ಬೆಂಗಳೂರು : ಅಪ್ರಾಪ್ತೆಯೊಂದಿಗೆ ಪ್ರೀತಿ ನಿವೇದನೆ ಮಾಡಿಕೊಂಡು ಒಪ್ಪಿಕೊಳ್ಳದಿದ್ದಲ್ಲಿ ಮುಖಕ್ಕೆ ಆ್ಯಸಿಡ್ ಹಾಕುವುದಾಗಿ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಯವಕನೊಬ್ಬನಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ. ಅಪ್ರಾಪ್ತೆಗೆ ಬೆದರಿಕೆ ಹಾಕಿದ್ದ ಪ್ರಕರಣಲ್ಲಿ ಬಂಧನಕ್ಕೆ ಒಳಗಾಗಿರುವ ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನ ಹೊಸಕಲ್‌ನಾಯಕನಕಹಳ್ಳಿ ನಿವಾಸಿ ಪವನ್ (26) ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ. ಉಮಾ ಅವರಿದ್ದ ನ್ಯಾಯ ಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಅಲ್ಲದೆ, ಸಂತ್ರಸ್ತೆಯು ಶಾಲೆ ಹೋಗುತ್ತಿರುವ ವೇಳೆ ಆರೋಪಿ ಹಿಂಬಾಲಿಸಿಕೊಂಡು ಹೋಗಿ ಬಲವಂತವಾಗಿ ತಡೆದು ನಿಲ್ಲಿಸುತ್ತಿದ್ದ. ಪ್ರೀತಿ ಮಾಡುವಂತೆ ಒತ್ತಾಯಿಸುತ್ತಿದ್ದ. ತನ್ನೊಂದಿಗೆ ಸಹಕರಿಸದಿದ್ದರೆ ಆ್ಯಸಿಡ್ ಎರಚುವುದಾಗಿ ಬೆದರಿಕೆ ಹಾಕಿದ್ದಾನೆ. ಆರೋಪಿ ಜಾಮೀನು ಮಂಜೂರಾತಿಗೆ ತನ್ನ ಆಕ್ಷೇಪಣೆ ರವಾನಿಸಿದ್ದಾರೆ. ಆರೋಪಿ ಸಹ ತನ್ನದೇ ಗ್ರಾಮದ ನಿವಾಸಿಯಾಗಿದ್ದಾನೆ ಎಂದು ಆಕ್ಷೇಪಣೆಯಲ್ಲಿ ಸಂತ್ರಸ್ತೆ ತಿಳಿಸಿದ್ದಾಳೆ.
ಆರೋಪಿಯು ಜಾಮೀನು ಮೇಲೆ ಬಿಡುಗಡೆಯಾದರೆ ತನ್ನ ಮೇಲೆ ಆ್ಯಸಿಡ್ ಎರಚಬಹುದು. ತನಗೆ ಮತ್ತು ತನ್ನ ಕುಟುಂಬ ಸದಸ್ಯರಿಗೆ ಜೀವ ಬೆದರಿಕೆಯಿದೆ ಎಂದು ಆಕ್ಷೇಪಣೆಯಲ್ಲಿ ಸಂತ್ರಸ್ತೆ ಆತಂಕ ವ್ಯಕ್ತಪಡಿಸಿದ್ದಾರೆ. ಆಕೆಯ ಭಯ ನ್ಯಾಯ ಸಮ್ಮತವಾಗಿದೆ. ಒಂದೊಮ್ಮೆ ಆರೋಪಿ ಆ್ಯಸಿಡ್ ದಾಳಿ ಮಾಡಿದರೆ, ಅದರಿಂದ ಉಂಟಾಗುವ ನಷ್ಟವನ್ನು ಭರಿಸಲಾಗದು ಎಂದು ನ್ಯಾಯಪೀಠ ಜಾಮೀನು ನಿರಾಕರಣೆಗೆ ಕಾರಣವನ್ನು ನೀಡಿದೆ.
ಪ್ರಕರಣದ ಹಿನ್ನೆಲೆ ಏನು?: ಆರೋಪಿ ಪವನ್ 14 ವರ್ಷದ ಸಂತ್ರಸ್ತೆಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಪ್ರೀತಿ ಮಾಡಲು ಒಪ್ಪದಿದ್ದರೆ ಮುಖಕ್ಕೆ ಆ್ಯಸಿಡ್ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದ. ಈ ಸಂಬಂಧ ಸಂತ್ರಸ್ತೆ ನೀಡಿದ ದೂರು ಆಧರಿಸಿ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿ ಆರೋಪಿಯನ್ನು ಬಂಧಿಸಿದ್ದರು. ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹಾಸನದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜಾಮೀನು ಕೋರಿ ನಿರಾಕರಿಸಿತ್ತು. ಇದರಿಂದ ಆತನ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಮುರುಘಾ ಶ್ರೀ ವಿರುದ್ಧ ಪ್ರಕರಣ ದಾಖಲಿಸಲು ಪ್ರಚೋದನೆ ಆರೋಪ: ಜ.31ಕ್ಕೆ ಅರ್ಜಿ ವಿಚಾರಣೆ
ವಿಚಾರಣೆ ವೇಳೆ ಆರೋಪಿ ಪರ ವಕೀಲರು ವಾದ ಮಂಡಿಸಿ, ಆರೋಪಿಯು ಯಾವುದೇ ತಪ್ಪು ಮಾಡಿಲ್ಲ. ಆತನನ್ನು ಆಧಾರವಿಲ್ಲದೆ ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಗಿದೆ. 2022ರ ಜೂನ್ 12ರಿಂದ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ. ಬಾಲಕಿಯನ್ನು ಬಲವಂತವಾಗಿ ತಡೆದು ನಿಲ್ಲಿಸಿದ, ಮರ್ಯಾದೆ ಕಳೆದ ಮತ್ತು ಜೀವ ಬೆದರಿಕೆ ಹಾಕಿದ ಆರೋಪವಿದೆ. ಆ ಅಪರಾಧ ಕೃತ್ಯಕ್ಕೆ ಜೀವಾವಧಿ ಶಿಕ್ಷೆ ಅಥವಾ ಮರಣ ದಂಡನೆ ಶಿಕ್ಷೆ ವಿಧಿಸುವ ಅವಕಾಶವೇನು ಇಲ್ಲ.
ಈಗಾಗಲೇ ಪ್ರಕರಣದ ತನಿಖಾ ಪೂರ್ಣಗೊಂಡಿದ್ದು, ದೋಷಾರೋಪಣೆ ಪಟ್ಟಿ ಸಹ ಸಲ್ಲಿಕೆಯಾಗಿದೆ. ಆದ್ದರಿಂದ ಅರ್ಜಿದಾರನ ಬಂಧನದ ಅವಶ್ಯಕತೆ ಇಲ್ಲವಾಗಿದೆ. ಬಂಧನದಲ್ಲೇ ಮುಂದುವರೆಸುವುದು ಆರೋಪಿಗೆ ಪೂರ್ವ ವಿಚಾರಣಾ ಶಿಕ್ಷೆ ವಿಧಿಸಿದಂತಾಗಲಿದ್ದು, ಜಾಮೀನು ನೀಡಬೇಕು ಎಂದು ಕೋರಿದರು.
ಇದಕ್ಕೆ ಆಕ್ಷೇಪಿಸಿದ ಸರ್ಕಾರಿ ವಕೀಲರು, ಅರ್ಜಿದಾರನ ಮೇಲಿರುವ ಆರೋಪಗಳು ಗಂಭೀರ ಸ್ವರೂಪದ್ದಾಗಿವೆ. ಒಂದೊಮ್ಮೆ ಆರೋಪಿಯನ್ನು ಜಾಮೀನು ಮೇಲೆ ಬಿಡುಗಡೆ ಮಾಡಿದರೆ, ಆತ ತನ್ನ ಮೇಲೆ ಆ್ಯಸಿಡ್ ದಾಳಿ ಮಾಡಬಹುದು ಎಂಬ ಆತಂಕವನ್ನು ಸಂತ್ರಸ್ತೆ ವ್ಯಕ್ತಪಡಿಸಿದ್ದಾರೆ. ಆರೋಪಿಯಿಂದ ಸಂತ್ರಸ್ತೆಗೆ ಜೀವ ಬೆದರಿಕೆಯಿದೆ. ಜೀವ ರಕ್ಷಣೆ ಮಾಡಿಕೊಳ್ಳುವುದಕ್ಕಾಗಿ ಸಂತ್ರಸ್ತೆಯು ಕುಟುಂಬ ಸಮೇತ ಗ್ರಾಮವನ್ನು ಬಿಟ್ಟು ತೆರಳುವ ಸಾಧ್ಯತೆಯಿದೆ. ಹಾಗಾಗಿ, ಆರೋಪಿಗೆ ಜಾಮೀನು ನೀಡಬಾರದು ಎಂದು ಕೋರಿದರು. ಸಂತ್ರಸ್ತೆಯ ಆತಂಕವನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್, ಆರೋಪಿಗೆ ಜಾಮೀನು ನಿರಾಕರಿಸಿದೆ.
ಇದನ್ನೂ ಓದಿ: ಅತ್ಯಾಚಾರ ಎಸಗಿದ ಸಂತ್ರಸ್ತೆಯನ್ನೇ ವಿವಾಹವಾದ ಆರೋಪಿ: ಪ್ರಕರಣ ಮುಕ್ತಾಯಗೊಳಿಸಿದ ಹೈಕೋರ್ಟ್