ಬೆಂಗಳೂರು: ಕೌಟುಂಬಿಕ ಸಮಸ್ಯೆಯಿಂದ ಹೊರಬರಲು ಕೆಲಸ ಮಾಡುತ್ತಿದ್ದ ಕಂಪನಿಯ ಹಣವನ್ನು ಅಪರಿಚಿತರು ಖಾರದಪುಡಿ ಎರಚಿ ದರೋಡೆ ಮಾಡಿದ್ದಾರೆ ಎಂದು ನಂಬಿಸಿ ಪೊಲೀಸರಿಗೆ ದೂರು ನೀಡಿದ್ದ ದೂರುದಾರನೇ ಪ್ರಕರಣದ ಆರೋಪಿಯಾಗಿರುವ ವಿಚಿತ್ರ ಘಟನೆ ನಗರದಲ್ಲಿ ನಡೆದಿದೆ.
ಪ್ರಕರಣದಲ್ಲಿ ದೂರುದಾರನಾಗಿ ಇದೀಗ ಆರೋಪಿಯಾಗಿರುವ ಅರುಣ್ ಕುಮಾರ್ ಎಂಬಾತನನ್ನು ಬಂಧಿಸಿರುವ ಬ್ಯಾಟರಾಯನಪುರ ಪೊಲೀಸರು ಆತನನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ. ಜೆ.ಪಿ ನಗರದ ನಿವಾಸಿಯಾಗಿರುವ ಅರುಣ್ ಶಿವಾಜಿನಗರ ಅಟ್ಟಿಕಾಗೋಲ್ಡ್ ನಲ್ಲಿ ಕಳೆದ ಆರು ತಿಂಗಳಿಂದ ಕೆಲಸ ಮಾಡುತ್ತಿದ್ದ. ಹಣವನ್ನು ಬೇರೆ ಬೇರೆ ಬ್ರಾಂಚ್ಗೆ ತಲುಪಿಸುವ ಕೆಲಸ ಮಾಡುತ್ತಿದ್ದ. ಬುಧವಾರ ಬೆಳಗ್ಗೆ ಕೇಂದ್ರ ಕಚೇರಿಯಿಂದ ₹8 ಲಕ್ಷ ಹಣ ಪಡೆದು ಹೊರಟು ಮನೆ ಸೇರಿದ್ದ. ಮನೆಯಲ್ಲಿ ₹4 ಲಕ್ಷ ಹಣವಿಟ್ಟು ನಾಯಂಡಹಳ್ಳಿಗೆ ಬಂದಿದ್ದ.
ಗಾಂಧಿನಗರದ ಬ್ರ್ಯಾಂಚ್ಗೆ ನಾಲ್ಕು ಲಕ್ಷ ರೂಪಾಯಿ ಕೊಟ್ಟು ನಾಯಂಡಹಳ್ಳಿ ಮೆಟ್ರೋ ನಿಲ್ದಾಣದ ಬಳಿಯ ಫ್ಲೈಓವರ್ ಮೇಲೆ ಅಪರಿಚಿತರಿಬ್ಬರು ತನ್ನ ಕಣ್ಣಿಗೆ ಖಾರದ ಪುಡಿ ಎರಚಿ ಹಣವನ್ನು ರಾಬರಿ ಮಾಡಿದ್ದಾರೆ ಎಂದು ಆರೋಪಿಸಿ 112 ಗೆ ಕರೆ ಮಾಡಿ ದರೋಡೆ ಬಗ್ಗೆ ವಿವರಿಸಿದ್ದ. ವಿಷಯ ತಿಳಿದ ಬ್ಯಾಟರಾಯನಪುರ ಪೊಲೀಸರು ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ದರೋಡೆ ಆಗಿರುವ ಅನುಮಾನ ವ್ಯಕ್ತಪಡಿಸಿದ್ದರು. ಪೊಲೀಸ್ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ದರೋಡೆಯ ಹೈಡ್ರಾಮ ಬಗ್ಗೆ ಬಾಯ್ಬಿಟ್ಟಿದ್ದಾನೆ.
ಅಕ್ಕನ ಸಂಸಾರ ಸರಿ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ..
ಈತನ ಡ್ರಾಮ ತಿಳಿದ ಬಳಿಕ ತನ್ನ ಅಕ್ಕನ ಸಂಸಾರ ಸರಿಮಾಡಲು ಕಷ್ಟ ನಿವಾರಿಸಿಕೊಳ್ಳಲು ಹಣ ಬೇಕಿತ್ತು. ಕಂಪನಿಯ ಬಾಸ್ ಬಳಿ ಹಣ ಕೇಳಿದರೆ ಕೊಡಲಿಲ್ಲ. ಹೀಗಾಗಿ, ರಾಬರಿ ನಾಟಕಮಾಡಿ ಹಣ ಹೊಡೆಯಲು ಪ್ಲಾನ್ ಮಾಡಿದ್ದಾಗಿ ಹೇಳಿದ್ದಾನೆ. ಬ್ಯಾಟರಾಯನ ಪೊಲೀಸರು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪ್ರಕರಣ ಭೇದಿಸಿ ಅರುಣ್ ಕುಮಾರ್ನಿಂದ ನಾಲ್ಕು ಲಕ್ಷ ರೂಪಾಯಿ ಹಣವನ್ನು ಜಪ್ತಿ ಮಾಡಿದ್ದಾರೆ. ಆ ಮೂಲಕ ಕಂಪ್ಲೇಂಟ್ ಕೊಟ್ಟವನೇ ಆರೋಪಿಯಾಗಿ ಅಂದರ್ ಆಗಿದ್ದಾನೆ.
ಓದಿ: 'ಗೂಗಲ್'ದಲ್ಲಿ ಟ್ರ್ಯಾಕ್ಟರ್ ಕದ್ದ ಭೂಪ: ಆರೋಪಿ ಬಂಧಿಸಿದ ಪೊಲೀಸ್