ಬೆಂಗಳೂರು: ಪೆರೋಲ್ ಮೇಲೆ ಜೈಲಿಂದ ಹೊರ ಹೋಗಿ ಸುಮಾರು 14 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ, ವ್ಯಕ್ತಿಯನ್ನು ನಗರದ ಮಡಿವಾಳ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಹಾವೇರಿ ಮೂಲದ ಕರುಣಾಕರ್ (48) ಬಂಧಿತ ವ್ಯಕ್ತಿಯಾಗಿದ್ದಾನೆ. ಈತ 1998ರಲ್ಲಿ ಬ್ಯಾಟರಾಯನಪುರ ಠಾಣಾ ವ್ಯಾಪ್ತಿಯಲ್ಲಿ ಸಂಜೀವ್ ಎಂಬಾತನನ್ನು ಕೊಲೆ ಮಾಡಿದ್ದ. ಈ ಪ್ರಕರಣದಲ್ಲಿ ಕರುಣಾಕರ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.
ಹಲವು ವರ್ಷಗಳಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಜೈಲು ಶಿಕ್ಷೆ ಅನುಭವಿಸಿದ್ದ. ಈ ನಡುವೆ 2008ರಲ್ಲಿ ತಾಯಿಗೆ ಆರೋಗ್ಯದ ಸಮಸ್ಯೆ ಎಂದು ಹೇಳಿ, ಪೆರೋಲ್ ಮೇಲೆ ಜೈಲಿನಿಂದ ಹೊರ ಹೋಗಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಪೆರೋಲ್ ಅವಧಿ ಮುಕ್ತಾಯಗೊಂಡರೂ ಜೈಲಿಗೆ ವಾಪಸ್ ಆಗಿರಲಿಲ್ಲ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಮಡಿವಾಳ ಪೊಲೀಸರು ಶೋಧ ನಡೆಸುತ್ತಿದ್ದರು. ಇತ್ತೀಚೆಗೆ ಕರುಣಾಕರ್ ಹಾವೇರಿಯ ಸಮೀಪದ ಹಾನಗಲ್‌ನಲ್ಲಿ ಇರುವ ಬಗ್ಗೆ ಸುಳಿವು ಸಿಕ್ಕಿತ್ತು. ಈ ಮಾಹಿತಿ ಆಧರಿಸಿ ಹಾನಗಲ್‌ಗೆ ತೆರಳಿದ ತಂಡ ಅಪರಾಧಿ ಕರುಣಾಕರ್‌ನ್ನು ಬಂಧಿಸಿ ನಗರಕ್ಕೆ ಕರೆ ತಂದು ಮತ್ತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದಾರೆ.
ಕರುಣಾಕರ್ ಜೈಲಿನಿಂದ ಹೊರ ಹೋದ ಬಳಿಕ ಸತತ 14 ವರ್ಷಗಳಿಂದ ಮನೆಗೂ ಹೋಗದೆ, ಹಾವೇರಿಯಲ್ಲಿ ಸಣ್ಣ ಹೋಟೆಲ್ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ರೈಲಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರು ಖದೀಮರು ಬೆಂಗಳೂರಲ್ಲಿ ಅರೆಸ್ಟ್