ಬೆಂಗಳೂರು: ಮೂರು ತಿಂಗಳಲ್ಲಿ ಸಿಕ್ಸ್ ಪ್ಯಾಕ್ ಬರಿಸುವುದಾಗಿ ನಂಬಿಸಿ ಹಣ ಪಡೆದಿದ್ದಲ್ಲದೇ ಬ್ಯಾಂಕಿನಿಂದ ಕೊಡಿಸಿದ್ದ ಲೋನ್ ಇಂಎಐ ಪಾವತಿಸದೆ ಜಿಮ್ ತರಬೇತುದಾರ ಮೋಸ ಮಾಡಿರುವ ಆರೋಪ ಪ್ರಕರಣ ಬೆಳಕಿಗೆ ಬಂದಿದೆ. ಖಾಸಗಿ ಕಂಪನಿ ಉದ್ಯೋಗಿ ಕೌಶಿಕ್ ಎಂಬುವರು ನೀಡಿದ ದೂರಿನ ಮೇರೆಗೆ ಜಿಮ್ ಟ್ರೈನರ್ ಮೋಹನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಇಲ್ಲಿನ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಪ್ರೀತ್ಸೋದ್ ತಪ್ಪಾ?: ಲವರ್ಸ್ಗಳನ್ನ ಮರಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು
ಬನಶಂಕರಿ ಮೂರನೇ ಹಂತದಲ್ಲಿ ಎಂಪವರ್ ಹೆಸರಿನಲ್ಲಿ ಮೋಹನ್ ಜಿಮ್ ನಡೆಸುತ್ತಿದ್ದ. ಕೆಲ ತಿಂಗಳ ಹಿಂದೆ ಹೊಸಕೆರೆಹಳ್ಳಿ ನಿವಾಸಿ ಕೌಶಿಕ್, ಮಾಸಿಕ 3 ಸಾವಿರ ಫೀ ನೀಡಿ ಈತನ ಜಿಮ್ ಸೇರಿದ್ದನು. ಕೆಲ ದಿನಗಳ ಬಳಿಕ ಮೋಹನ್ ಸಿಕ್ಸ್ ಪ್ಯಾಕ್ ಮಾಡಿರುವ ಫೋಟೋಗಳನ್ನ ಕೌಶಿಕ್ಗೆ ತೋರಿಸಿ ಮೂರೇ ತಿಂಗಳಲ್ಲಿ ನಿನಗೂ ಸಿಕ್ಸ್ ಪ್ಯಾಕ್ ಮಾಡಿಸುತ್ತೇನೆ ಎಂದು ಭರವಸೆ ನೀಡಿದ್ದ ಎನ್ನಲಾಗ್ತಿದೆ.
ಈತನ ಮಾತು ನಂಬಿ ಮೊದಲೆರಡು ಹಂತಗಳಲ್ಲಿ ಕೌಶಿಕ್ ಎರಡು ಲಕ್ಷ ಹಣ ನೀಡಿದ್ದಾನೆ. ಬಳಿಕ ಹಣಕಾಸಿನ ಸಮಸ್ಯೆ ಎದುರಾಗಿದ್ದು ಬ್ಯಾಂಕ್ನಿಂದ ಐದು ಲಕ್ಷ ಹಣ ಕೊಡಿಸಿದರೆ ಇಎಂಐ ನಾನೇ ಕಟ್ಟುತ್ತೇನೆ ಎಂದು ಹೇಳಿದ್ದ. ಇದರಂತೆ ಜಿಮ್ ಟ್ರೈನರ್ಗೆ ತನ್ನ ಬ್ಯಾಂಕ್ ಖಾತೆಯಿಂದ 5 ಲಕ್ಷ ಲೋನ್ ಕೊಡಿಸಿದ್ದಾನೆ. ಲೋನ್ ಹಣ ಕೈಗೆ ಬಂದ ಬಳಿಕ ಇಐಎಂ ಕಟ್ಟಿರಲಿಲ್ಲ.
ಇದನ್ನೂ ಓದಿ: ರೇಖಾ ಕೊಲೆ ಕೇಸ್ಗೆ ಬಿಗ್ ಟ್ವಿಸ್ಟ್: ಮತ್ತೊಬ್ಬನ ಜೊತೆಗಿನ ಸಲುಗೆಯೇ ಹತ್ಯೆಗೆ ಕಾರಣ!?
ಬ್ಯಾಂಕ್ ಅಧಿಕಾರಿಗಳು ಮನೆಗೆ ಬಂದಾಗ ಮೋಹನ್ ಲೋನ್ ಪಾವತಿಸದಿರುವುದು ಗೊತ್ತಾಗಿದೆ. ಈ ಬಗ್ಗೆ ಪ್ರಶ್ನಿಸಿದಕ್ಕೆ 30 ಸಾವಿರ ಹಣ ನೀಡಿ ಉಳಿದ ಹಣ ನೀಡುವುದಿಲ್ಲ ಎಂದು ಆಶ್ಲೀಲವಾಗಿ ನಿಂದಿಸಿದ್ದಾನೆ. ಹಂತ ಹಂತವಾಗಿ 6.20 ಲಕ್ಷ ರೂ. ಮೋಸ ಮಾಡಿರುವುದಾಗಿ ಕೌಶಿಕ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.