ಬೆಂಗಳೂರು: ಪಂಗೋಲಿನ್ ಚಿಪ್ಪುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಹನುಮಂತ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕಿರಣ್ ಬಂಧಿತ ಆರೋಪಿಯಾಗಿದ್ದು, ಆತನಿಂದ 30 ಕೆ.ಜಿ ಪಂಗೋಲಿನ್ ಚಿಪ್ಪುಗಳನ್ನು ವಶಕ್ಕೆ ಪಡೆಯಲಾಗಿದೆ.
ಔಷಧ, ಅಲಂಕಾರ, ಮಾಂಸದ ಕಾರಣದಿಂದ ಬೇಟೆಯಾಡಲ್ಪಡುತ್ತಿರುವ ಪಂಗೋಲಿನ್ ಒಂದು ನಿರುಪದ್ರವಿ ಹಾಗೂ ಅಳಿವಿನಂಚಿನಲ್ಲಿರುವ ಪ್ರಭೇದದ ಪ್ರಾಣಿಯಾಗಿದೆ. ಈ ಪ್ರಾಣಿ ಉತ್ತರ ಭಾರತ, ಆಗ್ನೇಯ ಏಷ್ಯಾದ ಉತ್ತರ ಭಾಗ, ದಕ್ಷಿಣ ಚೀನಾದಲ್ಲಿ ಹೆಚ್ಚು ಕಂಡು ಬರುತ್ತದೆ. ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ ಹಾಗೂ ದಾವಣಗೆರೆ ಭಾಗಗಳಲ್ಲಿಯೂ ಪಂಗೋಲಿನ್ ಪ್ರಾಣಿ ಕಾಣಸಿಗುತ್ತದೆ. ಮಾರುಕಟ್ಟೆಯಲ್ಲಿ ಪಂಗೋಲಿನ್ನ ಒಂದು ಚಿಪ್ಪಿಗೆ ತೊಂಬತ್ತು ಸಾವಿರದವರೆಗೂ ಮೌಲ್ಯವಿದ್ದು, ವಿದೇಶದಲ್ಲಿ ಪಂಗೋಲಿನ್ ಚಿಪ್ಪುಗಳಿಗೆ ಅಧಿಕ ಮೌಲ್ಯವಿದೆ.
ಸದ್ಯ ಆರೋಪಿ ಕಿರಣ್ನನ್ನು ಬಂಧಿಸಿರುವ ಹನುಮಂತ ನಗರ ಠಾಣಾ ಪೊಲೀಸರು ಆತನಿಂದ 25 ಲಕ್ಷ ಬೆಲೆ ಬಾಳುವ 30 ಕೆ.ಜಿ ಚಿಪ್ಪುಗಳನ್ನು ವಶಕ್ಕೆ ಪಡೆದಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸಾಲ ಪಾವತಿಸಲು ಹೇಳಿದ್ದಕ್ಕೆ ಕಾಂಡಿಮೆಂಟ್ಸ್ ಮಾಲೀಕನ ಮೇಲೆ ಹಲ್ಲೆ- ಆರೋಪಿಯ ಬಂಧನ: ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಕಾಂಡಿಮೆಂಟ್ಸ್ ಮಾಲೀಕನ ಮತ್ತು ಆತನ ಫ್ಯಾಮಿಲಿ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಕೆಂಗೇರಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕೆಂಗೇರಿ ಉಪನಗರದ ಚೌಡೇಶ್ವರಿ ಕಾಂಡಿಮೆಂಟ್ಸ್ ಮಾಲೀಕ ಶಿವಕುಮಾರ್, ಆತನ ಪತ್ನಿ, ಮಗುವಿನ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಟಿಪ್ಪು ಎಂಬಾತನನ್ನು ಬಂಧಿಸಲಾಗಿದೆ.
ಶಿವಕುಮಾರ್ ಅವರ ಅಂಗಡಿಗೆ ಬರುತ್ತಿದ್ದ ಆರೋಪಿ ಆಗಾಗ ಟೀ, ಸಿಗರೇಟ್ ಪಡೆದು ಸಾಲ ಹೇಳಿ ಹೋಗುತ್ತಿದ್ದನು. ಅದೇ ರೀತಿ ಜನವರಿ 10ರಂದು ಮಧ್ಯಾಹ್ನ ಅಂಗಡಿಗೆ ಬಂದಿದ್ದ ಆರೋಪಿ ಬಳಿ ಶಿವಕುಮಾರ್, ಹಳೆಯ ಸಾಲ 950 ರೂ. ಬಾಕಿ ಇರುವುದನ್ನು ಕೇಳಿದ್ದರು. ಈ ವೇಳೆ, 'ನನಗೆ ಹಣ ಕೇಳುತ್ತೀಯಾ? ನಾನ್ಯಾರು ಅಂತಾ ಸಾಯಂಕಾಲ ತೋರಿಸುತ್ತೇನೆ' ಎಂದಿದ್ದ ಆರೋಪಿ ವಾಪಾಸಾಗಿದ್ದನು. ಅದೇ ದಿನ ಸಂಜೆ ಇನ್ನೂ ಮೂವರೊಂದಿಗೆ ಕಾರಿನಲ್ಲಿ ಬಂದಿದ್ದ ಆರೋಪಿ ಟೀ ಕೇಳಿದಾಗ, ಸಾಲ ಪಾವತಿಸುವಂತೆ ಶಿವಕುಮಾರ್ ಕೇಳಿದ್ದರು.
ಈ ವೇಳೆ ಸಿಟ್ಟಿಗೆದ್ದ ಆರೋಪಿ ಅಂಗಡಿಯೊಳಗೆ ನುಗ್ಗಿ ಶಿವಕುಮಾರ್ ಮುಖಕ್ಕೆ ಪಂಚ್ ಮಾಡಿ ಹಲ್ಲೆ ಮಾಡಿದ್ದನು. ಶಿವಕುಮಾರ್ ರಕ್ಷಣೆಗೆ ಬಂದ ಆತನ ಪತ್ನಿ ಹಾಗೂ ಮಗನನ್ನೂ ತಳ್ಳಿ ಇಟ್ಟಿಗೆಯಿಂದ ಹೊಡೆದಿದ್ದ ಆರೋಪಿ ಸ್ಥಳದಿಂದ ಪರಾರಿಯಾಗಿದ್ದನು. ಕಾಂಡಿಮೆಂಟ್ಸ್ ಮಾಲೀಕ ಶಿವಕುಮಾರ್ ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಕೆಂಗೇರಿ ಠಾಣಾ ಪೊಲೀಸರು ಆರೋಪಿ ಟಿಪ್ಪುನನ್ನು ಬಂಧಿಸಿದ್ದು, ಮತ್ತೋರ್ವ ಆರೋಪಿಗಾಗಿ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಓಲಾ ಆ್ಯಪ್ನಲ್ಲಿ ಬುಕ್ ಮಾಡಿ ಕಾರು ದರೋಡೆ ಮಾಡುತ್ತಿದ್ದ ಗ್ಯಾಂಗ್ ಅಂದರ್: ಓಲಾ ಆ್ಯಪ್ ಮೂಲಕ ಬುಕ್ ಮಾಡಿ ಕಾರನ್ನು ದರೋಡೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗನ್ನು ನೆಲಮಂಗಲದ ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸಂತೋಷ್ ಅಲಿಯಾಸ್ ಸಂತು (26), ಭರತ್ ರಾವ್ ಅಲಿಯಾಸ್ ಭರತ್ (30), ಗೌಡ ಬಿ.ಅರ್ (24) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಲ್ಲಿ ಸಂತೋಷ್ ಈ ಹಿಂದೆ 10 ಪ್ರಕರಣಗಳಲ್ಲಿ, ಭರತ್ ರಾವ್ 7 ಪ್ರಕರಣಗಳಲ್ಲಿ, ಗೌಡ ಒಂದು ಪ್ರಕರಣದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.
ಮಾದನಾಯಕನಹಳ್ಳಿ ಠಾಣಾ ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಂದಹಾಗೆ ಈ ಗ್ಯಾಂಗ್ ಓಲಾ ಆ್ಯಪ್ ಇರುವ ಮೊಬೈಲನ್ನು ಕದ್ದು, ಅದರಿಂದಲೇ ಓಲಾ ಕ್ಯಾಬ್ ಬುಕ್ ಮಾಡುತ್ತಿತ್ತು. ಪಿಕ್ ಅಪ್‌ಗೆ ಬಂದ ಕಾರನ್ನು ಹೈವೆಗೆ ಕರೆದೊಯ್ದು ಹಿಂಬದಿ ಸೀಟ್‌ನಿಂದ ಡ್ರೈವರ್ ಕುತ್ತಿಗೆಗೆ ಹಗ್ಗದಿಂದ ಬಿಗಿದು ದರೋಡೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಂದ 25 ಲಕ್ಷ ರೂ ಮೌಲ್ಯದ 3 ಕಾರುಗಳು, 3 ಮೋಟಾರ್ ಬೈಕ್, 2 ಆಟೋ ರಿಕ್ಷಾ ಮತ್ತು ಮೊಬೈಲ್ ಫೋನ್‌ಗಳ ಜಪ್ತಿ ಮಾಡಲಾಗಿದೆ. ಈ ಸಂಬಂಧ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳನ್ನು ಇನ್ನಷ್ಟು ತನಿಖೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು ಗಾಂಜಾ ಪ್ರಕರಣ: ವೈದ್ಯ ಸೇರಿ ಮತ್ತಿಬ್ಬರು ಅರೆಸ್ಟ್, ಬಂಧಿತರ ಸಂಖ್ಯೆ 15ಕ್ಕೇರಿಕೆ