ಬೆಂಗಳೂರು: ನಿನ್ನೆ ರಾತ್ರಿ ಡಿ.ಜೆ. ಹಳ್ಳಿ ಮತ್ತು ಕೆ ಜೆ ಹಳ್ಳಿಯಲ್ಲಿ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿ ಮೇಲೆ ಕೆಲ ಪುಂಡರು ದಾಳಿ ನಡೆಸಿದ್ದಾರೆ. ಆತ್ಮರಕ್ಷಣೆ ಮಾಡಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳುವಂತೆ ವಾಕಿ ಮೂಲಕ ಸಿಬ್ಬಂದಿಗೆ ಸೂಚನೆ ನೀಡಿರುವ ಬಗ್ಗೆ ಹಿರಿಯ ಐಪಿಎಸ್ ಅಧಿಕಾರಿ ಶಶಿಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಹಿರಿಯ ಐಪಿಎಸ್ ಅಧಿಕಾರಿ ಶಶಿ ಕುಮಾರ್ ಮಾತನಾಡಿ, ನಿನ್ನೆ ನಡೆದ ಘಟನೆ ವೇಳೆ ನಮ್ಮ ಸಿಬ್ಬಂದಿ ಪ್ರಾಣವನ್ನೂ ಲೆಕ್ಕಿಸದೆ ಕೆಲಸ ಮಾಡಿದ್ದಾರೆ. ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾದಾಗ ನಮಗೆ ಬೇರೆ ದಾರಿ ತೋರದೆ ಪ್ರಾಣ ರಕ್ಷಿಸಿಕೊಳ್ಳಲು ನಾವು ವಾಕಿಯಲ್ಲಿ ಸಿಬ್ಬಂದಿಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದೇವೆ. ಪೊಲೀಸರಿಗೂ ಮನೆ, ಸಂಸಾರ, ಜವಾಬ್ದಾರಿಗಳಿರುತ್ತವೆ. ಹೀಗೆ ರಕ್ಷಿಸುವವರ ಮೇಲೆಯೇ ತಿರುಗಿ ಬೀಳುವುದು ಸರಿಯಲ್ಲ ಎಂದು ಹೇಳಿದ್ದಾರೆ.
ನಿನ್ನೆ ನಡೆದ ಘಟನೆ ನಿಜಕ್ಕೂ ದುರದೃಷ್ಟಕರ. ಗಲಭೆ ವೇಳೆ ಪೊಲೀಸ್ ವಾಹನ, ಕೆಎಸ್ಆರ್ಪಿ ತುಕಡಿ, ಹೊಯ್ಸಳ ಹಾಗೂ ಪೊಲೀಸ್ ಜೀಪುಗಳನ್ನೂ ಜಖಂ ಮಾಡಿದ್ದಾರೆ. ಕಣ್ಣ ಮುಂದೆಯೇ ಇಷ್ಟೆಲ್ಲಾ ನಡೆಯುವಾಗ ಸಮಾಜ ಕಾಯುವ ನಾವು ಸುಮ್ಮನೆ ಕೂರುವುದು ಸೂಕ್ತವಲ್ಲ. ಆರೋಪಿಗಳ ಮನಸ್ಸು ವಿಕೃತಿಯಾದಾಗ ಈ ರೀತಿಯ ನಿರ್ಧಾರವನ್ನು ನಾವು ತೆಗೆದುಕೊಳ್ಳುವುದು ಅನಿವಾರ್ಯ ಆಗುತ್ತದೆ ಎಂದಿದ್ದಾರೆ.
ಕೆ. ಜಿ ಹಳ್ಳಿ ಹಾಗೂ ಡಿ. ಜೆ. ಹಳ್ಳಿ ಬಳಿ ನಡೆದ ಗಲಭೆ ವೇಳೆ ಎರಡೂ ಹಳ್ಳಿಗಳ ಠಾಣೆಗಳನ್ನ ಕಿಡಿಗೇಡಿಗಳು ಸಂಪೂರ್ಣವಾಗಿ ಜಖಂ ಮಾಡಿದ್ದರು. ಪರಿಸ್ಥಿತಿ ಕೈ ಮೀರುತ್ತಿದ್ದ ಸಂದರ್ಭದಲ್ಲಿ ಸಿಬ್ಬಂದಿಗೆ ಹಿರಿಯ ಅಧಿಕಾರಿಗಳು ಧೈರ್ಯ ತುಂಬಿ ನಿಮ್ಮನ್ನ ನೀವೇ ರಕ್ಷಣೆ ಮಾಡಿಕೊಳ್ಳಬೇಕು. ಆತ್ಮರಕ್ಷಣೆಗೆ ಗಾಳಿಯಲ್ಲಿ ಗುಂಡು ಹಾರಿಸಿ ಎಂದು ವಾಕಿಯಲ್ಲಿ ತಿಳಿಸಿದ್ದರು. ಈ ವೇಳೆ ಕೆಲ ಸಿಬ್ಬಂದಿ ಅಳುತ್ತಲೇ ಒಪ್ಪಿಕೊಂಡು ಕಾರ್ಯಪ್ರವೃತ್ತರಾದರು.
ಸದ್ಯ ನಿನ್ನೆ ರಾತ್ರಿ ನಡೆದ ಗಲಾಟೆಯಲ್ಲಿ 500ಕ್ಕೂ ಹೆಚ್ಚು ಜನ ಆರೋಪಿಗಳಿದ್ದರು. ಈ ವೇಳೆ ಯಾರಿಗೆ ಕೊರೊನಾ ಇದೆ ಎನ್ನುವುದೂ ಗೊತ್ತಿಲ್ಲ. ಘಟನೆಯಿಂದ ಸಾಕಷ್ಟು ಜನ ಸಿಬ್ಬಂದಿಗೆ ಗಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಮ್ಮ ಪೊಲೀಸರು ಕಳೆದ ಆರು ತಿಂಗಳಿಂದ ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡ್ತಿದ್ರು. ಇಂತಹ ಸಂದರ್ಭದಲ್ಲಿ ಈ ರೀತಿ ಕೃತ್ಯ ನಿಜಕ್ಕೂ ಹೇಯಕರ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪೊಲೀಸರು ಪ್ರಾಣದ ಹಂಗು ತೊರೆದು ಕೆಲಸಮಾಡಬೇಕು. ಹಗಲು ರಾತ್ರಿ ಎನ್ನದೆ ಸಮಾಜಕ್ಕಾಗಿ ದುಡಿಯಬೇಕು. ಯಾವ ಸಿಬ್ಬಂದಿಯೂ ಭಯ ಪಡಬೇಡಿ. ನಿಮ್ಮೊಂದಿಗೆ ನಾವಿದ್ದೇವೆ ಎಂದು ಈಟಿವಿ ಭಾರತದ ಮೂಲಕ ಮತ್ತೊಮ್ಮೆ ಸಿಬ್ಬಂದಿಗೆ ಧೈರ್ಯ ತುಂಬಿದ್ದಾರೆ.