ಬೆಂಗಳೂರು: ಜಾಮೀನು ಪಡೆದು ಹೊರಬಂದ ಎರಡೇ ದಿನದಲ್ಲಿ ಕರ್ತವ್ಯ ನಿರತ ಇಬ್ಬರು ಕಾನ್ಸ್ಟೆಬಲ್ಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು, ಈ ಸಂಬಂಧ ಆರೋಪಿಯನ್ನ ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ. ಜೆ ಜೆ ನಗರ ನಿವಾಸಿ ಅಫ್ರಿದ್ ಖಾನ್ ಬಂಧಿತ ಆರೋಪಿ. ಗಾಯಾಳು ಕಾನ್ಸ್ಟೆಬಲ್ಗಳಾದ ಶಿವಪ್ರಸಾದ್ ದಾನರೆಡ್ಡಿ ಹಾಗೂ ವಿಜಯ್ ಕುಮಾರ್ ಹಲ್ಲೆಗೊಳಗಾದವರು. ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ದೂರು ನೀಡಿದ್ದು, ಅರೋಪಿಯನ್ನು ಬಂಧಿಸಲಾಗಿದೆ.
ಆರೋಪಿ ಅಫ್ರಿದ್ ಕಳೆದ ಸೋಮವಾರವಷ್ಟೇ ಜೈಲಿನಿಂದ ಹೊರಬಂದಿದ್ದ. ಹವಾ ಮೆಂಟೈನ್ ಮಾಡಲು ಶರ್ಟ್ ಹಿಂಭಾಗದಲ್ಲಿ ಮಚ್ಚು ಇಟ್ಟುಕೊಂಡು ತಿರುಗಾಡುತ್ತಿದ್ದ. ನಿನ್ನೆ ಮಧ್ಯಾಹ್ನ 3.45ರ ಸುಮಾರಿಗೆ ಕಾನ್ಸ್ಟೆಬಲ್ಗಳಾದ ಶಿವಪ್ರಕಾಶ್ ಹಾಗೂ ವಿಜಯ್ ಕುಮಾರ್ ಗಸ್ತು ಕರ್ತವ್ಯದಲ್ಲಿ ಅನಂತ ರಾಮಯ್ಯ ಕಾಂಪೌಂಡ್ ಬಳಿ ಬರುವಾಗ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಅಫ್ರೀನ್ನ್ನು ಕಂಡು ತಡೆದು ನಿಲ್ಲಿಸಿದ್ದಾರೆ.
ಎಂಸಿಸಿಟಿಎನ್ಎಸ್ ಆ್ಯಪ್ನಡಿ ಬೆರಳಚ್ಚು ಪಡೆಯಲು ಮುಂದಾಗಿದ್ದಾರೆ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿ ಮೊನ್ನೆಯಷ್ಟೇ ಜೈಲಿಂದ ಬಂದಿರುವೆ. ಚೆಕ್ ಮಾಡಲು ಬಂದಿದ್ದೀರಾ ಎಂದು ಪ್ರಶ್ನಿಸಿದ್ದಾನೆ. ಇನ್ನೊಂದು ಸಲ ಯಾವ ಪೊಲೀಸರು ನನ್ನ ತಂಟೆಗೆ ಬರಕೂಡದು ಎಂದು ಹೇಳಿ ಮಚ್ಚು ಬೀಸಲು ಪ್ರಯತ್ನಿಸಿದ್ದಾನೆ. ಕಾನ್ಸ್ಟೆಬಲ್ ಶಿವಪ್ರಕಾಶ್ ಆರೋಪಿಯನ್ನು ಹಿಡಿದುಕೊಂಡರೆ ವಿಜಯ್ ಆತನ ಕೈಯಲ್ಲಿದ್ದ ಮಚ್ಚನ್ನು ಬಿಡಿಸಿದ್ದಾರೆ. ಅಷ್ಟೊತ್ತಿಗಾಗಲೇ ಶಿವಪ್ರಕಾಶ್ ತಲೆಗೆ ಹಾಗೂ ವಿಜಯ್ ಬಲಗೈಗೆ ಗಾಯ ಮಾಡಿದ್ದಾನೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು, ಹಿನ್ನೆಲೆ ಪರಿಶೀಲಿಸಿದಾಗ ಆತನ ವಿರುದ್ಧ ಜೆ ಜೆ ನಗರ, ಕಲಾಸಿಪಾಳ್ಯ, ಉಪ್ಪಾರಪೇಟೆ ಹಾಗೂ ಚಿಕ್ಕಬಳ್ಳಾಪುರದಲ್ಲಿ ಸುಮಾರು ಏಳಕ್ಕಿಂತ ಹೆಚ್ಚು ವಿವಿಧ ಅಪರಾಧ ಪ್ರಕರಣಗಳು ದಾಖಲಾಗಿರುವುದು ಗೊತ್ತಾಗಿದೆ. ಅರೋಪಿ ವಿರುದ್ಧ ಕೊಲೆ ಯತ್ನ, ಕರ್ತವ್ಯಕ್ಕೆ ಅಡ್ಡಿಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Bengaluru crime: ಜಾಮೀನು ಕೊಡಿಸುವಂತೆ ವಕೀಲರ ಮೇಲೆ ಹಲ್ಲೆ.. ಆರೋಪಿಗಳ ಬಂಧನ