ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ 30 ಕಡೆ ಏಳು ಮಂದಿ ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಕಂತೆ ಕಂತೆ ನೋಟು ಹಾಗೂ ಚಿನ್ನ ಪತ್ತೆಯಾದ ಹಿನ್ನೆಲೆ ಅವುಗಳನ್ನು ಎಣಿಸಲು ಕೌಟಿಂಗ್ ಹಾಗೂ ವೇಯಿಂಗ್ ಮಿಷಿನ್ ಕೊಂಡೊಯ್ಯಲಾಯ್ತು.
ದಾಳಿಗೊಳಗಾದ ಅಧಿಕಾರಿಗಳ ವಿವರ:
- ಶಿಗ್ಗಾವಿಯ ಸಣ್ಣ ನೀರಾವರಿ ಇಲಾಖೆಯ ಎಇಇ ದೇವರಾಜ್ ಕಲ್ಲೇಶ್
- ಬೆಂಗಳೂರಿನಲ್ಲಿ ಸಹಕಾರ ಸಂಘಗಳ ಜಂಟಿ ನಿಂಬಂಧಕರಾಗಿರುವ ಪಾಂಡುರಂಗ ಗರಗ್
- ಮಂಗಳೂರು ಪಾಲಿಕೆ ನಗರ ಯೋಜನೆ ಜಂಟಿ ನಿರ್ದೇಶಕ ಜಯರಾಜ್ ಕೆ.ವಿ.
- ಕೊಪ್ಪಳದ ಕಿಮ್ಸ್ ಆಸ್ಪತ್ರೆಯ ಹೆಚ್ಒಡಿಯಾಗಿರುವ ಡಾ. ಶ್ರೀನಿವಾಸ್
- ಪಿಡಬ್ಲ್ಯೂಡಿ ಇಲಾಖೆ ಮಾಗಡಿ ಉಪವಿಭಾಗದ ಜೆ.ಇ. ಚನ್ನಬಸಪ್ಪ ಅವಟೆ
- ಕೋಲಾರದ ಡಿಹೆಚ್ಒ ಡಾ.ವಿಜಯ್ಕುಮಾರ್
- ಶ್ರೀನಿವಾಸ್, ಎಸಿಎಫ್, ಧಾರವಾಡ
ದಾಳಿ ಎಲ್ಲೆಲ್ಲಿ ನಡೆದಿದೆ?
ಬೆಂಗಳೂರು ನಗರ, ಬಳ್ಳಾರಿ, ಕೋಲಾರ, ಧಾರವಾಡ, ದಕ್ಷಿಣ ಕನ್ನಡ, ಚಿತ್ರದುರ್ಗ ಹಾಗೂ ಬೀದರ್‌ನಲ್ಲಿ ಇವರಿಗೆ ಸೇರಿದ ನಿವಾಸ ಹಾಗೂ ಕಚೇರಿಗಳು, ಸಂಸ್ಥೆಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಪಾಂಡುರಂಗ ಗರಗ್ ಅವರಿಗೆ ಸೇರಿದ ವಿಜಯನಗರದ ಮನೆ, ಮಲ್ಲೇಶ್ವರಂ ಕಚೇರಿ, ಚಿತ್ರದುರ್ಗದ ಮನೆ ಸೇರಿ ಐದು ಕಡೆ ದಾಳಿಯಾಗಿದೆ. ಚಿತ್ರದುರ್ಗದ ನಿವಾಸದ ದಾಳಿ ವೇಳೆ ಒಂದು ಕೆ.ಜಿ ಚಿನ್ನ, 4 ಲಕ್ಷಕ್ಕೂ ಅಧಿಕ ನಗದು ಹಣ ಪತ್ತೆಯಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಹುಬ್ಬಳ್ಳಿಯ ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ದೇವರಾಜ್ ಕಲ್ಲೇಶ್ಗೆ ಸೇರಿದ ರಾಜೀವ್ ಗಾಂಧಿ ನಗರದಲ್ಲಿರುವ ಮನೆಯಲ್ಲಿ ಬೆಂಗಳೂರಿನಿಂದ ಬಂದಿರುವ ಎಸಿಬಿ ಟೀಂ ಪರಿಶೀಲನೆ ನಡೆಸುತ್ತಿದೆ. ಎಇಇ ದೇವರಾಜ ಕೆ. ಶಿಗ್ಗಾವಿ ಅವರ ನಿವಾಸ ಮತ್ತು ತಾಯಿ ಹಾಗೂ ಮಾವನ ಮನೆಯ ಮೇಲೆ ಅಧಿಕಾರಿಗಳು ಬೆಳಗ್ಗೆ ಏಕಕಾಲಕ್ಕೆ ದಾಳಿ ಮಾಡಿ, ಆದಾಯಕ್ಕಿಂತ ಹೆಚ್ಚಿನ ಸ್ಥಿರ-ಚಿರಾಸ್ತಿಯ ದಾಖಲಾತಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಆ ಬಳಿಕ ಇಂಡಿಯನ್ ಓವರ್ ಸಿಸ್ ಬ್ಯಾಂಕ್ ಲಾಕರ್ ಪತ್ತೆಯಾಗಿದ್ದು, ಲಾಕರ್ ಪರಿಶೀಲನೆ ವೇಳೆ ಕಂತೆ ಕಂತೆ ಹಣ ಹಾಗೂ ಬಂಗಾರದ ಆಭರಣಗಳು ಪತ್ತೆಯಾಗಿವೆ. 56.5 ಲಕ್ಷ ಹಣ ಹಾಗೂ 400 ಗ್ರಾಂ ಬಂಗಾರದ ಆಭರಣಗಳು, 400 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ 23 ಎಕರೆ ಆಸ್ತಿ ದಾಖಲೆ ಪತ್ರಗಳು ಪತ್ತೆಯಾಗಿದ್ದು,ಅಧಿಕಾರಿಗಳು ತನಿಖೆಯನ್ನು ಮುಂದುವರೆಸಿದ್ದಾರೆ.
ಕೋಲಾರದ ಡಿಹೆಚ್ಒ ಡಾ.ವಿಜಯ್ಕುಮಾರ್ಗೆ ಸೇರಿದ ಖಾಸಗಿ ಆಸ್ಪತ್ರೆ ಹಾಗೂ ಬೆಂಗಳೂರಿನಲ್ಲಿನ ಅವರ ಫ್ಲಾಟ್ನಲ್ಲಿ ಎಸಿಬಿಯಿಂದ ಪರಿಶೀಲನೆ ನಡೆಯುತ್ತಿದೆ. ಮನೆ, ಕಚೇರಿಯಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದ್ದು, ನಗರದ ಅಂಜನಿ ಬಡಾವಣೆ ಸೇರಿದಂತೆ ಮುಳಬಾಗಿಲಿನ ಮನೆ, ನರ್ಸಿಂಗ್ ಹೋಂಗಳಲ್ಲಿ ಅಧಿಕಾರಿಗಳು ಶೋಧಕಾರ್ಯ ಮುಂದುವರೆಸಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ಡಾ.ವಿಜಯಕುಮಾರ್ ಅವರ ಮೇಲೆ ಅನೇಕ ಹಗರಣದಲ್ಲಿ ಭಾಗಿಯಾಗಿರುವ ಆರೋಪದಡಿ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.
ಮಾಗಡಿಯ ಪಿಡಬ್ಲೂಡಿ ಇಲಾಖೆಯಲ್ಲಿ ಜೆಇ ಆಗಿರುವ ಚನ್ನಬಸಪ್ಪ ಅವಟೆ ಆಸ್ತಿ ದಾಖಲೆಗಳು ಬಗೆದಷ್ಟು ಹೊರ ಬರುತ್ತಿದ್ದು, ಸದ್ಯ ಪರಿಶೀಲನೆ ವೇಳೆ ಸುಮಾರು 2 ಕೋಟಿ ಮೌಲ್ಯದ ಆಸ್ತಿ ಪತ್ರಗಳು ಪತ್ತೆಯಾಗಿವೆ. ಈ ಆಸ್ತಿ ಪತ್ರಗಳು ಮಗ, ಹೆಂಡತಿ, ಅಳಿಯ ಹೆಸರಿನಲ್ಲಿವೆ. ಜಮೀನು, ಪ್ಲ್ಯಾಟ್, ಅಪಾರ್ಟ್ಮೆಂಟ್ ಪಾಟ್ನರ್ಶಿಪ್, ಕೃಷಿ ಉಪಕರಣಗಳ ಖರೀದಿಗೆ ಸಂಬಂಧಿಸಿದ ದಾಖಲೆಗಳು ಸಿಕ್ಕಿವೆ.
ಮಂಗಳೂರು ಮಹಾನಗರ ಪಾಲಿಕೆಯ ನಗರ ಯೋಜನಾ ವಿಭಾಗದ ಜಂಟಿ ನಿರ್ದೇಶಕ ಜಯರಾಜ್ ಕಳೆದ ಆರು ವರ್ಷಗಳಿಂದ ಮಹಾನಗರ ಪಾಲಿಕೆಯಲ್ಲಿ ಕರ್ತವ್ಯದಲ್ಲಿದ್ದು, ಬಿಜೈ, ಕಾಪಿಕಾಡಿನಲ್ಲಿ ಮನೆ ಹೊಂದಿದ್ದು ಅಲ್ಲಿ ದಾಳಿ ನಡೆಸಲಾಗಿದೆ. ಕೇರಳದಲ್ಲಿಯೂ ಇವರು ಆಸ್ತಿ ಹೊಂದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಲ್ಲಿಗೂ ತೆರಳಿ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ಪಾಂಡುರಂಗ ಗರಗ್ ಅವರ ಬೆಂಗಳೂರಿನ ವಿಜಯನಗರದ ನಿವಾಸದಲ್ಲಿ ಊಹೆಗೂ ಮೀರಿದ ಹೆಚ್ಚಿನ ಪ್ರಮಾಣದ ಆಸ್ತಿ ಪತ್ರ, ನಗದು ಚಿನ್ನಾಭರಣ ಪತ್ತೆಯಾಗಿದೆ.. ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿ ಸಾಮಾನುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಚಿನ್ನಾಭರಣ ತೂಕ ಹಾಕಲು ವೇಯಿಂಗ್ ಮಿಷಿನ್ ಪತ್ತೆಯಾಗಿರುವ ಕಂತೆ-ಕಂತೆ ನೋಟುಗಳನ್ನು ಎಣಿಸಲು ಅಧಿಕಾರಿಗಳು ಕೌಂಟಿಂಗ್ ಮಿಷನ್ ತಂದಿದ್ದಾರೆ. ಒಟ್ಟು ಹದಿನೈದು ಅಧಿಕಾರಿಗಳಿಂದ ಪಾಂಡುರಂಗ ಮನೆಯಲ್ಲಿ ಪರಿಶೀಲಿಸಿದ್ದು..ಇದುವರೆಗೂ ವಶಕ್ಕೆ ಪಡೆದಿರುವ ದಾಖಲೆಗಳನ್ನು ಮುಂದಿಟ್ಟು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.