ಬೆಂಗಳೂರು : "ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಇನ್ನೂ ಬಿಡುಗಡೆ ಮಾಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಸುಳ್ಳು ಸುದ್ದಿ ಪ್ರಕಟಿಸಲಾಗುತ್ತಿದೆ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
"ಇಂದು ರಾಜ್ಯ ಬಿಜೆಪಿ ಚುನಾವಣಾ ಸಮಿತಿ ಸಭೆ ನಡೆಯುತ್ತಿದೆ. ಅಭ್ಯರ್ಥಿಗಳ ಆಯ್ಕೆ ಕುರಿತು ಇಂದು ಮತ್ತು ನಾಳೆ ಎರಡು ದಿನ ಸಭೆ ನಡೆಯಲಿದೆ. ನಂತರ ರಾಜ್ಯ ಸಮಿತಿ ಕೇಂದ್ರ ಸಮಿತಿಗೆ ಪಟ್ಟಿಯನ್ನು ಕಳುಹಿಸಿ ಕೊಡಲಿದೆ. ಏಪ್ರಿಲ್ 8ರಂದು ದೆಹಲಿಯಲ್ಲಿ ಪಕ್ಷದ ಸಂಸದೀಯ ಮಂಡಳಿ ಸಭೆ ನಡೆಯಲಿದೆ. ಅಲ್ಲಿ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ. ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪಟ್ಟಿ ನಕಲಿ. ವಾಟ್ಸಾಪ್‍ಗಳಲ್ಲಿ ತಪ್ಪು ಮಾಹಿತಿ ಹರಿದಾಡುತ್ತಿದೆ. ಇಂತಹ ಸುಳ್ಳು ಸುದ್ದಿ ಪ್ರಕಟಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಮಾಧ್ಯಮಗಳ ಮೂಲಕ ಅರುಣ್ ಸಿಂಗ್ ತಿಳಿಸಿದರು.
ಕಟೀಲ್ ಟ್ವೀಟ್: ಮತ್ತೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, ಸಾಮಾಜಿಕ ಜಾಲತಾಣ ಮಾಧ್ಯಮದಲ್ಲಿ ಬರುತ್ತಿರುವ ಪಟ್ಟಿ ಸುಳ್ಳು ಎಂದು ಟ್ವೀಟ್ ಮಾಡಿದ್ದಾರೆ. ನಮ್ಮ ಪಕ್ಷವು ಆಂತರಿಕ ಪ್ರಜಾಪ್ರಭುತ್ವವನ್ನು ಗೌರವಿಸಿ, ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸುತ್ತಿದೆ. ಈ ಸಮಯದಲ್ಲಿ ಸುಳ್ಳು ಅಭ್ಯರ್ಥಿಗಳ ಪಟ್ಟಿ ಹರಿಬಿಟ್ಟು ಕುತ್ಸಿತ ಮನಸ್ಥಿತಿಗಳು ರಾಜ್ಯದ ಜನತೆಯ ದಾರಿ ತಪ್ಪಿಸುತ್ತಿವೆ ಎಂದಿದ್ದಾರೆ.
ಕಾಂಗ್ರೆಸ್ ಫೇಕ್ ಫ್ಯಾಕ್ಟರಿಯಿಂದ ಫೇಕ್ ಸುದ್ದಿ ಎಂದ ಸಿ ಟಿ ರವಿ : ನಕಲಿ ಪಟ್ಟಿಯ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎನ್ನುವ ಆರೋಪವನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾಡಿದ್ದು, ಕಾಂಗ್ರೆಸ್ ಫೇಕ್ ಫ್ಯಾಕ್ಟರಿಯಿಂದ ಇನ್ನೊಂದು ಫೇಕ್ ಸುದ್ದಿ ಹೊರಬಿದ್ದಿದೆ. ಆಂತರಿಕ ಪ್ರಜಾಪ್ರಭುತ್ವ ಜೀವಂತವಾಗಿರುವ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪ್ರಜಾತಾಂತ್ರಿಕ ಮೌಲ್ಯಗಳನ್ನು ಎತ್ತಿ ಹಿಡಿಯುವಂತೆ ಬಿಜೆಪಿ ನಾಯಕತ್ವ ನಡೆಸುತ್ತಿದೆ. ಪ್ರಜಾತಂತ್ರವೆಂದರೆ ಏನೆಂದು ತಿಳಿಯದ ಗುಲಾಮಿ ಮನಸ್ಥಿತಿಯ ಕಾಂಗ್ರೆಸ್ ಸುಳ್ಳು ಸುದ್ದಿಯನ್ನು ಹರಡುವುದೇ ರಾಜಕೀಯ ಎಂದುಕೊಂಡಿದ್ದು, ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿಲ್ಲ. ಈಗ ಹರಿದಾಡುತ್ತಿರುವುದು ನಕಲಿ ಪಟ್ಟಿ ಎಂದು ತಿಳಿಸಿದ್ದಾರೆ.
"ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ನಕಲಿಯಾಗಿದ್ದು, ಕೇಂದ್ರ ಸಂಸದೀಯ ಮಂಡಳಿಯಲ್ಲಿ ಚರ್ಚೆಯಾದ ನಂತರವೇ ಪಟ್ಟಿ ಬಿಡುಗಡೆಯಾಗಲಿದೆ. ಹಾಗಾಗಿ, ಈ ಪಟ್ಟಿಗೆ ಯಾರೂ ಆತಂಕಗೊಳ್ಳಬಾರದು" ಎಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಎಂ.ಜಿ.ಮಹೇಶ್ ಸ್ಪಷ್ಟೀಕರಣ ನೀಡಿದ್ದಾರೆ.
"ಅಭ್ಯರ್ಥಿ ಘೋಷಣೆಯಾಗಿದೆ ಎನ್ನುವ ವರದಿ ಬಿತ್ತರವಾಗುತ್ತಿದೆ, ಇದು ಸತ್ಯಕ್ಕೆ ದೂರವಾದದ್ದು. ಇನ್ನೂ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಎರಡು ದಿನದಲ್ಲಿ ಚುನಾವಣಾ ಸಮಿತಿ ತನ್ನ ಕಟ್ಟ ಕಡೇಯ ವರದಿಯನ್ನು ಕೇಂದ್ರ ಸಂಸದೀಯ ಮಂಡಳಿಗೆ ಕಳುಹಿಸಿ ಕೊಡಲಿದೆ. 224 ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಕೂಲಂಕಶವಾಗಿ ಚರ್ಚಿಸಿ ಕಳಿಸಲಾಗುತ್ತದೆ. ಅಲ್ಲಿ ಚರ್ಚೆಯಾದ ನಂತರ ಪಟ್ಟಿ ಬಿಡುಗಡೆಯಾಗುತ್ತದೆ" ಎಂದು ಅವರು ತಿಳಿಸಿದ್ದಾರೆ.
ಬಿಜೆಪಿ ವಿರುದ್ಧ ಕಾಂಗ್ರೆಸ್ ಆರೋಪ: 'ತಾನೇ ಗುಜರಾತ್ ಮಾದರಿ ಅನುಸರಿಸಿ ಕ್ಷೇತ್ರ ಬದಲಾವಣೆ ಮಾಡೋದು, ತಾನೇ ಲಿಸ್ಟ್ ರಿಲೀಸ್ ಮಾಡೋದು, ಆಮೇಲೆ ಆಕಾಂಕ್ಷಿಗಳ, ಬೆಂಬಲಿಗರ ಪ್ರತಿಭಟನೆ ತಾಳಲಾರದೇ, ತಾನೇ ಅದನ್ನು ಫೇಕ್ ಅಂತ ಕರೆಯೋದು! ಅಭ್ಯರ್ಥಿಗಳ ಮೊದಲ ಪಟ್ಟಿ ಹಿಂಪಡೆಸಿ ಸಂತೋಷಪಡುತ್ತಿರೋದು ಯಾರು? ಪಟ್ಟಿ ಹಿಂಪಡೆದಿದ್ದು ಶಿಕಾರಿಪುರದಲ್ಲಿ ವಿಜಯೇಂದ್ರೆ ಹೆಸರು ಬಂದಿದ್ದಕ್ಕಾ? ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಟ್ವಿಟ್ ಮಾಡಿದೆ.
ಇದನ್ನೂ ಓದಿ: ಇಂದು ದಿಲ್ಲಿಯಲ್ಲಿ ಜೆಪಿ ನಡ್ಡಾ ನೇತೃತ್ವದಲ್ಲಿ ಸಭೆ: ರಾಜ್ಯ ವಿಧಾನಸಭೆ ಚುನಾವಣೆ ಬಗ್ಗೆ ಚರ್ಚೆ?