ಬೆಂಗಳೂರು: ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ರೈತರು ಡಿಸೆಂಬರ್ 8ರಂದು ಕರೆ ನೀಡಿರುವ ಭಾರತ್ ಬಂದ್‌ಗೆ ರಾಜ್ಯ ಆಮ್ ಆದ್ಮಿ ಪಕ್ಷ ಬೆಂಬಲ ನೀಡಿದ್ದು, ಪಕ್ಷದ ವತಿಯಿಂದ ಮೌರ್ಯ ವೃತ್ತದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ಹೇಳಿದ್ದಾರೆ.
ರೈತರು ಕಳೆದ 20 ದಿನಗಳಿಂದ ಕೊರೆವ ಚಳಿಯನ್ನೂ ಲೆಕ್ಕಿಸದೆ ದೆಹಲಿ/ ಪಂಜಾಬ್ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಕೇಂದ್ರ ಸರ್ಕಾರ ಸರಿಯಾಗಿ ಸ್ಪಂದಿಸದೆ ಅನ್ನದಾತನನ್ನು ಅವಮಾನ ಮಾಡಿದೆ. ಯಡಿಯೂರಪ್ಪನವರ ನೇತೃತ್ವದ ರಾಜ್ಯ ಸರ್ಕಾರವೂ ಸಹ ಕೇಂದ್ರದ ತಾಳಕ್ಕೆ ಕುಣಿಯುತ್ತಿದ್ದು, ರೈತರ ಪರವಾಗಿ ನಿಂತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೆಹಲಿಯ ಆಮ್ ಆದ್ಮಿ ಸರ್ಕಾರ ರೈತರ ಬೆನ್ನಿಗೆ ನಿಂತಿದೆ ಹಾಗೂ ನೀರು, ಊಟ, ಹೊದಿಕೆಯ ವ್ಯವಸ್ಥೆ ಮಾಡಿದೆ. ಈ ದೇಶದ ಸಂಸ್ಕೃತಿಗೆ ಕೊಡಲಿ ಪೆಟ್ಟು ಹಾಕಲು ಹೊರಟಿರುವ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು. ರೈತರ ಜೊತೆ ಇಡೀ ದೇಶದ ಜನರಿದ್ದಾರೆ ಎನ್ನುವುದು ಸರ್ಕಾರದ ಅರಿವಿಗೆ ಬರುವಂತೆ ಮಾಡಬೇಕು. ಆದ ಕಾರಣ ಪಕ್ಷಾತೀತವಾಗಿ ಎಲ್ಲಾ ನಾಗರಿಕರೂ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಬೇಕು ಎಂದು ಮನವಿ ಮಾಡಿದರು.
ಇನ್ನು ರೈತ ವಿರೋಧಿ ಮಸೂದೆಗಳನ್ನು ಖಂಡಿಸಿ ಭಾರತ್ ಬಂದ್ ಕರೆಗೆ ಬೆಂಗಳೂರು ಆಟೋ ಹಾಗೂ ಟ್ಯಾಕ್ಸಿ ಚಾಲಕರ ಸಂಘ ನೈತಿಕ ಬೆಂಬಲ ನೀಡಿದೆ. ಆಟೋ ಓಡಿಸೋದು ಬಿಡೋದು ಚಾಲಕರ ನಿರ್ಧಾರ. ಹೀಗಾಗಿ ಸಂಘ ಆಟೋ ನಿಲ್ಲಿಸುವಂತೆ ಒತ್ತಡ ಹಾಕುವುದಿಲ್ಲ ಎಂದು ಆದರ್ಶ ಆಟೋ ಹಾಗೂ ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ ಹೇಳಿದ್ದಾರೆ.