ಬೆಂಗಳೂರು: ಕೋವಿಡ್ ನಿಯಮ ಉಲ್ಲಂಘಿಸುವ ಎಲ್ಲರ ವಿರುದ್ಧ ಕ್ರಮ ಖಚಿತ. ಎಷ್ಟೇ ದೊಡ್ಡ ನಾಯಕ ಇರಲಿ ಅಥವಾ ಜನ ಸಾಮಾನ್ಯ ಇರಲಿ. ಕಾನೂನು ರೀತಿ ಕ್ರಮ ಖಚಿತ. ಇದು ಪಾದಯಾತ್ರೆ ವೇಳೆ ನಿಯಮ ಉಲ್ಲಂಘಿಸಿದವರಿಗೂ ಇದು ಅನ್ವಯಿಸುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಆರ್‌ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಬ್ ಟೆಸ್ಟ್ ವೇಳೆ ಅಧಿಕಾರಿಗಳ ವಿರುದ್ಧ ಡಿಕೆಶಿ ಗರಂ ಆಗಿದ್ದಾರೆ. ಆದರೆ ನಾವು ಅವರ ಆರೋಗ್ಯದ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ.
ಅವರು ಸುದೀರ್ಘವಾಗಿ ನಡೆದ ಸಂದರ್ಭದಲ್ಲಿ ಅವರ ಆರೋಗ್ಯ ತಪಾಸಣೆ ಮಾಡಬೇಕು. ಅವರೊಬ್ಬರಿಗೆ ಅಲ್ಲ ಎಲ್ಲರಿಗೂ ಆರೋಗ್ಯ ತಪಾಸಣೆ ಮಾಡಬೇಕು. ಇದು ಆರೋಗ್ಯ ಇಲಾಖೆ ಕರ್ತವ್ಯ ಮತ್ತು ಔದಾರ್ಯ. ಇದನ್ನ ಅರ್ಥ ಮಾಡಿಕೊಳ್ಳದೇ ಬಾಯಿಗೆ ಬಂದ ಹಾಗೇ ಮಾತನಾಡಿದ್ದಾರೆ ಎಂದು ಸಿಎಂ ಅಸಮಾಧಾನ ವ್ಯಕ್ತಪಡಿಸಿದರು.
ಕಾನೂನು ಪಾಲನೆ ಮಾಡದವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ವಿಫಲವಾಗಿಲ್ಲ. ಯಾರ‍್ಯಾರು ಕಾನೂನು ಉಲ್ಲಂಘನೆ ಮಾಡುತ್ತಾರೋ ಅವರ ಮೇಲೆ ಕೇಸ್ ದಾಖಲಾಗುತ್ತದೆ. ಪಾದಯಾತ್ರೆ ಮಾಡುವವರ ಮೇಲೆಯೂ ಕೇಸ್ ದಾಖಲಾಗಿದೆ. ಒಮ್ಮೆ ಕೇಸ್ ರಿಜಿಸ್ಟರ್ ಆಗಬೇಕಲ್ಲ. ಅದು ಈಗ ಆಗಿದೆ. ಇದರಲ್ಲಿ ಯಾವುದೇ ಭೇದ ಭಾವವಿಲ್ಲ ಎಂದು ಸಿಎಂ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಸಂಕ್ರಾಂತಿ ಬಳಿಕ ಕೆಲ ಜಿಲ್ಲೆಗಳಿಗೆ ಸಡಿಲಿಕೆ ನೀಡುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ಕೋವಿಡ್ ಯಾವ ರೀತಿ ಬೆಳವಣಿಗೆ ಆಗುತ್ತದೆ. ಅದರ ಅಧಾರದ ಮೇಲೆ ಕ್ರಮ ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ದೆ.
ಆದರೆ, ನಿನ್ನೆ(ಭಾನುವಾರ) ರಾಜ್ಯದಲ್ಲಿ 12 ಸಾವಿರ ಕೇಸ್ ದಾಖಲಾಗಿವೆ. ಬೆಂಗಳೂರಲ್ಲಿ 9 ಸಾವಿರ ಕೇಸ್ ಇದೆ. ಪಾಸಿಟಿವಿಟಿ ದರ ಶೇ.6.8 ಆಗಿದೆ. ಬೆಂಗಳೂರಲ್ಲಿ ಶೇ. 10 ಇದೆ. ದೇಶದಲ್ಲಿ ನಮ್ಮ ರಾಜ್ಯ ಈಗ 3ನೇ ಸ್ಥಾನದಲ್ಲಿದೆ. ಹೀಗಾಗಿ ಹೆಚ್ಚಿನ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ ಎಂದರು.
ಇದನ್ನೂ ಓದಿ: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ: ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಎಫ್ಐಆರ್ ದಾಖಲು