ಬೆಂಗಳೂರು : ಆರೋಪಿಯು ಒಮ್ಮೆ ನ್ಯಾಯಾಲಯದ ಎದುರು ವಕೀಲರ ಮೂಲಕ ಅಥವಾ ನೇರವಾಗಿ ಹಾಜರಾದ ನಂತರ ನಿರೀಕ್ಷಣಾ ಜಾಮೀನು ಕೋರಿ ಸಿಆರ್ಪಿಸಿ ಸೆಕ್ಷನ್ 438ರ ಅಡಿಯಲ್ಲಿ ಅರ್ಜಿ ಸಲ್ಲಿಸಲಾಗದು ಎಂದು ಹೈಕೋರ್ಟ್ ತೀರ್ಪು ನೀಡಿದೆ.
ವನ್ಯಜೀವಿ ಸಂರಕ್ಷಣೆ ಕಾಯ್ದೆ ಅಡಿ ದಾಖಲಿಸಿರುವ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಗೌರಿಬಿದನೂರಿನ ರಮೇಶ್ ಎಂಬುವರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ ಸಂದೇಶ್ ಅವರಿದ್ದ ಪೀಠ ಈ ಆದೇಶ ಮಾಡಿದೆ.
ಪ್ರಕರಣದ ಹಿನ್ನೆಲೆ
2020ರ ಜುಲೈ 8ರಂದು ಅರ್ಜಿದಾರ ರಮೇಶ್ ಮನೆಯಲ್ಲಿ ಮೂರು ಮಾನಿಟರ್ ಲಿಜಾರ್ಡ್ (ಉಡ) ಹಾಗೂ ಮೂರು ಗ್ರೇ ಫಾಂಕೋಲಿನ್ (ಪಕ್ಷಿ) ವಶಪಡಿಸಿಕೊಂಡಿದ್ದ ಗೌರಿಬಿದನೂರು ಉಪ ವಲಯ ಅರಣ್ಯಾಧಿಕಾರಿ ವನ್ಯಜೀವಿ ಸಂರಕ್ಷಣೆ ಕಾಯ್ದೆ-1972ರ ಸೆಕ್ಷನ್ 55ಬಿ, 51ರ ಅಡಿ ಪ್ರಕರಣ ದಾಖಲಿಸಿ, ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ಕಾಗ್ನಿಸೆನ್ಸ್ ತೆಗೆದುಕೊಂಡಿದ್ದ ವಿಚಾರಣಾ ನ್ಯಾಯಾಲಯ ಆರೋಪಿಗೆ ಸಮನ್ಸ್ ಜಾರಿ ಮಾಡಿತ್ತು. ಈ ವೇಳೆ ಆರೋಪಿ ರಮೇಶ್ ವಕೀಲರ ಮೂಲಕ 2020ರ ಮೇ 5ರಂದು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಹಾಗೆಯೇ ನ್ಯಾಯಾಲಯದ ವಿಚಾರಣೆಗೆ ಖುದ್ದು ಹಾಜರಾತಿಯಿಂದ ವಿನಾಯ್ತಿ ಕೋರಿದ್ದರು. ಸಿಆರ್ಪಿಸಿ ಸೆಕ್ಷನ್ 205ರ ಅಡಿ ಸಲ್ಲಿಸಿದ್ದ ಅರ್ಜಿ ಪರಿಗಣಿಸಿದ ಕೋರ್ಟ್ ಹಾಜರಿಗೆ ವಿನಾಯ್ತಿ ನೀಡಿತ್ತು.
ಹಾಗಿದ್ದೂ, ನ್ಯಾಯಾಲಯದ ವಿಚಾರಣೆಗೆ ನಿರಂತರವಾಗಿ ಗೈರು ಹಾಜರಾಗಿದ್ದರಿಂದ ಕೋರ್ಟ್ ಆರೋಪಿ ರಮೇಶ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿತ್ತು. ಈ ವೇಳೆ ಆರೋಪಿ ನಿರೀಕ್ಷಣಾ ಜಾಮೀನು ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಅರ್ಜಿ ವಜಾಗೊಂಡಿದ್ದರಿಂದ ಹೈಕೋರ್ಟ್ ಮೆಟ್ಟಿಲೇರಿದ್ದ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಹೈಕೋರ್ಟ್ ತೀರ್ಪು: ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಒಮ್ಮೆ ಆರೋಪಿ ವಕೀಲರ ಮೂಲಕ ಅಥವಾ ಖುದ್ದಾಗಿ ನ್ಯಾಯಾಲಯ ಮುಂದೆ ಹಾಜರಾದ ನಂತರ ವಿಚಾರಣೆಗೆ ಗೈರು ಹಾಜರಾದರೆ ಆತನ ವಿರುದ್ದ ನ್ಯಾಯಾಲಯ ವಾರಂಟ್ ಹೊರಡಿಸಬಹುದು. ಇಂತಹ ಸಂದರ್ಭದಲ್ಲಿ ಆರೋಪಿ ಸಿಆರ್ಪಿಸಿ ಸೆಕ್ಷನ್ 438 ಅಡಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಲು ಅಥವಾ ಅದನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದಿದೆ.
ಅಲ್ಲದೇ, ಅರ್ಜಿದಾರ ಈ ಹಿಂದೆ ವಕೀಲರ ಮೂಲಕ ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗಿ ಸಿಆರ್ಪಿಸಿ ಸೆಕ್ಷನ್ 317ರ ಬದಲಿಗೆ ಸೆಕ್ಷನ್ 205ರ ಅಡಿಯಲ್ಲಿ ವಿನಾಯ್ತಿ ಪಡೆದಿದ್ದಾನೆ. ವಿಚಾರಣಾ ನ್ಯಾಯಾಲಯವು ಅದನ್ನು ಪರಿಗಣಿಸಿದೆ. ಹೀಗಾಗಿ, ಅರ್ಜಿದಾರ ಸಿಆರ್ಪಿಸಿ ಸೆಕ್ಷನ್ 438ರ ಅಡಿ ನಿರೀಕ್ಷಣಾ ಜಾಮೀನು ಕೋರಲು ಸಾಧ್ಯವಿಲ್ಲ. ಬದಲಿಗೆ, ಅರ್ಜಿದಾರ ತನ್ನ ವಿರುದ್ಧ ಹೊರಡಿಸಿರುವ ವಾರಂಟ್ ಹಿಂಪಡೆಯಲು ವಿಚಾರಣಾ ನ್ಯಾಯಾಲಯಕ್ಕೆ ಮನವಿ ಮಾಡಬಹುದು ಎಂದು ತಿಳಿಸಿ, ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದೆ.
ಇದನ್ನೂ ಓದಿ:ಬಡ್ಡಿ ದರ ಇಳಿಸಿದಾಗ ಸಾಲಗಾರರಿಗೂ ಮಾಹಿತಿ ನೀಡಬೇಕು : ಹೈಕೋರ್ಟ್ ಆದೇಶ