ಬೆಂಗಳೂರು: ಸಿಗರೇಟ್ ವಿತರಕರಿಂದ ಹಾಗೂ ಮಾಸ್ಕ್ ತಯಾರಿಕ ಕಂಪನಿ ಮಾಲೀಕರಿಂದ ಕೋಟಿ ಕೋಟಿ ಡೀಲ್ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಎಸಿಪಿ ಮತ್ತು ಇಬ್ಬರು ಇನ್ಸ್ಪೆಕ್ಟರ್ಗಳ ಮನೆ ಹಾಗೂ ಕಚೇರಿಗಳ ಮೇಲೆ ಸಿಸಿಬಿ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ.
ಬೆಳ್ಳಂಬೆಳಗ್ಗೆ ಎಸಿಪಿ ಪ್ರಭುಶಂಕರ್, ಇನ್ಸ್ಪೆಕ್ಟರ್ ನಿರಂಜನ್, ಅಜಯ್ ಅವರಿಗೆ ಸೇರಿದ 7 ಕಡೆ ಮನೆ, ಕಚೇರಿ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಎಸಿಬಿ ಅಧಿಕಾರಿಗಳ ಕೈಗೆ ಸಿಗದೆ ಎಸಿಪಿ ಪ್ರಭುಶಂಕರ್ ಮನೆಗೆ ಬೀಗ ಹಾಕಿ ಎಸ್ಕೇಪ್ ಆಗಿದ್ದಾರೆ. ಹೀಗಾಗಿ ಪ್ರಭುಶಂಕರ್ ಅವರ ಪತ್ನಿಯನ್ನು ಕರೆಸಿ ಮನೆ ಬೀಗ ತೆಗೆಸಿರುವ ಎಸಿಬಿ ಅಧಿಕಾರಿಗಳು ಸಹಕಾರ ನಗರದಲ್ಲಿರುವ ಮನೆಯಲ್ಲಿ ಹಾಗೂ ಇತರೆಡೆ ಪರಿಶೀಲನೆ ನಡೆಸಿದ್ದಾರೆ.
ಪ್ರಭುಶಂಕರ್ ಬಗ್ಗೆ ಮಾಹಿತಿ ಸಿಕ್ಕರೆ ಎಸಿಬಿ ಅಥವಾ ಸ್ಥಳೀಯ ಠಾಣೆಗೆ ತಿಳಿಸಿ ಎಂದು ಅಧಿಕಾರಿಗಳು ಸಾರ್ವಜನಿಕರಿಗೆ ಸೂಚಿಸಿದ್ದಾರೆ. ಹಾಗೆ ಇವರ ಜೊತೆ ಭಾಗಿಯಾದ ಬ್ರೋಕರ್ಗಳ ಮನೆ ಮೇಲೂ ಡಿಎಸ್ಪಿ ರಾಜೇಂದ್ರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಎಸಿಪಿ ಸೇರಿ ಇಬ್ಬರು ಇನ್ಸ್ಪೆಕ್ಟರ್ ವಿರುದ್ಧ ಪ್ರತ್ಯೇಕ ಮೂರು ಎಫ್ಐಆರ್ ದಾಖಲು
ಏನಿದು ಘಟನೆ?
ಸಿಗರೇಟ್ ವಿತರಕರಿಂದ ಲಂಚ ಪಡೆದ ಗಂಭೀರ ಆರೋಪ ಸಂಬಂಧ ಸಿಸಿಬಿ ಎಸಿಪಿ ಮತ್ತು ಇಬ್ಬರು ಇನ್ಸ್ ಪೆಕ್ಟರ್ಗಳು ಈಗಾಗಲೇ ಅಮಾನತ್ತಾಗಿದ್ದಾರೆ. ಪ್ರಕರಣ ಸಂಬಂಧ ಸಿಸಿಬಿ ಡಿಸಿಪಿ ರವಿಕುಮಾರ್ ಪ್ರಕರಣದ ತನಿಖೆ ನಡೆಸಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮೂಲಕ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಗೆ ವರದಿ ಸಲ್ಲಿಸಿದ್ದಾರೆ. ಈ ವರದಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಿಜಿ&ಐಜಿಪಿ ಪ್ರವೀಣ್ ಸೂದ್ ಕಚೇರಿ ತಲುಪಿದೆ.
ಸಿಗರೇಟ್ ವಿತರಕರಿಂದ ಸಿಸಿಬಿ ಅಧಿಕಾರಿಗಳು ಕಿಕ್ ಬ್ಯಾಕ್ ಪಡೆದಿದ್ದರೆನ್ನಲಾದ ಆರೋಪ ಸಂಬಂಧ ಆರೋಪಿಗಳಾದ ಎಸಿಪಿ ಪ್ರಭುಶಂಕರ್, ಇನ್ಸ್ಪೆಕ್ಟರ್ ಗಳಾದ ನಿರಂಜನ್ ಮತ್ತು ಅಜಯ್ ರನ್ನ ಅಮಾನತು ಮಾಡಲಾಗಿದೆ. ಪ್ರಕರಣ ಭ್ರಷ್ಟಾಚಾರ ಕಾಯ್ದೆ ಅಡಿ ತನಿಖೆ ನಡೆಸಲು ಡಿಜಿ&ಐಜಿಪಿ ಪ್ರವೀಣ್ ಸೂದ್ ಎಸಿಬಿ ವರ್ಗಾಯಿಸಿದ್ರು. ಹೀಗಾಗಿ ಮೂವರು ಅಧಿಕಾರಿಗಳ ವಿರುದ್ಧ ಎಸಿಬಿ ಮೂರು ಎಫ್ಐಆರ್ ನಿನ್ನೆ ದಾಖಲಿಸಿ ಎಸಿಬಿ ಪಿಸಿ ಆ್ಯಕ್ಟ್ (ಪ್ರಿವೆನ್ಷನ್ ಆಫ್ ಕರಪ್ಷನ್ ಆ್ಯಕ್ಟ್) ಅಡಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲೂ ಕೂಡ ಎಫ್ಐಆರ್ ದಾಖಲಾಗಿದೆ. ಸಿಗರೇಟ್ ವಿತರಕರಿಂದ ಸುಮಾರು 1.75 ಕೋಟಿ ಸುಲಿಗೆ ಮಾಡಿದ್ದಾರೆಂಬ ಆರೋಪ ಇದಾಗಿದೆ.