ಬೆಂಗಳೂರು: ಕಾಲೇಜು ಫೆಸ್ಟ್ ಸಂದರ್ಭದಲ್ಲಿ ವಿದ್ಯಾರ್ಥಿ ಗುಂಪುಗಳ ನಡುವೆ ಆರಂಭವಾದ ಮಾರಾಮಾರಿ ಓರ್ವ ವಿದ್ಯಾರ್ಥಿಯ ಭೀಕರ ಕೊಲೆಯೊಂದಿಗೆ ಅಂತ್ಯವಾದ ಘಟನೆ ತಡರಾತ್ರಿ ಬಾಗಲೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಗರದ ಕಾಲೇಜೊಂದರ ವಿದ್ಯಾರ್ಥಿಯಾಗಿದ್ದ ಗುಜರಾತ್ ಮೂಲದ ಭಾಸ್ಕರ್ ಜೆಟ್ಟಿ (22) ಕೊಲೆಯಾದ ದುರ್ದೈವಿ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದುತ್ತಿದ್ದ ಭಾಸ್ಕರ್ ಹಾಗೂ ಮತ್ತೋರ್ವ ವಿದ್ಯಾರ್ಥಿ ಗುಂಪಿನ ನಡುವೆ ತಡರಾತ್ರಿ ಕಾಲೇಜು ಪೆಸ್ಟ್ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಈ ವೇಳೆ ಎದುರಾಳಿ ಗುಂಪು ಭಾಸ್ಕರ್ಗೆ ಚಾಕುವಿನಿಂದ ಇರಿದಿದ್ದು, ಪರಿಣಾಮ ಆತ ಸಾವನ್ನಪ್ಪಿದ್ದಾನೆ. ಕಾಲೇಜು ಸಿಸಿಟಿವಿ ಪರಿಶೀಲಿಸುತ್ತಿರುವ ಬಾಗಲೂರು ಠಾಣಾ ಪೊಲೀಸರು, ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಈ ಬಗ್ಗೆ ಈಶಾನ್ಯ ವಿಭಾಗ ಡಿಸಿಪಿ ಲಕ್ಷ್ಮೀ ಪ್ರಸಾದ್ ಮಾಹಿತಿ ನೀಡಿದ್ದು, ಕಾಲೇಜು ಕಾರ್ಯಕ್ರಮದ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಮೈ ಟಚ್ ಆಗಿದೆ ಎಂಬ ಕಾರಣಕ್ಕೆ ಗಲಾಟೆ ಆರಂಭವಾಗಿ ಬಳಿಕ ವಿಕೋಪಕ್ಕೆ ತಿರುಗಿದೆ. ಆಗ ಎದುರಾಳಿ ಗುಂಪು ಬಾಸ್ಕರನ್ ಕೈ ಮತ್ತು ಎದೆ ಭಾಗಕ್ಕೆ ಚಾಕುವಿನಿಂದ ಇರಿದಿದೆ. ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ಚಿಕಿತ್ಸೆ ಫಲಕಾರಿಯಾಗದೇ ಬಾಸ್ಕರ್ ಸಾವನ್ನಪ್ಪಿದ್ದಾನೆ. ಇನ್ನು ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ. ಆದ್ರೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ಗುರುತು ಪತ್ತೆಯಾಗಿದೆ. ಶೀಘ್ರದಲ್ಲೇ ಅವರನ್ನು ಬಂಧಿಸುತ್ತೇವೆ ಎಂದು ಡಿಸಿಪಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ.
ಇದನ್ನೂ ಓದಿ: ಸಿಗರೇಟ್ ವಿಚಾರ: 8ನೇ ತರಗತಿ ಸ್ನೇಹಿತನನ್ನು ಕಲ್ಲಿನಿಂದ ಹೊಡೆದು ಕೊಂದ ಸಹಪಾಠಿಗಳು!