ಬೆಂಗಳೂರು: ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ನಟ ಚೇತನ್ ವಿರುದ್ಧ ದಾಖಲಾಗಿದ್ದ ಪ್ರಕರಣ ಸಂಬಂಧ ಬಸವನಗುಡಿ ಪೊಲೀಸರು ನೀಡಿದ ನೋಟಿಸ್ ಮೇರೆಗೆ ಠಾಣೆಗೆ ಹಾಜರಾಗಿ ನಾಲ್ಕು ತಾಸುಗಳ ವಿಚಾರಣೆ ಎದುರಿಸಿದರು.
ಎಸಿಪಿ ಶ್ರೀನಿವಾಸ್ ನೇತೃತ್ವದಲ್ಲಿ ಚೇತನ್ ಅವರನ್ನು ವಿಚಾರಣೆ ನಡೆಸಿ ಮತ್ತೆ ಜೂ.18ರಂದು ಹಾಜರಾಗುವಂತೆ ಸೂಚಿಸಿ ಕಳುಹಿಸಿದ್ದಾರೆ. ವಿಚಾರಣೆ ಮುಗಿಸಿ ಹೊರಬಂದು ಮಾತನಾಡಿದ ಚೇತನ್, ಕಾನೂನು ಮೇಲೆ ಅಪಾರ ನಂಬಿಕೆಯಿದೆ. ಯಾವ ಜಾತಿ, ಜನಾಂಗದ ವಿರುದ್ಧ ಹೋರಾಟ ಮಾಡುತ್ತಿಲ್ಲ. ಕೆಲವರು ಹುಟ್ಟಿದ ತಕ್ಷಣ ಶ್ರೇಷ್ಠ, ಕೆಲವರು ಕೀಳು ಅಂತ ಮಾಡಬಾರದು. ಬೇಧಭಾವದ ವಿರುದ್ಧ ಹೋರಾಟ ಮುಂದುವರೆಸುತ್ತೇನೆ. ನನಗೆ ನ್ಯಾಯ ಸಿಗುವ ವಿಶ್ವಾಸವಿದೆ.
ಜೂ.18ರಂದು ಮತ್ತೆ ವಿಚಾರಣೆಗೆ ಬರುವಂತೆ ತಿಳಿಸಿದ್ದಾರೆ. ತನಿಖಾಧಿಕಾರಿಗಳ ಎಲ್ಲಾ ಪ್ರಶ್ನೆಗಳಿಗೂ ಸಂಪೂರ್ಣ ಉತ್ತರ ಕೊಟ್ಟಿದ್ದೇನೆ. ತನಿಖೆಗೆ ಎಲ್ಲಾ ರೀತಿಯಲ್ಲಿ ಸಹಕಾರ ನೀಡುತ್ತೇನೆ ಎಂದರು.
ಪ್ರಕರಣ ಹಿನ್ನೆಲೆ: ಬ್ರಾಹ್ಮಣ ಮತ್ತು ಬ್ರಾಹ್ಮಣ್ಯದ ವಿರುದ್ದ ನಟ ಚೇತನ್ ಫೇಸ್‌ಬುಕ್, ಟ್ವಿಟ್ಟರ್ ಹಾಗೂ ಯೂಟ್ಯೂಬ್‌ನಲ್ಲಿ ಪೋಸ್ಟ್ ಹಾಕಿದ್ದಾರೆ ಎಂದು ಆರೋಪಿಸಿ ವಿಪ್ರ ಯುವ ವೇದಿಕೆಯ ಅಧ್ಯಕ್ಷ ಪವನ್ ಕುಮಾರ್ ಎಂಬುವರು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಮೇರೆಗೆ ಠಾಣಾ ಪೊಲೀಸರು ಐಪಿಸಿ ಸೆಕ್ಷನ್ 153ಬಿ, 295ಎ ಅಡಿ ಎಫ್‌ಐಆರ್ ದಾಖಲಿಸಿದ್ದರು.
ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಳಿ ಅಧ್ಯಕ್ಷ ಹೆಚ್. ಎಸ್. ಸಚ್ಚಿದಾನಂದ ಮೂರ್ತಿ ಕೂಡ ನಗರ ಪೊಲೀಸ್ ಆಯುಕ್ತರಿಗೆ ಚೇತನ್ ವಿರುದ್ಧ ದೂರು ದಾಖಲಿಸಿದ್ದರು.
ಬ್ರಾಹ್ಮಣರನ್ನು ಆಧ್ಯಾತ್ಮಿಕ ಭಯೋತ್ವಾದಕತ್ವ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ. ಇದರಿಂದ ಬ್ರಾಹ್ಮಣ ಸಮುದಾಯಕ್ಕೆ ತುಂಬಾ ನೋವಾಗಿದೆ. ಬ್ರಾಹ್ಮಣ ಸಮುದಾಯದ ಬಳಿ ಬೇಷರತ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು.
ಓದಿ: ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ: ಅರುಣ್ ಸಿಂಗ್