ಆನೇಕಲ್: 'ವಾರದ ಮೂರನೇ ಭಾನುವಾರ ಪ್ರತಿ ಪೊಲೀಸ್ ಠಾಣೆಗಳಲ್ಲಿ ನೊಂದವರ ದಿನದ ಹೆಸರಿನಲ್ಲಿ ದೂರುದಾರರ ಕಷ್ಟ-ಕಾರ್ಪಣ್ಯಗಳನ್ನು ಕಾನೂನು ಚೌಕಟ್ಟಿನಲ್ಲಿ ಬಗೆಹರಿಸುವ ಕೆಲಸ ತುರ್ತಾಗಿ ಜಾರಿಯಾಗಬೇಕಿದೆ. ನಗರ ಪ್ರದೇಶಕ್ಕೆ ಹೋಲಿಸಿದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪೊಲೀಸರ ಸಂಖ್ಯೆ ಅತಿ ಕಡಿಮೆ ಇದೆ. ಇದನ್ನು ಲೆಕ್ಕಿಸದೇ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ' ಎಂದು ಕಾನೂನು ಸುವ್ಯವಸ್ಥೆ ವಿಭಾಗದ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಹೇಳಿದರು.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರೌಡಿಗಳ ಹಾವಳಿ ಹೆಚ್ಚಿರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಯಂತ್ರಿಸುವ ಸಲುವಾಗಿ ಪ್ರಮುಖ 20 ರೌಡಿಗಳನ್ನು ಕರೆಸಿ ಎಚ್ಚರಿಕೆ ನೀಡುವ ಉದ್ದೇಶದಿಂದ ಆನೇಕಲ್ ಪೊಲೀಸ್ ಠಾಣೆಗೆ ಅಲೋಕ್ ಕುಮಾರ್ ಶನಿವಾರ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, 'ನಗರದಲ್ಲಿದ್ದಂತೆ ಅತಿ ಹೆಚ್ಚು ಪ್ರಕರಣಗಳು ಗ್ರಾಮಾಂತರ ಜಿಲ್ಲೆಯಲ್ಲೂ ಇದೆ. ಹೀಗಾಗಿ, ಅಪರಾಧ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸರು ಜನರಲ್ಲಿ ಭರವಸೆ ಮೂಡಿಸಬೇಕು' ಎಂದರು.
ಪ್ರತಿದಿನ ಸಂಜೆ 5 ರಿಂದ 6 ಗಂಟೆಯ ಅವಧಿಯಲ್ಲಿ ಪೊಲೀಸ್ ಅಧಿಕಾರಿ ಖುದ್ದು ಸಾರ್ವಜನಿಕರ ಅಹವಾಲು ಇತ್ಯರ್ಥಕ್ಕೆ ಠಾಣೆಯಲ್ಲಿ ಸಮಯ ಮೀಸಲಿಡಬೇಕು. ಪ್ರತಿ ಠಾಣೆಯ ಸಂದರ್ಶಕರ ವಿವರ, ಷರಾ ನಮೂದಿಸಿ ಪರಿಶೀಲನೆ ಕಡ್ಡಾಯವಾಗಿ ಆಗಬೇಕು. ಸಾರ್ವಜನಿಕರ ಜೀವ, ಆಸ್ತಿ, ನಷ್ಟ ವಂಚನೆಗಳನ್ನು ತಡೆಯುವಲ್ಲಿ ಸದಾ ಮುಂದಾಗಿರಬೇಕೆಂದು ಕರೆ ನೀಡಿದರು.
ಇದನ್ನೂ ಓದಿ: ಕಾಲುವೆಯಲ್ಲಿ ಚಂದ್ರಶೇಖರ್ ಕಾರು ಪತ್ತೆಯಾಗಿದ್ದೇಗೆ? ಅಲೋಕ್ ಕುಮಾರ್ ಮಾಹಿತಿ
ಎಂಟು ಕೊಲೆ ಮಾಡಿರುವ ಮನೋಜ್ ನೆಮ್ಮದಿಯಾಗಿ ಊಟ ಮಾಡುತ್ತಿದ್ದಾನೆ. ಆದ್ದರಿಂದ ಉಪಟಳ ತಡೆಯಲು ಹಾಗೂ ಇಂತಹವರನ್ನು ಮಾದರಿಯಾಗಿಸಿಕೊಳ್ಳುವ ಯುವಕರ ಸಂಖ್ಯೆ ಹೆಚ್ಚಾಗದಂತೆ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ-1921 (ಕೋಕಾ) ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಪೊಲೀಸರಿಗೆ ನಿರ್ದೇಶನ ನೀಡಿದರು. ಜೊತೆಗೆ, ಸರಣಿ ದರೋಡೆಗಳ ಆರೋಪಿ ಕಳ್ಳ ಕೃಷ್ಣನ ಮೇಲೆ ಗೂಂಡಾ ಕಾಯ್ದೆ ದಾಖಲಿಸುವಂತೆಯೂ ಸೂಚಿಸಿದರು.
ಇದನ್ನೂ ಓದಿ: ಎಂಇಎಸ್ ಮುಖಂಡರಿಗೆ ಬದ್ಧಿ ಮಾತು ಹೇಳಿದ ಎಡಿಜಿಪಿ ಅಲೋಕ್ ಕುಮಾರ್
ನೆಲಮಂಗಲ ಮತ್ತು ಆನೇಕಲ್ ಅಪರಾಧ ಲೋಕದ ತವರಾಗಿ ಮಾರ್ಪಟ್ಟಿದೆ. ಹತ್ತು ವರ್ಷಗಳಲ್ಲಿ ರಾಜಕೀಯ ಪ್ರೇರಿತವೆಂದೇ ಬಿಂಬಿತವಾಗಿದ್ದ ಕೊಲೆಗಳ ವಿವರ ಹಾಗು ಅವುಗಳ ಪ್ರಕರಣಗಳ ಬೆನ್ನು ಬೀಳಬೇಕಿದೆ. ಆರೋಪಿಗಳಿಗೆ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ನಿರ್ಭೀತಿಯಿಂದ ಸಾಕ್ಷಿ ನುಡಿದು, ಸಾಕ್ಷಿಗಳಿಗೆ ಬೆನ್ನೆಲುಬಾಗಿ ನಿಂತು ನಿರಂತರವಾಗಿ ನ್ಯಾಯಾಂಗ ವಿಚಾರಣೆಗೆ ಸಹಕರಿಸುವ ಮೂಲಕ ಅಪರಾಧಿಗಳಿಗೆ ಶಿಕ್ಷೆ ನೀಡಿಸಬೇಕೆಂದು ಎಡಿಜಿಪಿ ಅಲೋಕ್ ಕುಮಾರ್ ಒತ್ತಿ ಹೇಳಿದರು.
ಇದನ್ನೂ ಓದಿ: ತರ್ಲೆ ಮಾಡಿದ್ರೆ ಕಠಿಣ ಕ್ರಮ: ಎಂಇಎಸ್ ಪುಂಡರಿಗೆ ಎಡಿಜಿಪಿ ಅಲೋಕ್ ಕುಮಾರ್ ವಾರ್ನಿಂಗ್