ಬೆಂಗಳೂರು: ಹಗಲಿನಲ್ಲಿ ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿ ಅಕ್ರಮವಾಗಿ ದುಡಿದ ಹಣವನ್ನ ರಾತ್ರಿ ವೇಳೆ ಲೈವ್ ಬ್ಯಾಂಡ್ನಲ್ಲಿ ಹೆಣ್ಣು ಮಕ್ಕಳ ಕುಣಿತ ನೋಡಲು ಹಣ ವಿನಿಯೋಗಿಸಿ ಮೋಜು-ಮಸ್ತಿ ಮಾಡುತ್ತಿದ್ದ ಆರು ಮಂದಿ ಖದೀಮರನ್ನು ಸಿಟಿ ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಆಲಿ, ರಿಜ್ವಾನ್, ವಾಸೀಂ ಅಹಮ್ಮದ್, ಮೊಹಮ್ಮದ್ ಫರಸ್, ಶಫೀ ಉಲ್ಲಾ ಹಾಗೂ ತಬ್ರೇಜ್ ಎಂಬುವರನ್ನು ಬಂಧಿಸಿ ಆರು ದ್ವಿಚಕ್ರ ವಾಹನ, ಎಂಟು ಮೊಬೈಲ್ ಹಾಗೂ ಮಾರಕಾಸ್ತ್ರವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಸಿಟಿ ಮಾರ್ಕೆಟ್ ಠಾಣಾ ವ್ಯಾಪ್ತಿಯ ಸಿಗೆಬೆಲೆ ಮಟನ್ ಮಾರ್ಕೆಟ್ ರೋಡ್ನಲ್ಲಿ ತಡರಾತ್ರಿ ಮಾರಕಾಸ್ತ್ರ ಹಾಗೂ ಖಾರದಪುಡಿ ಇಟ್ಟುಕೊಂಡು ಒಂಟಿಯಾಗಿ ಬರುವವರನ್ನು ಗುರಿಯಾಗಿಸಿಕೊಂಡು ದರೋಡೆಗೆ ಸಂಚು ರೂಪಿಸಿರುವ ಮಾಹಿತಿ ದೊರೆತ ಹಿನ್ನೆಲೆ ಇನ್ಸ್ಪೆಕ್ಟರ್ ಶಿವಕುಮಾರ್ ನೇತೃತ್ವದ ತಂಡ ಕಾರ್ಯಪ್ರವೃತ್ತಗೊಂಡು ಸ್ಥಳಕ್ಕೆ ದೌಡಾಯಿಸಿ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಸ್ಗಳಲ್ಲಿ ಪರ್ಸ್ ಕದಿಯುತ್ತಿದ್ದ ಆರೋಪಿಗಳು: ಲೈವ್ ಬಾಂಡ್ಗಳಲ್ಲಿ ನಡೆಯುವ ಮಹಿಳೆಯರ ಡ್ಯಾನ್ಸ್ ನೋಡುವ ಚಟ ಬೆಳೆಸಿಕೊಂಡಿದ್ದ ಆರೋಪಿಗಳು ಹಣಕ್ಕಾಗಿ ಅಡ್ಡದಾರಿ ಹಿಡಿದಿದ್ದರು. ಮೆಜೆಸ್ಟಿಕ್, ಮಾರ್ಕೆಟ್ ಹಾಗೂ ಕಲಾಸಿಪಾಳ್ಯ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರು ಹೆಚ್ಚಿಸಿರುವ ಬಸ್ ಗಳಲ್ಲಿ ಹತ್ತಿಕೊಂಡು ಕ್ಷಣಾರ್ಧದಲ್ಲಿ ಪರ್ಸ್ ಹಾಗೂ ಮೊಬೈಲ್ ಕಳ್ಳತನ ಮಾಡುತ್ತಿದ್ದರು. ಕಳ್ಳತನ ಮಾಡಿದ ಮೊಬೈಲ್ಗಳನ್ನ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದರು. ಬಂಧಿತರಾದ ಮೊಹಮ್ಮದ್ ಆಲಿ ಹಾಗೂ ರಿಜ್ವಾನ್ ವಿರುದ್ಧ ಸಿಟಿ ಮಾರ್ಕೆಟ್, ಗಿರಿನಗರ, ಡಿ. ಜೆ ಹಳ್ಳಿ ಹಾಗೂ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಮಾಹಿತಿ ನೀಡಿದ್ದಾರೆ.
ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ ಆರೋಪಿಗಳು ಕಡಿಮೆ ಬೆಲೆಯಲ್ಲಿ ಹೆಚ್ಚು ಹಣ ಸಂಪಾದನೆ ಮಾಡಲು ದರೋಡೆ ನಡೆಸಲು ಸಂಚು ರೂಪಿಸಿದ್ದರು. ಸಹಚರರನ್ನು ಒಗ್ಗೂಡಿಸಿಕೊಂಡ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಆಲಿ ಸಿಟಿ ಮಾರ್ಕೆಟ್ನಲ್ಲಿ ದರೋಡೆಗೆ ಯತ್ನಿಸಿದ್ದಾಗ ಪೊಲೀಸರು ತೋಡಿದ ಹಳ್ಳಕ್ಕೆ ಬಿದ್ದಿದ್ದಾರೆ.
ಎಣ್ಣೆಗಾಗಿ ಪಕ್ಕದ ಮನೆಯವನೊಂದಿಗೆ ಕಿರಿಕ್: ಮತ್ತೊಂದು ಪ್ರಕರಣದಲ್ಲಿ ಕುಡಿಯುವುದಕ್ಕೆ ಹಣ ಇಲ್ಲ ಎಂದು ಪಕ್ಕದ ಮನೆಯವನ ಜೊತೆ ಕಿರಿಕ್ ಮಾಡಿಕೊಂಡಿದ್ದ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದೆ. ಬನಶಂಕರಿ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕುಡಿತದ ಚಟವಿದ್ದ ಸುಬ್ರಮಣಿ ತನ್ನ ಪಕ್ಕದ ಮನೆಯವರೊಂದಿಗೆ ಎಣ್ಣೆ ಹೊಡೆಯೋಕೆ ದುಡ್ಡಿಲ್ಲ ಕೊಡು ಎಂದು ಅವಾಜ್ ಹಾಕಿದ್ದಾನೆ. ಈ ವೇಳೆ ಹಣ ಕೊಡದ ಪಕ್ಕದ ಮನೆಯವರಿಗೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ. ಸುಬ್ರಮಣ್ಯನನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ವೃದ್ದೆಯ ಕೈಕಾಲು ಕಟ್ಟಿ ಚಿನ್ನಾಭರಣ ದರೋಡೆ: ವೃದ್ದೆಯ ಕೈಕಾಲು ಕಟ್ಟಿ ಮನೆಯಲ್ಲಿದ್ದ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದ ಪ್ರಕರಣವನ್ನು ಭೇದಿಸುವಲ್ಲಿ ಕುಮಾರಸ್ವಾಮಿ ಲೇಔಟ್ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣದ ಸಂಬಂಧ ತಂದೆ ಮಗನ ಸಹಿತ ಆರು ಜನ ಆರೋಪಿಗಳನ್ನ ಕುಮಾರಸ್ವಾಮಿ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಗ್ಯಾನ್ ರಂಜನ್ ದಾಸ್, ಶ್ರೀಕಾಂತ್ ದಾಶ್, ಸುಭಾಷ್ ಬಿಸ್ವಾಲ್, ಪದ್ಮನಾಭ್ ಕತುವಾ, ಬಿಷ್ಣು ಚರಣ್ ಬೆಹ್ರಾ ಹಾಗೂ ಸುಧಾಂಶು ಬೆಹ್ರಾ ಬಂಧಿತ ಆರೋಪಿಗಳು ಎಂಬುದು ತಿಳಿದು ಬಂದಿದೆ.
ಜನವರಿ 3ರಂದು ಕೆಎಸ್ ಲೇಔಟ್ ಠಾಣಾ ವ್ಯಾಪ್ತಿಯ ವೈಷ್ಣವಿ ಸುರೇಶ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿತ್ತು. ವೃತ್ತಿಯಲ್ಲಿ ವೈದ್ಯೆಯಾಗಿರುವ ವೈಷ್ಣವಿ ತಮ್ಮ ಕ್ಲಿನಿಕ್ಗೆ ತೆರಳಿದ್ದಾಗ ಅವರ ತಾಯಿ ಶ್ರೀಲಕ್ಷ್ಮಿ ಒಬ್ಬರೇ ಮನೆಯಲ್ಲಿದ್ದರು. ಇದನ್ನು ಅರಿತ್ತಿದ್ದ ಆರೋಪಿಗಳು ಕೊರಿಯರ್ ಬಾಯ್ ಹೆಸರಿನ ಮೂಲಕ ವೃದ್ದೆಯನ್ನು ನಂಬಿಸಿ ಬಾಗಿಲು ತೆರೆಸಿದ್ದರು. ಬಳಿಕ ಮನೆಗೆ ನುಗ್ಗಿದ ದುಷ್ಕರ್ಮಿಗಳು ಶ್ರೀಲಕ್ಷ್ಮಿ ಅವರ ಕೈಕಾಲು ಕಟ್ಟಿ, ಬಾಯಿಗೆ ಪ್ಲಾಸ್ಟರ್ ಹಚ್ಚಿ ಮನೆಯಲ್ಲಿದ್ದ 3.50 ಲಕ್ಷ ರೂ ನಗದು, 4 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ಕೆ.ಎಸ್.ಲೇಔಟ್ ಪೊಲೀಸರು ಒಡಿಶಾ ಮೂಲದ ಆರು ಜನ ಆರೋಪಿಗಳನ್ನ ಬಂಧಿಸಿದ್ದಾರೆ.
ಓದಿ: ವೃದ್ದೆಯ ಕೈಕಾಲು ಕಟ್ಟಿ ದರೋಡೆ: ಅಪ್ಪ - ಮಗನ ಸಹಿತ ಆರು ಜನರ ಬಂಧನ