ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ಜ.19 ರವರೆಗೆ ಕೋವಿಡ್ ನಿಯಮ ಜಾರಿ ಮಾಡಿದ್ದೇವೆ. ಕೆಲವು ಜಿಲ್ಲೆಗಳಲ್ಲಿ ಅಗತ್ಯವಿಲ್ಲ ಎಂಬ ಅಭಿಪ್ರಾಯ ಬಂದಿದೆ. ಹೀಗಾಗಿ ಜ.15ಕ್ಕೆ ಮತ್ತೊಂದು ಬಾರಿ ಪರಾಮರ್ಶೆ ಮಾಡಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿಂದು ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಾದಯಾತ್ರೆಗೂ, ಕೋವಿಡ್ ನಿಯಮ ಜಾರಿಗೂ ಯಾವುದೇ ಸಂಬಂಧ ಇಲ್ಲ. ಬೆಳಗಾವಿ, ಬಾಗಲಕೋಟೆಗೂ, ಪಾದಯಾತ್ರೆಗೂ ಸಂಬಂಧವಿಲ್ಲ. ಆದರೂ ಎಲ್ಲ ಕಡೆಗಳಲ್ಲಿ ಒಂದೇ ಬಾರಿ ನಿಯಮ ಜಾರಿ ಮಾಡಲು ತೀರ್ಮಾನಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ರಾಜ್ಯದಲ್ಲಿ ಇಂದಿನಿಂದ ಕೋವಿಡ್ ಹೊಸ ಮಾರ್ಗಸೂಚಿ ಜಾರಿ: ಯಾವುದಕ್ಕೆಲ್ಲಾ ನಿರ್ಬಂಧ?
ಕೋವಿಡ್ ನಿಯಮ ಎಲ್ಲ ಕಡೆ ಪಾಲನೆ ಮಾಡಲಾಗುತ್ತಿದೆ. ಕಾಂಗ್ರೆಸ್ ಪಾದಯಾತ್ರೆ ಮಾಡಲಿ, ಅವರಿಗೆ ಯಾವುದೇ ಅಡ್ಡಿಯಿಲ್ಲ ಎಂದರು. ಸರ್ಕಾರಕ್ಕೆ ಬಹಳ ದೊಡ್ಡ ಗಂಡಾಂತರ ಏನಿಲ್ಲ. ಈಗ ಕೊರೊನಾ ಹೆಚ್ಚಳವಾಗುತ್ತಿದೆ. ಕೋವಿಡ್ ಮೂರನೇ ಅಲೆಯಲ್ಲಿ ಆಸ್ಪತ್ರೆಗೆ ಸೇರುವವರ ಸಂಖ್ಯೆ ಹೆಚ್ಚು ಇರೋದಿಲ್ಲ. ಸೋಂಕು ತಡೆಗಟ್ಟಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.
ತುಮಕೂರಿನಲ್ಲಿ ಅನೇಕ ಮನೆಗಳಲ್ಲಿ ಎಲ್ಲರಿಗೂ ಕೋವಿಡ್ ಬಂದಿದೆ. ಆರಂಭದಲ್ಲೇ ರಕ್ಷಣೆ ಮಾಡಿದರೆ ಒಳ್ಳೆಯದು ಎಂದು ಈ ನಿರ್ಧಾರ ಮಾಡಲಾಗಿದೆ. ಕೋವಿಡ್ ಪ್ರೊಟೋಕಾಲ್ ಎಲ್ಲವನ್ನೂ ನಿರ್ವಹಿಸುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಸಚಿವ ಸಂಪುಟ ಸಭೆ: ಖ್ಯಾತ ಹಿರಿಯ ನಟ ದಿ. ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಒಪ್ಪಿಗೆ
ಅಭ್ಯರ್ಥಿಗಳಿಗೆ ನ್ಯಾಯ: ಕೆಪಿಎಸ್ಸಿ ಬಗ್ಗೆ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ಮುಖ್ಯಮಂತ್ರಿಗಳು ತೀರ್ಮಾನಿಸಿದ್ದಾರೆ. ನನಗೆ ಅದಕ್ಕೆ ಪೂರಕ ಮಾಹಿತಿ ಒದಗಿಸಲು ಸೂಚಿಸಿದ್ದಾರೆ ಎಂದು ಹೇಳಿದರು.