ಬೆಂಗಳೂರು : ಜಯನಗರ ಆರ್‌ಟಿಓ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ಶುಕ್ರವಾರ ದಿಢೀರ್ ದಾಳಿ ನಡೆಸಿ, 12 ಜನ ಮಧ್ಯವರ್ತಿಗಳನ್ನು ಬಂಧಿಸಿ, 1,40 ಲಕ್ಷ ರೂ. ನಗದು, ಆರ್‌ಸಿ ಸ್ಮಾಟ್ ಕಾರ್ಡ್, ಡಿಎಲ್ ಸ್ಮಾಟ್ ಕಾರ್ಡ್ ಸೇರಿ ವಿವಿಧ ರೀತಿಯ ಪರ್ಮಿಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಹೊಸ ಸಂಚಾರಿ ನಿಯಮ ಜಾರಿಯಾಗಿರುವ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘಿಸಿದವರು ಭಾರಿ ದಂಡ ಕಟ್ಟಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಗರದ ಎಲ್ಲಾ ಆರ್‌ಟಿಒ ಕಚೇರಿಗಳಿಗೆ ಜನರು ಮುಗಿಬಿದ್ದು ಎಲ್‌ಎಲ್ಆರ್, ಡಿಎಲ್ ಸೇರಿದಂತೆ ಇನ್ನಿತರ ದಾಖಲಾತಿಗಳನ್ನು ಮಾಡಿಸಿಕೊಳ್ಳಲು ಬರುತ್ತಿದ್ದಾರೆ.
ಅಲ್ಲದೇ ಜಯನಗರದ ಆರ್‌ಟಿಒ ಕಚೇರಿಯಲ್ಲಿನ ಅಧಿಕಾರಿಗಳು ಮಧ್ಯವರ್ತಿಗಳ ಜತೆ ಶಾಮೀಲಾಗಿ ಸರ್ಕಾರಿ ಶುಲ್ಕಕ್ಕಿಂತ ಹೆಚ್ಚು ಹಣ ಪಡೆದು ಎಲ್‌ಎಲ್ಆರ್ , ಡಿಎಲ್ ಸೇರಿದಂತೆ ಇನ್ನಿತರ ದಾಖಲಾತಿಗಳನ್ನು ನೀಡುತ್ತಿದ್ದ ಬಗ್ಗೆ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಎಸಿಬಿ, ಎಸ್‌ಪಿ ಜಿನೇಂದ್ರ ಖಣಗಾವಿ ನೇತೃತ್ವದ ಎಸಿಬಿ ತಂಡ ದಾಳಿ ನಡೆಸಿದೆ.
ಅಲ್ಲದೇ ಆರ್‌ಟಿಒ ಕಚೇರಿಯ ಒಳಭಾಗದಲ್ಲಿ 2,71,000 ರೂ. ನಗದು ಇದ್ದ ವಾರಸುದಾರರಿಲ್ಲದ ಬ್ಯಾಗ್ ಪತ್ತೆಯಾಗಿದ್ದು, ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.