ್‌ಗಳಿಗೆ ಹೆಚ್ಚು ಬರ್ತಾರೆ. ಸದ್ಯ, ಬೆಂಗಳೂರು ನಗರದಲ್ಲಿ ನಾಗವಾರ ಕೆರೆ ಬಳಿಯ ಲುಂಬಿನಿ ಗಾರ್ಡನ್ ಒಳಗೆ ಸುಮಾರು 160 ಅಡಿ ಎತ್ತರದಲ್ಲಿ ಫ್ಲೈ ಡೈನಿಂಗ್ ಟೇಬಲ್ ವ್ಯವಸ್ಥೆಯಿದೆ. ಇಲ್ಲಿ ತಣ್ಣನೆ ಗಾಳಿಯೊಂದಿಗೆ ಉದ್ಯಾನನಗರಿಯ ಸೌಂದರ್ಯ ಸವಿಯುತ್ತಾ ಊಟ ಮಾಡಬಹುದು.