ಬೆಂಗಳೂರು: ಆಮ್ ಆದ್ಮಿ ಪಕ್ಷದ ಯೋಜನೆಗಳನ್ನು ಕಾಪಿ ಮಾಡಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಸಿಎಂ ಸಿದ್ದರಾಮಯ್ಯನವರು, ಪಂಜಾಬ್‌ನಲ್ಲಿ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಿದಂತೆ ಆ ಯೋಜನೆಯನ್ನೂ ಕಾಪಿ ಮಾಡಿ ರಾಜ್ಯದ ಅತಿಥಿ ಉಪನ್ಯಾಸಕರ ಕೆಲಸವನ್ನು ಖಾಯಂಗೊಳಿಸಿ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಜಂಟಿಕಾರ್ಯದರ್ಶಿ ಪೃಥ್ವಿ ರೆಡ್ಡಿ ಒತ್ತಾಯಿಸಿದ್ದಾರೆ.
12 ತಿಂಗಳ ವೇತನ, ಸೇವಾ ಭದ್ರತೆ, ಉಪನ್ಯಾಸಕರಿಗೆ ವೇತನ ಸಹಿತ ಹೆರಿಗೆ ರಜೆ, ಖಾಸಗಿ ನೌಕರರ ರೀತಿ ಗ್ರ್ಯಾಚ್ಯುಟಿ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಅತಿಥಿ ಉಪನ್ಯಾಸಕರ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
2023ರ ಜುಲೈನಲ್ಲಿ ಪಂಜಾಬ್‌ನಲ್ಲಿ ಅತಿಥಿ ಉಪನ್ಯಾಸಕರ ಸೇವೆಯನ್ನು ಖಾಯಂಗೊಳಿಸಲಾಗಿದೆ. ಮಾತ್ರವಲ್ಲದೇ ಪ್ರಾಥಮಿಕ ಪದವಿ ಪೂರ್ವ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಇದ್ದ 9,500 ರೂ ಸಂಬಳವನ್ನು 20,500 ರೂ ಗೆ ಹೆಚ್ಚಿಸಲಾಗಿದೆ. ಆದರೆ ಕರ್ನಾಟದಲ್ಲಿ 10,500 ರೂ. ಇದ್ದ ಸಂಬಳವನ್ನು 12,000 ರೂ.ಗೆ ಹೆಚ್ಚಿಸಿ ಕೈತೊಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಅತಿಥಿ ಉಪನ್ಯಾಸಕರ ಬಗ್ಗೆ ಸರ್ಕಾರ ನಿರ್ಲಕ್ಷ್ಯ ಧೋರಣೆ: ಬಹುತೇಕ ಶಾಸಕರು, ಸಚಿವರು ಖಾಸಗಿ ಶಾಲಾ ಕಾಲೇಜುಗಳನ್ನು ನಡೆಸುತ್ತಿದ್ದಾರೆ. ದಂಧೆ ಬಂದ್ ಆಗುತ್ತದೆ ಎಂದು ಸರ್ಕಾರಿ ಶಾಲಾ ಕಾಲೇಜುಗಳನ್ನು ಕಡೆಗಣಿಸುತ್ತಿದ್ದಾರೆ. ರಾಜ್ಯ ಸರ್ಕಾರ ಕಾಪಿ ಮಾಡಲಾದ ಆಮ್ ಆದ್ಮಿ ಪಕ್ಷದ ಯೋಜನೆಗಳನ್ನು ಜಾರಿಗೆ ತರಲು 50,000 ಕೋಟಿ ರೂ.ವ್ಯಯಿಸುತ್ತಿದ್ದಾರೆ.
ಆದರೆ ಅತಿಥಿ ಉಪನ್ಯಾಸಕರ ನೇಮಕ ಮಾಡಲು 100 ಕೋಟಿ ರೂ. ಹಣಕ್ಕೆ ಕೊರತೆಯುಂಟಾಗಿದೆಯೇ? ಬೇರೆ ಯೋಜನೆಗಳಿಗೆ ಖರ್ಚು ಮಾಡಿದ್ರೆ ಕಮಿಷನ್ ಸಿಗುತ್ತದೆ. ಆದರೆ ಅತಿಥಿ ಉಪನ್ಯಾಸಕರ ಸಂಬಳದಲ್ಲಿ ಕಮಿಷನ್ ಕೇಳಲು ಆಗುವುದಿಲ್ಲ. ಇದೇ ಕಾರಣಕ್ಕೆ ಅತಿಥಿ ಉಪನ್ಯಾಸಕರ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆ ತಳೆದಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಆಮ್ ಆದ್ಮಿ ಪಕ್ಷದ ಮಾಧ್ಯಮ ಉಸ್ತುವಾರಿ ಜಗದೀಶ್ ವಿ. ಸದಂ, ಸೋಷಿಯಲ್ ಮೀಡಿಯಾ ಮುಖ್ಯಸ್ಥ ದರ್ಶನ್ ಜೈನ್, ಮುಖಂಡ ಉಷಾ ಮೋಹನ್, ಅನಿಲ್ ನಾಚಪ್ಪ, ವಿಶ್ವನಾಥ್ ಸೇರಿದಂತೆ ಹಲವರು ಪಾಲ್ಗೊಂಡು, ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಇದನ್ನೂ ಓದಿ:ಸೇವೆ ಖಾಯಂಗೊಳಿಸಿ, ಕೊಟ್ಟ ಮಾತು ಉಳಿಸಿಕೊಳ್ಳಿ: ಅತಿಥಿ ಉಪನ್ಯಾಸಕರಿಂದ ರಾಜ್ಯ ಸರ್ಕಾರಕ್ಕೆ ಆಗ್ರಹ