ಬೆಂಗಳೂರು: ರಾಜ್ಯದಾದ್ಯಂತ ಕೊರೊನಾ ಎರಡನೇ ಅಲೆಗೆ ಜನತೆ ತತ್ತರಿಸಿ ಹೋಗಿದ್ದಾರೆ. ಆಸ್ಪತ್ರೆಗಳಲ್ಲಿ ಬೆಡ್, ಔಷಧಿ, ಆಕ್ಸಿಜನ್, ಆಂಬುಲೆನ್ಸ್ ಇತ್ಯಾದಿ ಸೌಲಭ್ಯಗಳು ಸಿಗದೆ ಜನತೆ ಸಾವನ್ನಪ್ಪುತ್ತಿದ್ದಾರೆ. ಇದು ನಮ್ಮ ರಾಜ್ಯದ ಆರೋಗ್ಯ ವ್ಯವಸ್ಥೆಯ ದೊಡ್ಡ ವೈಫಲ್ಯ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಮುಖ್ಯ ವಕ್ತಾರ ಶರತ್ ಖಾದ್ರಿ ದೂರಿದರು.
ದೇಶದಾದ್ಯಂತ ಲಸಿಕೆ ನೀಡುವ ಕಾರ್ಯಕ್ರಮ ಆರಂಭವಾಗಿದೆ. ಆದರೆ ಈ ಒಟ್ಟಾರೆ ಪ್ರಕ್ರಿಯೆ ಅನೇಕ ನಿರ್ವಹಣಾ ವೈಫಲ್ಯಗಳಿಂದ ಕೂಡಿದೆ. ರಾಜ್ಯ ಮತ್ತು ಕೇಂದ್ರ ಎರಡೂ ಸರ್ಕಾರಗಳೂ ಲಸಿಕೆ ನೀಡುವ ಕಾರ್ಯಕ್ರಮವನ್ನು ಸಮರ್ಪಕವಾಗಿ ನಿರ್ವಹಿಸಲು ಸೋತಿವೆ ಎಂದು ಅಭಿಪ್ರಾಯಪಟ್ಟರು.
ಕೇಂದ್ರ ಸರ್ಕಾರ ಸ್ಪುಟ್ನಿಕ್ ಎಂಬ ಲಸಿಕೆಯನ್ನು ಖರೀದಿಸಲು ಹೊರಟಿದೆ. ಆದರೆ ಅದರ ಒಂದು ಡೋಸ್ನ ಅಂತಾರಾಷ್ಟ್ರೀಯ ಬೆಲೆ 10 ಡಾಲರ್, ಅಂದರೆ 750 ರೂಪಾಯಿ. ಕೇಂದ್ರ ಸರ್ಕಾರ ರಾಜ್ಯಕ್ಕೆ ಪ್ರತೀ ಡೋಸ್ಗೆ 300 ರೂಪಾಯಿ ಮಾಡಿದೆ. ಕೇಂದ್ರ ಸರ್ಕಾರ ಪ್ರತೀ ಡೋಸ್ಗೆ 150 ರೂಪಾಯಿ ಖರೀದಿ ಬೆಲೆ ನಿಗದಿಪಡಿಸಿದೆ. ಒಂದೇ ಲಸಿಕೆಗೆ ದೇಶದಲ್ಲಿ ಎರಡು ಬೆಲೆ ಇರಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.
ಸದ್ಯದ ಆರ್ಥಿಕ ಸಂಕಷ್ಟದಲ್ಲಿ ಇಷ್ಟು ಬೆಲೆಗೆ ಒಬ್ಬ ಸಾಮಾನ್ಯನಿಗೆ ಎರಡು ಡೋಸ್ ಹಾಕಿಸಿಕೊಳ್ಳಲು ಸಾಧ್ಯವಿಲ್ಲ. ರಾಜ್ಯದಲ್ಲಿ ಈಗಾಗಲೇ 93 ಲಕ್ಷ ಡೋಸ್ಗಳನ್ನು ನಾಲ್ಕು ತಿಂಗಳಲ್ಲಿ ಕೊಡಲಾಗಿದೆ. ಇಷ್ಟು ಮಾತ್ರ ನೀಡುವ ಸಾಮರ್ಥ್ಯ ರಾಜ್ಯ ಸರ್ಕಾರಕ್ಕೆ ಇದ್ದಲ್ಲಿ ರಾಜ್ಯದ ಏಳು ಕೋಟಿ ಜನಸಂಖ್ಯೆಗೆ ಲಸಿಕೆ ನೀಡಲು ಕನಿಷ್ಠ ಐದು ವರ್ಷಗಳು ಬೇಕು. ಹೀಗೆ ನಡೆದಲ್ಲಿ ಹೇಗೆ ಸೋಂಕು ನಿಯಂತ್ರಿಸಲು ಸಾಧ್ಯ? ಇದು ರಾಜ್ಯ ಸರ್ಕಾರದ ಆರೋಗ್ಯ ವ್ಯವಸ್ಥೆಯ ಸಂಪೂರ್ಣ ವೈಫಲ್ಯ ಎಂದು ಹರಿಹಾಯ್ದರು.
ರಾಜ್ಯ ಸರ್ಕಾರ ಕೇವಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಾತ್ರವಲ್ಲ ಖಾಸಗಿ ಆಸ್ಪತ್ರೆಗಳಲ್ಲೂ ಉಚಿತ ಲಸಿಕೆ ನೀಡಬೇಕು. ಆಮ್ ಆದ್ಮಿ ಪಾರ್ಟಿಯ ದೆಹಲಿ ಸರ್ಕಾರ ಈಗಾಗಲೇ ಉಚಿತ ಲಸಿಕೆ ನೀಡುವ ಯೋಜನೆ ಹಾಕಿಕೊಂಡಿದೆ. ಕರ್ನಾಟಕ ಸರ್ಕಾರ ಉಚಿತ ಲಸಿಕೆ ನೀಡಿ ಆರ್ಥಿಕವಾಗಿ ಕುಗ್ಗಿರುವ ಜನತೆಯನ್ನು ರಕ್ಷಿಸಬೇಕು. ಉಚಿತ ಆರೋಗ್ಯ ಸೇವೆ ರಾಜ್ಯ ಸರ್ಕಾರದ ಕರ್ತವ್ಯ ಮತ್ತು ರಾಜ್ಯದ ಜನತೆಯ ಹಕ್ಕು ಎಂದು ಪ್ರತಿಪಾದಿಸಿದರು.
ಓದಿ : ದೊಡ್ದ ಪ್ರಮಾಣದಲ್ಲಿ ಲಸಿಕೆ ಲಭ್ಯವಿಲ್ಲ .. ಅಭಿಯಾನಕ್ಕೆ ಸಾಂಕೇತಿಕ ಚಾಲನೆ : ಸಚಿವ ಸುಧಾಕರ್
ಪ್ರಾಥಮಿಕ ಆರೋಗ್ಯ ಕೇಂದ್ರಗಳು ಆರೋಗ್ಯ ಸಿಬ್ಬಂದಿ ಕೊರತೆಯಿಂದ ತತ್ತರಿಸಿ ಹೋಗಿವೆ. ಹೀಗಾದಲ್ಲಿ ಸೋಂಕು ಹರಡುವಿಕೆ ತಡೆಯಲು ಸಾಧ್ಯವಿಲ್ಲ. ಆರೋಗ್ಯ ಸಿಬ್ಬಂದಿ ಸಂಖ್ಯೆಯನ್ನು ತಕ್ಷಣ ಹೆಚ್ಚಿಸಬೇಕು ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತದೆ ಎಂದರು.
ಸರಕಾರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 24 ಗಂಟೆ ಕಾಲ ತೆರೆದಿಡಬೇಕು. ಯಾವ ಸಮಯದಲ್ಲಿ ಜನತೆ ಆರೋಗ್ಯ ಸೇವೆ ಪಡೆಯಲು ಬಂದರೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇವೆ ನೀಡಲು ಸಿದ್ಧವಾಗಿರಬೇಕು ಮತ್ತು ತ್ವರಿತಗತಿಯಲ್ಲಿ ಉಚಿತ ಲಸಿಕೆ ನೀಡುವ ಕಾರ್ಯಕ್ರಮವನ್ನು ಜಾರಿ ಮಾಡಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಮುಖ್ಯ ವಕ್ತಾರ ಶರತ್ ಖಾದ್ರಿ ಆಗ್ರಹಿಸಿದರು.