ಬೆಂಗಳೂರು: ಲಾಕ್ಡೌನ್ ಸಡಿಲಿಕೆ ನಂತರ ಸಾರ್ವಜನಿಕರ ಅನುಕೂಲಕ್ಕಾಗಿ ಸಾರಿಗೆ ಸೇವೆ ಶುರು ಮಾಡಲಾಗಿದೆ. ರಾಜ್ಯಾದ್ಯಂತ ಇಂದು 1,606 ಕೆಎಸ್ಆರ್ಟಿಸಿ ಬಸ್ಗಳು ಸಂಚರಿಸಿದ್ದು, ಬೆಳಿಗ್ಗೆ 7 ರಿಂದ ಸಂಜೆ 7 ಗಂಟೆ ವರೆಗೆ 53,506 ಪ್ರಯಾಣಿಕರು ಪ್ರಯಾಣಿಸಿದ್ದಾರೆ.
ಬೆಂಗಳೂರಿನಿಂದ 231 ಬಸ್ಗಳು ರಾಜ್ಯದ ವಿವಿಧ ಭಾಗಗಳಿಗೆ ಸಂಚಾರ ಮಾಡಿವೆ. ಬೆಂಗಳೂರಿನಿಂದ 6,000 ಪ್ರಯಾಣಿಕರು, ದಾವಣಗೆರೆ, ಮೈಸೂರು, ಬಳ್ಳಾರಿ, ರಾಯಚೂರು, ಹೊಸಪೇಟೆ ಹಾಗೂ ಕಲಬುರಗಿ, ಮಡಿಕೇರಿ, ಚಿಕ್ಕಮಗಳೂರು, ಮಂಗಳೂರು ಸೇರಿದಂತೆ ಹುಬ್ಬಳ್ಳಿ, ಶಿರಸಿ ,ಬೆಳಗಾವಿ, ಶಿವಮೊಗ್ಗ, ಬಾಗಲಕೋಟೆಗೆ ಪ್ರಯಾಣಿಸಿದ್ದಾರೆ. ಇನ್ನು ನಿನ್ನೆ ಆನ್ಲೈನ್ ಮೂಲಕ 1,992 ಜನ ಮುಂಗಡ ಟಿಕೆಟ್ ಕಾಯ್ದಿರಿಸಿದ್ದರು.
ನಾಳೆ ಕೊನೆ ಬಸ್ ಸಂಜೆ 7 ಕ್ಕೆ ಬೆಂಗಳೂರಿನಿಂದ ನಿರ್ಗಮನ:
ಪ್ರಯಾಣಿಕರ ಅನುಕೂಲಕ್ಕಾಗಿ ನಾಳೆ ಬಸ್ಗಳ ಕಾರ್ಯಾಚರಣೆಯ ಸಮಯವನ್ನು ಸಂಜೆ 7 ಗಂಟೆಯವರೆಗೆ ವಿಸ್ತರಿಸಲಾಗಿದೆ. ಅಂದರೆ ಕೊನೆಯ ಬಸ್ ಸಂಜೆ 7 ಗಂಟೆಗೆ ಬೆಂಗಳೂರು ಬಿಡಲಿದೆ. ಉದಾಹರಣೆಗೆ ಕಲಬುರಗಿ, ಬೀದರ್ಗೆ ನಾಳೆ ಸಂಜೆ 7 ಕ್ಕೆ ಬೆಂಗಳೂರಿನಿಂದ ಬಸ್ ಹೊರಟು, ನಾಡಿದ್ದು ಬೆಳಿಗ್ಗೆ ಕಲುಬುರಗಿ, ಬೀದರ್ ತಲುಪುತ್ತದೆ. ಇದೇ ಮಾದರಿಯ ಬಸ್ಗಳ ಕಾರ್ಯಾಚರಣೆಯನ್ನು ಮುಂದಿನ ಆದೇಶದವರೆಗೂ ಮುಂದುವರೆಸಲಾಗುವುದು.