ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಆರೋಪ ಪ್ರಕರಣದಲ್ಲಿ ಸಿಲುಕಿರುವ ನಟಿಮಣಿಯರಾದ ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿ ಸದ್ಯ ಪರಪ್ಪನ ಅಗ್ರಹಾರದಲ್ಲಿಯೇ ತಮ್ಮ ದೈನದಿಂದ ಜೀವನ ಕಳೆಯುತ್ತಿದ್ದು, ಜಾಮೀನು ಕುರಿತು ಯೋಜನೆ ರೂಪಿಸುತ್ತಿದ್ದಾರೆ.
ಸದ್ಯ ಹೈಕೋರ್ಟ್ಗೆ ಜಾಮೀನು ಕೋರಿ ಅರ್ಜಿ ಸಲ್ಲಿಕೆ ಮಾಡಬೇಕಾದದ್ದು ಅನಿವಾರ್ಯವಾಗಿದ್ದರೂ ಕೂಡ ಸದ್ಯದ ಮಟ್ಟಿಗೆ ಯಾವುದೇ ರೀತಿಯಾದ ಅರ್ಜಿ ಸಲ್ಲಿಕೆಯಾಗಿಲ್ಲ.
ಸಿಟಿ ಸಿವಿಲ್ ಆವರಣದ ಎನ್ಡಿಪಿಎಸ್ ವಿಶೇಷ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ತಿರಸ್ಕಾರ ಆದ ಹಾಗೆ ಹೈಕೋರ್ಟ್ನಲ್ಲಿ ಆಗಬಾರದೆಂಬ ಕಾರಣಕ್ಕೆ ಸದ್ಯ ಬಹಳ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ. ಹಾಗೆಯೇ ಸಮರ್ಥ ವಕೀಲರ ಮೂಲಕ ಜಾಮೀನು ಅರ್ಜಿ ಸಲ್ಲಿಕೆ ಮಾಡಲು ಕೂಡ ಯೋಜನೆ ಮಾಡಿದ್ದು, ಪ್ರತಿಷ್ಠಿತ ವಕೀಲರ ಮೊರೆ ಹೋಗಿದ್ದಾರೆ. ಜಾಮೀನು ಕೋರಿ ಅರ್ಜಿ ಸಲ್ಲಿಕೆ ಮಾಡಿದಾಗ ಸಿಸಿಬಿ ಪೊಲೀಸರು ಆಕ್ಷೇಪಣೆ ಸಲ್ಲಿಕೆ ಮಾಡುತ್ತಾರೆ ಎನ್ನುವ ವಿಚಾರ ಈಗಾಗಲೇ ನಟಿಮಣಿಯರಿಗೆ ಅರಿವಾಗಿದೆ.
ಮತ್ತೊಂದೆಡೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿರುವ ಕಾರಣ ಸದ್ಯ ಹೈಕೋರ್ಟ್ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಕೆ ಮಾಡುವಾಗ ಬಹಳ ಎಚ್ಚರದಿಂದ ಇರಬೇಕಾಗಿರುವುದರಿಂದ ನಿಧಾನವಾಗಿ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಇಂದು ಗಾಂಧಿ ಜಯಂತಿಯಾದ ಕಾರಣ ಸರ್ಕಾರಿ ರಜೆ, ನಾಳೆ ಶನಿವಾರ, ನಾಡಿದ್ದು ಭಾನುವಾರ. ಹೀಗಾಗಿ ಮುಂದಿನ ವಾರವೇ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಇದ್ದು, ಅಲ್ಲಿಯವರೆಗೆ ಕಾದು ಸೂಕ್ತ ಯೋಜನೆ ರೂಪಿಸಿ ಮುಂದುವರೆಯಲು ನಿರ್ಧಾರ ಮಾಡಿದ್ದಾರಂತೆ.
ಸದ್ಯ ಜೈಲಿನಲ್ಲಿ ವಿಚಾರಣಾಧೀನ ಕೈದಿಗಳಾಗಿ ವಾಸ ಮಾಡುತ್ತಿದ್ದು, ತಮ್ಮ ಭವಿಷ್ಯದ ಚಿಂತೆಯಲ್ಲೇ ಸಮಯ ಕಳೆಯುತ್ತಿದ್ದಾರೆ. ನಟಿ ರಾಗಿಣಿಗೆ ಜಾಮೀನು ಬಗ್ಗೆ ಚಿಂತೆಯಾದರೆ, ಸಂಜಾನಗೆ ಇಡಿ ಚಿಂತೆ ಶುರುವಾಗಿದೆ. ಸಂಜನಾಳ ಸಂಪೂರ್ಣ ಮಾಹಿತಿ ಸದ್ಯ ಇಡಿ ಕೈಯಲಿದೆ. ಹೀಗಾಗಿ ಇಡಿ ಉರುಳಾಗೋದು ಪಕ್ಕಾ ಆಗಿದ್ದು, ಸದ್ಯ ಅದೇ ಆತಂಕದಲ್ಲಿ ದಿನ ದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ.