ಬೆಂಗಳೂರು: ವಯೋವೃದ್ಧರನ್ನು ಗುರಿಯಾಗಿಸಿ ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿ ಹಣ ಸುಲಿಗೆ ಮಾಡುತ್ತಿದ್ದ ದಂಪತಿ ಸೇರಿ ಮೂವರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ನಿವೃತ್ತ ಸರ್ಕಾರಿ ನೌಕರನಾಗಿರುವ ಸುಧೀಂದ್ರ ಎಂಬುವರು ನೀಡಿದ ದೂರಿನ ಮೇರೆಗೆ ಅಣ್ಣಮ್ಮ, ಲೋಕೇಶ್ ಹಾಗೂ ಸ್ನೇಹ ಎಂಬುವರನ್ನ ಬಂಧಿಸಲಾಗಿದೆ. ಬಂಧಿತರೆಲ್ಲರೂ ಮೂಲತಃ ಕೊಡಗಿನವರಾಗಿದ್ದು, ಬೊಮ್ಮನಹಳ್ಳಿಯಲ್ಲಿ ಒಂದೇ ಮನೆಯಲ್ಲಿ ವಾಸವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಪ್ರಮುಖ ಆರೋಪಿ ಅಣ್ಣಮ್ಮ ತನ್ನ ಮಗುವಿಗೆ ಹುಷಾರಿಲ್ಲ, ಹಣಕಾಸಿನ ನೆರವು ನೀಡುವಂತೆ ಪರಿಚಯಸ್ಥರಾಗಿದ್ದ ಸುಧೀಂದ್ರ ಅವರನ್ನ ಕೋರಿಕೊಂಡಿದ್ದಳು. ಸಂಕಷ್ಟ ನೋಡಲಾರದೆ ಅವರು ಈಕೆಗೆ ಐದು ಸಾವಿರ ರೂಪಾಯಿ ಸಹಾಯ ಮಾಡಿದ್ದರು. ನಂತರ ಇಬ್ಬರ ನಡುವಿನ ಪರಿಚಯ ಸಲುಗೆಗೆ ತಿರುಗಿತ್ತು.
ವಿವಿಧ ಕಾರಣಗಳನ್ನು ನೀಡಿ ಸುಧೀಂದ್ರ ಅವರಿಂದ ಅಣ್ಣಮ್ಮ ಹಣ ಪಡೆದುಕೊಂಡಿದ್ದಳು. ಒಂದು ತಿಂಗಳ ಬಳಿಕ ಹೂಸ್ಕೂರು ಗೇಟ್ ಬಳಿ ಲಾಡ್ಜ್ವೊಂದರ ರೂಮ್ಗೆ ಕರೆಯಿಸಿಕೊಂಡಿದ್ದ ಅಣ್ಣಮ್ಮ, ಸುಧೀಂದ್ರನೊಂದಿಗೆ ಸೆಕ್ಸ್ ಮಾಡಿದ್ದಳು. ಅಲ್ಲದೇ, ರಹಸ್ಯವಾಗಿ ವಿಡಿಯೋ ಮಾಡಿಕೊಂಡಿದ್ದಳು. ಇದೇ ರೀತಿ ಎರಡು ಬಾರಿ ಕರೆಯಿಸಿಕೊಂಡು ಬಲವಂತದಿಂದ ಸೆಕ್ಸ್ ಮಾಡಿಸಿಕೊಂಡಿದ್ದಳು. ಬಳಿಕ ಹಣ ನೀಡದಿದ್ದರೆ ಏಕಾಂತದ ಫೋಟೋ ಹಾಗೂ ವಿಡಿಯೋಗಳನ್ನ ಕುಟುಂಬ ಹಾಗೂ ಸ್ನೇಹಿತರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಳು. ಅಲ್ಲದೇ ಸ್ನೇಹ ಎಂಬಾಕೆಗೂ ಕಳುಹಿಸಿ ಆಕೆಯಿಂದ ಬ್ಲ್ಯಾಕ್ ಮೇಲ್ ಮಾಡಿಸಿದ್ದಳು. ಮರ್ಯಾದೆಗೆ ಅಂಜಿ ಅವರು ಹಂತ-ಹಂತವಾಗಿ 82 ಲಕ್ಷದವರೆಗೂ ನೀಡಿದ್ದಾರೆ. ಈ ಕೃತ್ಯಕ್ಕೆ ಸ್ನೇಹ ಪತಿ ಲೋಕೇಶ್ ಸಾಥ್ ನೀಡಿದ್ದ.
ಇಷ್ಟಕ್ಕೆ ಸುಮ್ಮನಾಗದ ಆರೋಪಿಗಳು ಮತ್ತೆ 42 ಲಕ್ಷ ಹಣ ಕೊಡುವಂತೆ ಡಿಮ್ಯಾಂಡ್ ಮಾಡಿದ್ದಾರೆ. ಇವರ ಬೆದರಿಕೆ ಕಾಟ ತಾಳಲಾರದೆ ಜಯನಗರ ಪೊಲೀಸರಿಗೆ ಸುಧೀಂದ್ರ ದೂರು ನೀಡಿದ್ದರು. ಇದರಂತೆ ಕಾರ್ಯಾಚರಣೆ ಕೈಗೊಂಡು ಮೂವರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.
''ಜಯನಗರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಒಂದು ಹನಿಟ್ರ್ಯಾಪ್ ಕೇಸ್ ನೋಂದಣಿ ಆಗಿದೆ. ಇದರಲ್ಲಿ ಫಿರ್ಯಾದುದಾರರಿಗೆ ಮೂರು ಜನ ಸೇರಿ ಮೋಸ ಮಾಡಿರುತ್ತಾರೆ. ಹೀಗಾಗಿ ಸೆಕ್ಷನ್ 420, 384, 504, 506, ಅಡಿಯಲ್ಲಿ ಕೇಸ್ ದಾಖಲಿಸಿದ್ದೇವೆ. ಇದರಲ್ಲಿ ಫಿರ್ಯಾದುದಾರರು ನಿವೃತ್ತ ಉದ್ಯೋಗಿಯಾಗಿರುತ್ತಾರೆ. ಅವರಿಗೆ ಒಬ್ಬರು ಲೇಡಿ ಪರಿಚಯವಾಗಿರುತ್ತಾರೆ. ನಂತರ ಅವರು ತನ್ನ ಮಗುವಿಗೆ ಹುಷಾರಿಲ್ಲ. ಹಾಸ್ಪಿಟಲ್ನಲ್ಲಿ ಅಡ್ಮಿಟ್ ಮಾಡಿದ್ದೇವೆ. ದಯವಿಟ್ಟು ಹಣ ಕೊಡಿ ಎಂದು ಕೇಳಿದ್ದಾರೆ. ಹೀಗೆ ಪರಿಚಯ ಬೆಳೆಸಿಕೊಳ್ಳುತ್ತಾರೆ. ಅದಾದ ನಂತರ ಅವರಿಬ್ಬರ ಮಧ್ಯೆ ಸಂಬಂಧ ಬೆಳೆಯುತ್ತೆ. ನಂತರ ಫೋಟೋ ಹಾಗೂ ವಿಡಿಯೋ ತೆಗೆದುಕೊಂಡು. ಇನ್ನೊಬ್ಬ ದಂಪತಿಗೆ ಕಳುಹಿಸಿ ಫಿರ್ಯಾದುದಾರರನ್ನು ಕಾಂಟ್ಯಾಕ್ಟ್ ಮಾಡಿ ಬೆದರಿಸುತ್ತಾರೆ. ಫಿರ್ಯಾದುದಾರರಿಗೆ ಪರಿಚಯವಾದ ಮುಖ್ಯ ಆರೋಪಿ, ಈ ದಂಪತಿಗಳ ಮನೆಯಲ್ಲಿ ಒಟ್ಟಿಗೆ ವಾಸವಾಗಿದ್ದರು.
ಹೀಗೆ ಈ ದಂಪತಿ ಈ ಮಹಿಳೆಯನ್ನು ಸುಮಾರು ಜನರ ಬಳಿಗೆ ಕಳುಹಿಸಿ, ಸಂಪರ್ಕ ಬೆಳೆಸಿ ಮಗುವಿಗೆ ಆರೋಗ್ಯ ಸರಿಯಿಲ್ಲ ಎಂದು ಪರಿಚಯ ಬೆಳೆಸಿಕೊಂಡು ಅವರಿಂದ ಫೋಟೋಸ್, ವಿಡಿಯೋಸ್ ತೆಗೆದುಕೊಂಡು ಬ್ಲಾಕ್ಮೇಲ್ ನಡೆಸುತ್ತಿದ್ದರು. ಈ ರೀತಿ ಇನ್ನು ಎಷ್ಟು ಜನರಿಗೆ ಮೋಸ ಮಾಡಿದ್ದಾರೆ ಎಂಬುದು ಇನ್ನು ತನಿಖೆಯಲ್ಲಿದೆ'' ಎಂದು ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Honeytrap: ಟೆಲಿಗ್ರಾಮ್ ಮೂಲಕ ಪರಿಚಯ..ಬಲೆಗೆ ಬಿದ್ದ ಯುವಕರಿಗೆ ಪಂಗನಾಮ ಹಾಕುತ್ತಿದ್ದ ಗ್ಯಾಂಗ್ ಬಂಧನ