ಬೆಂಗಳೂರು: ನಕಲಿ ಸೀಲ್ ಹಾಗೂ ಲೆಟರ್ ಹೆಡ್ ಬಳಸಿ ಅಮಾಯಕರಿಂದ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ಆರೋಪದಡಿ ಬಂಧಿತನಾಗಿದ್ದ ಆರೋಪಿಯನ್ನು ಮಹಜರಿಗೆಂದು ಆತನ ಮನೆಗೆ ಕರೆದುಕೊಂಡು ಹೋದಾಗ 2ನೇ ಮಹಡಿಯಿಂದ ಹಾರಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿದ್ಯಾರಣ್ಯಪುರದಲ್ಲಿ ನಡೆದಿದೆ.
ಶ್ರೀನಿವಾಸ ನಗರ ನಿವಾಸಿ ಸಿದ್ದಲಿಂಗಸ್ವಾಮಿ ಆತ್ಮಹತ್ಯೆ ಮಾಡಿಕೊಂಡ ಆರೋಪಿ. ಈತನ ವಿರುದ್ಧ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವಿಶ್ವೇಶ್ವರಯ್ಯ ಲೇಔಟ್ನಲ್ಲಿ ಸೈಟ್ಗಳ ಮರು ಹಂಚಿಕೆ ಮಾಡಿಕೊಡುವುದಾಗಿ ನಾಗರಾಜ್ ಎಂಬುವರನ್ನು ನಂಬಿಸಿ ನಕಲಿ ದಾಖಲಿ ಸೃಷ್ಟಿಸಿಕೊಂಡು 13 ಲಕ್ಷ ರೂಪಾಯಿ ಪಡೆದು ವಂಚಿಸಿದ ಆರೋಪದಡಿ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡಿದ್ದ ಪೊಲೀಸರು ಇತ್ತೀಚೆಗಷ್ಟೇ ಸಿದ್ದಲಿಂಗಸ್ವಾಮಿಯನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದರು.
ಓದಿ: ಕುಡಿದು ಬಂದು ಕಾಡುತ್ತಿದ್ದ ಮಗನಿಗೆ 'ಅಂತ್ಯ' ಹಾಡಿದ ತಂದೆ!
ದಾಖಲಾತಿಗೆ ಸಂಬಂಧಿಸಿದ ಕೆಲ ಕಾಗದ ಪತ್ರಗಳು ಹಾಗೂ ವಸ್ತುಗಳು ಮನೆಯಲ್ಲಿ ಇಟ್ಟಿರುವುದಾಗಿ ವಿಚಾರಣೆ ವೇಳೆ ಪೊಲೀಸರಿಗೆ ಬಾಯ್ಬಿಟ್ಟಿದ್ದರಿಂದ ಆರೋಪಿಯನ್ನು ಹನುಮಂತ ನಗರ ಸಿಬ್ಬಂದಿ ಇಂದು ಮಧ್ಯಾಹ್ನ ವಿದ್ಯಾರಣ್ಯಪುರದಲ್ಲಿರುವ ಆತನ ಮನೆಗೆ ಮಹಜರಿಗೆಂದು ಕರೆದುಕೊಂಡು ಹೋಗಿದ್ದಾರೆ. ಮನೆಯಲ್ಲಿ ಹೆಂಡತಿ-ಮಗಳನ್ನು ನೋಡಿ ಮುಜುಗರಕ್ಕೆ ಒಳಗಾಗಿರುವ ಆತ, ನೀರು ಕುಡಿಯುವುದಾಗಿ ಹೇಳಿ ಸಿಬ್ಬಂದಿಯಿಂದ ಬಿಡಿಸಿಕೊಂಡು ಹೋಗಿದ್ದಾನೆ. ಅಡುಗೆ ಮನೆಯ ಮುಖಾಂತರ ತೆರಳಿ 2ನೇ ಮಹಡಿಯಿಂದ ಕೆಳ ಬಿದ್ದಿದ್ದಾನೆ.
ತೀವ್ರ ಗಾಯಗೊಂಡ ಆರೋಪಿಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.