ಆನೇಕಲ್/ಬೆಂಗಳೂರು: ಮನೆಯೊಂದಕ್ಕೆ ನುಗ್ಗಿದ ಕಳ್ಳ ಬರಿಗೈಯಲ್ಲಿ ವಾಪಾಸಾದ ಕಾರಣ ಕೋಪಗೊಂಡು ಮನೆಗೆ ಬೆಂಕಿ ಹಚ್ಚಿ ಪರಾರಿಯಾದ ಘಟನೆ ಆನೇಕಲ್ ನಗರದ ಜನರನ್ನು ಗಾಬರಿಗೊಳಿಸಿದೆ.
ಆನೇಕಲ್ ಪಟ್ಟಣದ ಹೊಸೂರು ರಸ್ತೆಯ ಸೀಮೆಎಣ್ಣೆ ಬಂಕ್ ಹಿಂಭಾಗದ ಬೋರ್ವೆಲ್ ಸಂಪಂಗಿ ಮನೆಯಲ್ಲಿ ಈ ಘಟನೆ ನಡೆದಿದೆ.
ಮನೆಯಲ್ಲಿ ಯಾರೂ ಇಲ್ಲ, ಪ್ರವಾಸಕ್ಕೆಂದು ಹೊರಟಿದ್ದಾರೆ ಎಂಬ ನಿಖರ ಮಾಹಿತಿ ಕಲೆ ಹಾಕಿದ್ದ ಕಳ್ಳ ತಡರಾತ್ರಿ 12.15ಕ್ಕೆ ಮನೆ ಕಳ್ಳತನಕ್ಕೆ ಪಲ್ಸರ್ ಬೈಕ್ನಲ್ಲಿ ಬಂದಿದ್ದಾನೆ. ಮನೆ ಬೀಗ ಮುರಿದು, ಒಳನುಸುಳಿ ಮೊದಲು ಸಿಸಿ ಕ್ಯಾಮೆರಾ ರೆಕಾರ್ಡ್ ಆಗುತ್ತಿರುವ ಮೂಲ ಹುಡುಕಿ ಹಾರ್ಡ್ ಡಿಸ್ಕ್ ಬಿಚ್ಚಿ ನಂತರ ಕಳ್ಳತನಕ್ಕೆ ಪ್ರಯತ್ನಿಸಿದ್ದಾನೆ.
ಆದರೆ, ಕದಿಯಲು ಏನೂ ಕಣ್ಣಿಗೆ ಬೀಳದೇ ಮನೆಯ ಮೇಲಂತಸ್ತಿನ ಕೊಠಡಿಗಳಿಗೆ ಬೆಂಕಿ ಹಾಕಿ ಪರಾರಿಯಾಗಿದ್ದಾನೆ. ಬೆಳಿಗ್ಗೆ ಅಕ್ಕಪಕ್ಕದ ಜನ ಸಂಪಂಗಿ ಮನೆಯಲ್ಲಿ ಬೆಂಕಿ, ಹೊಗೆ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಮಿಸಿದ ಪೊಲೀಸರು, ಅಗ್ನಿ ಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಿದರೂ ಮಹಡಿಯಲ್ಲಿನ ಎಲ್ಲ ವಸ್ತುಗಳೂ ಸುಟ್ಟು ಬೂದಿಯಾಗಿದ್ದವು. ಪಕ್ಕದ ಮನೆಯ ಹೊರಗಿನ ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯಗಳು ಸೆರೆಯಾಗಿದ್ದು ಪೊಲೀಸರು ಕಳ್ಳನ ಸೆರೆಗೆ ಬಲೆ ಬೀಸಿದ್ದಾರೆ.