ಬೆಂಗಳೂರು : ಗೃಹಿಣಿಯನ್ನು ಹತ್ಯೆಗೈದು, ಮನೆಯಲ್ಲಿದ್ದ ಹಣ ಹಾಗೂ ಚಿನ್ನಾಭರಣ ದೋಚಿದ್ದ ಆರೋಪಿಯನ್ನು ಎಲೆಕ್ಟ್ರಾನಿಕ್ ಸಿಟಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ರಜನೀಶ್ ಕುಮಾರ್ ಬಂಧಿತ ಆರೋಪಿ. ಜನವರಿ 4ರಂದು ಎಲೆಕ್ಟ್ರಾನಿಕ್ ಸಿಟಿಯ ಪ್ರಭಾಕರ ರೆಡ್ಡಿ ಲೇಔಟ್ನಲ್ಲಿರುವ ಮನೆಯಲ್ಲಿ ನೀಲಂ (30) ಎಂಬುವರನ್ನು ಆರೋಪಿ ಕತ್ತು ಹಿಸುಕಿ ಕೊಲೆ ಮಾಡಿದ್ದ. ಬಳಿಕ ಆರೋಪಿ ಮನೆಯಲ್ಲಿದ್ದ ಎಂಟು ಸಾವಿರ ರೂಪಾಯಿ ನಗದು ಹಾಗೂ ಕಿವಿಯೋಲೆಯನ್ನು ಕದ್ದು ಪರಾರಿಯಾಗಿದ್ದ.
ಮೃತ ನೀಲಂಳ ಪತಿ ಪ್ರದ್ಯುಂ ಪತಿ ಪೇಂಟಿಂಗ್ ಕಾಂಟ್ರಾಕ್ಟರ್ ಆಗಿದ್ದು, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಹಾರ್ಡ್‌ವೇರ್ ಶಾಪ್ ಹೊಂದಿದ್ದಾರೆ. ಪೇಂಟ್ ಅಂಗಡಿಯಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿದ್ದಾಗ ಸಹಾಯಕ್ಕೆ ಬರುತ್ತಿದ್ದ ರಜನೀಶ್ ಕುಮಾರ್ ಕಳೆದ ಒಂದೂವರೆ ವರ್ಷದಿಂದ ಪ್ರದ್ಯುಂ ಕುಟುಂಬಕ್ಕೆ ಪರಿಚಿತನಾಗಿದ್ದ. ಇಬ್ಬರು ಉತ್ತರಪ್ರದೇಶವರಾಗಿದ್ದು, ಮನೆಯ ಸದಸ್ಯರ ಪರಿಚಯವಿತ್ತು. ಪೇಂಟ್ ಅಂಗಡಿಯಲ್ಲಿ ವ್ಯಾಪಾರವಾಗುತ್ತಿದ್ದ ಹಣವನ್ನು ಪ್ರದ್ಯುಂ ಮನೆಗೆ ತೆಗೆದುಕೊಂಡು ಹೋಗುವುದರ ಬಗ್ಗೆಯೂ ಆರೋಪಿಗೆ ಮಾಹಿತಿ ಇತ್ತು. ಆದ್ದರಿಂದ ಮನೆಯಲ್ಲಿ ನೀಲಂ ಒಬ್ಬಳೇ ಇದ್ದಾಗ ಹಣ ದೋಚುವ ಸಂಚು ರೂಪಿಸಿದ್ದನು ಎಂದು ತಿಳಿದುಬಂದಿತ್ತು.
ಆರೋಪಿ ಜನವರಿ 4ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ನೀಲಂ ಒಬ್ಬಳೇ ಇದ್ದಾಗ ಮನೆಗೆ ಹೋಗಿದ್ದ. ಈ ವೇಳೆ ರಜನೀಶ್ ಬಳಿ 'ಊಟ ಮಾಡಿದ್ದೀಯಾ? ಎಂದು ಪ್ರಶ್ನಿಸಿದ್ದ ನೀಲಂ, ಆತ 'ಇಲ್ಲ' ಎಂದಾಗ ಊಟ ತರಲು ಅಡುಗೆ ಮನೆಗೆ ಹೋಗಿದ್ದಳು. ನೀಲಂ ಹಿಂದೆಯೇ ತೆರಳಿದ್ದ ರಜನೀಶ್ ಆಕೆಯ ಕುತ್ತಿಗೆಗೆ ಟವೆಲ್ ಬಿಗಿದು ಕೊಲೆ ಮಾಡಿದ್ದನು. ಮನೆಯಲ್ಲಿ ನಿರೀಕ್ಷಿಸಿದಷ್ಟು ಹಣ ಸಿಗದಿದ್ದಾಗ ಮೃತಳ ಮೈಮೇಲಿದ್ದ ಓಲೆ, ಎಂಟು ಸಾವಿರ ನಗದು ತೆಗೆದುಕೊಂಡು ಪರಾರಿಯಾಗಿದ್ದ ಎಂದು ಪೊಲೀಸ್ ತನಿಖೆ ಮೂಲಕ ತಿಳಿದುಬಂದಿತ್ತು.
ಸಂಜೆ ನೀಲಂಳ 7 ವರ್ಷದ ಮಗ ಮನೆಗೆ ಬಂದಾಗ, ತಾಯಿ ಪ್ರಜ್ಞಾಹೀನಳಾಗಿ ಬಿದ್ದಿರುವುದನ್ನ ಗಮನಿಸಿ ತಂದೆ ಪ್ರದ್ಯುಂಗೆ ಕರೆ ಮಾಡಿ ವಿಷಯ ತಿಳಿಸಿದ್ದ. ತಕ್ಷಣ ಮನೆಯ ಸಮೀಪದಲ್ಲೇ ವಾಸವಿದ್ದ ನೀಲಂಳ ಸಹೋದರ ಪಂಕಜ್ಗೆ ಕರೆ ಮಾಡಿದ್ದ ಪ್ರದ್ಯುಂ ವಿಷಯ ತಿಳಿಸಿದ್ದ. ಮನೆಯ ಬಳಿ ಪಂಕಜ್ ತೆರಳಿ ನೋಡಿದಾಗ ನೀಲಂ ಮೃತಪಟ್ಟಿರುವುದು ತಿಳಿದು ಬಂದಿತ್ತು.
ಪೊಲೀಸರು ಹೇಳಿದ್ದೇನು?: ಈ ಬಗ್ಗೆ ಪ್ರತಿಕ್ರಿಯಿಸಿದ ಆಗ್ನೇಯ ವಿಭಾಗದ ಡಿಸಿಪಿ ಸಿ ಕೆ ಬಾಬಾ, ಈ ಪ್ರಕರಣದ ಬಗ್ಗೆ ನಮ್ಮ ತಂಡ ವಿಶೇಷ ಕಾರ್ಯಾಚರಣೆ ನಡೆಸಿತ್ತು. ಏನು ಸುಳಿವು ಇಲ್ಲದಿದ್ದರು ಸಹ ನಮ್ಮ ಪೊಲೀಸರು ಈ ಪ್ರಕರಣವನ್ನು ಭೇದಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಪ್ರದ್ಯುಂ ಬಳಿ ರಜನೀಶ್ ಈ ಹಿಂದೆ ಕೆಲಸ ಮಾಡುತ್ತಿದ್ದ. ಉದ್ಯಮದಲ್ಲಿ ಪ್ರದ್ಯುಂನಷ್ಟು ಎತ್ತರಕ್ಕೆ ಬೆಳೆಯಲಿಲ್ಲ ಎಂಬ ಅಸೂಯೆ ಪಡುತ್ತಿದ್ದನು. ಈ ಕಾರಣಕ್ಕೆ ಆರೋಪಿ ಕೊಲೆ ಮಾಡಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ. ಆರೋಪಿಯಿಂದ ಕೆಲ ವಸ್ತಗಳನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ಈ ಪ್ರಕರಣದ ತನಿಖೆ ಮುಂದುವರಿದಿದೆ ಎಂದು ತಿಳಿಸಿದರು.
ಓದಿ: ಗದಗ: ಜೆಸಿಬಿ ಹರಿದು ಬಾಲಕ ಸ್ಥಳದಲ್ಲೇ ಸಾವು; ಚಾಲಕನ ವಿರುದ್ಧ ಪ್ರಕರಣ ದಾಖಲು