ಬೆಂಗಳೂರು: ಆರ್.ಆರ್.ನಗರ ಉಪಚುನಾವಣೆ ಕಣ ಮತ್ತಷ್ಟು ರಂಗೇರಿದ್ದು, ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಇಂದು ನಟ ದರ್ಶನ್ ಪ್ರಚಾರ ನಡೆಸಲಿದ್ದಾರೆ. ಹೀಗಾಗಿ ಖಾಕಿ ಪಡೆ ಬಿಗಿ ಭದ್ರತೆ ಕೈಗೊಂಡಿದೆ.
ಯಶವಂತಪುರ ರೈಲ್ವೆ ನಿಲ್ದಾಣದಿಂದ ಪ್ರಚಾರ ಕಾರ್ಯ ಆರಂಭವಾಗಲಿದೆ. ದರ್ಶನ್ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜನರು ಕಿಕ್ಕಿರಿದು ಸೇರಿದ್ದು, ನೆಚ್ಚಿನ ನಟನ ನೋಡಲು ಅಭಿಮಾನಿಗಳು ಕಾದು ಕುಳಿತಿದ್ದಾರೆ.
ಮುನಿರತ್ನ ಪರ ಪ್ರಚಾರ ಮಾಡುವ ವಾಹನ ಸಿದ್ದವಾಗಿದ್ದು, ಬೆಳಗ್ಗೆ 10:30ಕ್ಕೆ ಕ್ಯಾಂಪೇನ್ ಆರಂಭವಾಗಲಿದೆ. ಈ ನಿಟ್ಟಿನಲ್ಲಿ ಅಹಿತಕರ ಘಟನೆ ನಡೆಯದಂತೆ ಖಾಕಿ ಪಡೆ ಬಿಗಿ ಭದ್ರತಾ ಕ್ರಮಗಳನ್ನು ಕೈಗೊಂಡಿದೆ. ಉತ್ತರ ವಿಭಾಗ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಭದ್ರತೆಯ ನೇತೃತ್ವ ಹೊಂದಿದ್ದಾರೆ.
ಒಬ್ಬರು ಡಿಸಿಪಿ, 3 ಜನ ಎಸಿಪಿ, ಐವರು ಇನ್ಸ್ಪೆಕ್ಟರ್,15 ಸಬ್ಇನ್ಸ್ಪೆಕ್ಟರ್, 50 ಪೊಲೀಸ್ ಸಿಬ್ಬಂದಿ, 2 ಕೆಎಸ್ಆರ್ಪಿ ತುಕಡಿ, 1 ಸಿಎಆರ್ ತುಕಡಿಯನ್ನೂ ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ಇದರ ಜೊತೆ ಗುಪ್ತಚರ ಇಲಾಖೆ ಕೂಡ ಕಣ್ಣಿಟ್ಟಿದೆ.