ಬೆಂಗಳೂರು: ಕಿಚ್ಚ ಸುದೀಪ್ ಅಂದರೆ ಅಭಿಮಾನಿಗಳಿಗೆ ಅದೇನೋ ಪ್ರೀತಿ.. ಅದೇ ರೀತಿ ಅಭಿನಯ ಚಕ್ರವರ್ತಿಗೆ ಅಭಿಮಾನಿಗಳು ಅಂದರೆ ದೇವರ ಸಮಾನ. ವಿಶೇಷ ಚೇತನಳ ವಿಶೇಷ ಅಭಿಮಾನಕ್ಕೆ ಕಿಚ್ಚ ಸುದೀಪ್ ಮನ ಕರಗಿದೆ. ತಮ್ಮನ್ನ ಭೇಟಿಮಾಡಲು ಬಂದ ಪುಟ್ಟ ಕಂದಮಳನ್ನ ಪ್ರೀತಿಯಿಂದ ತಬ್ಬಿ ಹುರಿದುಂಬಿಸಿ ಆಕೆಯ ಪ್ರೀತಿಗೆ ಭಾವುಕರಾಗಿದ್ದಾರೆ.
ಮಂಗಳೂರಿನ ಮೂಲ್ಕಿ ಸಮೀಪದ ದೀಪಿಕಾ ಕವತಾರು ಅನ್ನೋ ವಿಶೇಷ ಚೇತನ ಮಗು ಕಿಚ್ಚನ ಅಭಿಮಾನಿ. ಅನಾರೋಗ್ಯ ಪೀಡಿತ ಈ ಮಗುವಿಗೆ ಔಷಧಿ ಕೊಡಬೇಕು ಅಂದ್ರೆ ಕಿಚ್ಚ ಮಾತನಾಡಿಸಬೇಕು. ಅದೇ ರೀತಿ 3 ವರ್ಷಗಳಿಂದ ಕಿಚ್ಚ ಈ ಮಗು ಜೊತೆ ಆಗಾಗ ವಿಡಿಯೋ ಕಾಲ್ ಮೂಲಕ ಮಾತನಾಡಿ ಮಾನವೀಯತೆ ಮೆರಿದಿದ್ದಾರೆ. ಆದರೆ, ಇತ್ತೀಚಿಗೆ ಕಳೆದ ಕೆಲವು ದಿನಗಳಿಂದ ಆ ಮಗು ಕಿಚ್ಚನನ್ನು ನೋಡಲೇಬೇಕು ಎಂದು ಹಠ ಮಾಡಿದೆ.
ಶೂಟಿಂಗ್ನಲ್ಲಿ ಬ್ಯುಸಿ ಇದ್ದ ಸುದೀಪ್ ಆ ಮಗು ಜೊತೆ ಕಾಲ್ ಮಾಡಿ ಮಾತನಾಡಲು ಸಾಧ್ಯವಾಗಿರಲಿಲ್ಲ. ಮಗುವಿನ ತಂದೆ ಸಂತೋಷ್ ಹಾಗೂ ತಾಯಿ ಲಕ್ಷ್ಮಿ ಹೇಗೋ ಕಷ್ಟಪಟ್ಟು ಸುದೀಪ್ ಅವರನ್ನು ಫೋನ್ ಮೂಲಕ ಸಂಪರ್ಕಿಸಿ, ಹೇಗಾದರೂ ನಿಮ್ಮನ್ನು ಭೇಟಿ ಮಾಡುವ ಅವಕಾಶ ಕಲ್ಪಿಸಿ ಕೊಡಿ ಎಂದು ಮನವಿ ಮಾಡಿದ್ದಾರೆ. ಅಭಿಮಾನಿಗಳ ಅಭಿಮಾನಕ್ಕೆ ಇಲ್ಲ ಎನ್ನದ ಕಿಚ್ಚ ಭೇಟಿ ಮಾಡುವುದಕ್ಕೆ ಅವಕಾಶ ಮಾಡಿ ಕೊಟ್ಟಿದ್ದು, ನಿನ್ನೆ ಚಿಕಿತ್ಸೆಗೆ ಬೆಂಗಳೂರಿಗೆ ಬಂದಿದ್ದ ದೀಕಾಳನ್ನು, ಕಿಚ್ಚ ಸುದೀಪ್ ಕೊಟಿಗೋಬ್ಬ-3 ಚಿತ್ರದ ಶೂಟಿಂಗ್ ನಡೆಯುತ್ತಿದ್ದ ಕಂಠೀರವ ಸ್ಟುಡಿಯೋಗೆ ಕರೆಯಿಸಿ ಕೊಂಡಿದ್ದಾರೆ. ತಾಯಿ ಲಕ್ಷ್ಮಿ, ತಂದೆ ಸಂತೋಷ್ ಜೊತೆಗೆ ದೀಪಿಕಾ ಕಿಚ್ಚ ಸುದೀಪ್ ಅವರನ್ನು ಭೇಟಿಯಾದರು. ದೀಪಿಕಾ, ಸುದೀಪ್‌ರನ್ನ ಕಂಡು ಸಂತೋಷದಿಂದ ಕುಣಿದಾಡಿದ್ದಾಳೆ.
ಅಲ್ಲದೆ ಭೇಟಿ ಮಾಡಿದ್ದ ವೇಳೆ ಕಿಚ್ಚ ದೀಪಿಕಾಳಿಗೆ ಚಾಕೊಲೇಟ್ ಕೊಡಲು ಹೋದಾಗ ವಿಶೇಷ ಅಭಿಮಾನಿಯೇ ಕಿಚ್ಚನಿಗೆ ಕನ್ನಡಕ ಕೊಟ್ಟಿದ್ದಾಳೆ. ಅಲ್ಲದೆ ಸ್ಪೆಷಲ್ ಅಭಿಮಾನಿಯ ಉಡುಗೊರೆಯನ್ನ ಅಭಿನಯ ಚಕ್ರವರ್ತಿ ಪ್ರೀತಿಯಿಂದ ಸ್ವೀಕರಿಸಿದ್ದಾರೆ. ಅಲ್ಲದೆ ದೀಪಿಕಾ ಸುದೀಪ್ ಅಭಿನಯದ ಮುಸ್ಸಂಜೆ ಮಾತು ಚಿತ್ರದ ಏನ್ ಆಗಲಿ ಮುಂದೇ ಸಾಗು ನೀ.. ಬಯಸ್ಸಿದ್ದೆಲ್ಲ ಸಿಗದು ಬಾಳಲಿ.. ಹಾಡನ್ನು ಹಾಡಿದ್ದಾಳೆ. ವಿಶೇಷ ಅಭಿಮಾನಿಯ ಅಭಿಮಾನ ಕಂಡು ಕಿಚ್ಚ ಸುದೀಪ್ ಭಾವುಕರಾಗಿದ್ದಾರೆ.