ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ಅಖಾಡದಲ್ಲಿನ ಮಹಾಸಮರ ಅಂತಿಮ ಹಂತಕ್ಕೆ ಬಂದಿದೆ. ಪ್ರಮುಖ ರಾಜಕೀಯ ಪಕ್ಷಗಳು ಮತದಾರರ ಮತ ಸೆಳೆಯಲು ತಮ್ಮ ಪ್ರಣಾಳಿಕೆಯಲ್ಲಿ ಉಚಿತಗಳ ಭರಪೂರ ಭರವಸೆಗಳನ್ನು ನೀಡುತ್ತಿವೆ. ಆದರೆ, ಅಧಿಕಾರಕ್ಕೆ ಬರಲು ಪಕ್ಷಗಳ ವಿವಿಧ ಉಚಿತ ಗ್ಯಾರಂಟಿಗಳಿಂದ ರಾಜ್ಯದ ಬೊಕ್ಕಸದ ಮೇಲೆ ಹೊರೆ ಏನಾಗಲಿದೆ ಎಂಬ ವರದಿ ಇಲ್ಲಿದೆ ಓದಿ.
ಮತಬೇಟೆಗೆ ಇಳಿದ ಮೂರು ಪಕ್ಷಗಳು: ರಾಜ್ಯ ಚುನಾವಣೆಯ ಅಖಾಡದಲ್ಲಿ ಬಿರುಸಿನ ಪ್ರಚಾರ ನಡೆಯುತ್ತಿದೆ. ಇನ್ನೇನು ನಾಲ್ಕು ದಿನಗಳಲ್ಲಿ ಮತದಾನ ನಡೆಯಲಿದೆ. ಹೀಗಾಗಿ ರಾಜಕೀಯ ಪಕ್ಷಗಳು ಅಂತಿಮ ಹಂತದ ಕಸರತ್ತು ನಡೆಸುತ್ತಿದ್ದಾರೆ. ಇತ್ತ ಮತದಾರ ಮತಬೇಟೆಗಾಗಿ ಪ್ರಮುಖ ಮೂರೂ ರಾಜಕೀಯ ಪಕ್ಷಗಳು ಉಚಿತ ಭರವಸೆಗಳನ್ನು ನೀಡಿವೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಉಚಿತಗಳ ಭರವಸೆಗಳನ್ನು ಘೋಷಿಸಿದೆ. ಆ ಮೂಲಕ ಮತಸೆಳೆಯುವ ಇರಾದೆ ರಾಜಕೀಯ ಪಕ್ಷಗಳದ್ದು.
ಆದರೆ, ರಾಜಕೀಯ ಪಕ್ಷಗಳ ಘೋಷಿಸಿರುವ ಈ ಉಚಿತ ಭರವಸೆಗಳಿಂದ ರಾಜ್ಯದ ಆರ್ಥಿಕತೆ ಏರುಪೇರಾಗಲಿದೆ ಎಂಬುದು ತಜ್ಞರ ಅಭಿಮತ. ಇಂಥ ಉಚಿತಗಳು ರಾಜ್ಯದ ಬೊಕ್ಕಸದ ಮೇಲೆ ತೀವ್ರ ಏಟು ಬೀಳಲಿದೆ. ಈಗಷ್ಟೇ ಕೋವಿಡ್ ಲಾಕ್ ಡೌನ್ ಆರ್ಥಿಕ ಸಂಕಷ್ಟದಿಂದ ಚೇತರಿಸುತ್ತಿರುವ ರಾಜ್ಯದ ಆರ್ಥಿಕತೆಗೆ ಈ ಉಚಿತಗಳು ದೊಡ್ಡ ಹೊಡೆತ ನೀಡಲಿದೆ. ಈ ಉಚಿತಗಳಿಗಳಿಂದ ವೆಚ್ಚ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಲಿದ್ದು, ಅಭಿವೃದ್ಧಿಗಾಗಿ ಬಂಡವಾಳ ವೆಚ್ಚಕ್ಕೆ ಎಳ್ಳಷ್ಟು ಹಣ ಉಳಿಯುತ್ತದೆ ಎಂಬುದು ಆರ್ಥಿಕ ತಜ್ಞರ ಆತಂಕ.
ಕಾಂಗ್ರೆಸ್ ಉಚಿತ ಉಡುಗೊರೆಗಳ ಹೊರೆ ಎಷ್ಟು?: ಕಾಂಗ್ರೆಸ್ ಈ ಬಾರಿ ತನ್ನ ಪ್ರಣಾಳಿಕೆಯಲ್ಲಿ ಆರು ಪ್ರಮುಖ ಉಚಿತ ಭರವಸೆಗಳನ್ನು ಘೋಷಿಸಿ, ಫ್ರಿಬೀಸ್ ಭರವಸೆ ನೀಡುವಲ್ಲಿ ಮುಂಚೂಣಿಯಲ್ಲಿದೆ. ಆ ಪೈಕಿ ಪ್ರಮುಖ ಮೂರು ಉಚಿತ ಭರವಸೆಗಳ ಒಟ್ಟು ವೆಚ್ಚದ ಮೇಲೆ ಕಣ್ಣಾಡಿಸೋಣ.
ಕಾಂಗ್ರೆಸ್ ಪ್ರಮುಖವಾಗಿ ರಾಜ್ಯದ ಜನರಿಗೆ 200 ಯುನಿಟ್ ಉಚಿತ ವಿದ್ಯುತ್ ಪೂರೈಸುವ ಭರವಸೆ ನೀಡಿದೆ. ಈ ಉಚಿತ ವಿದ್ಯುತ್ ಭರವಸೆಯಿಂದಾಗಿ ವಾರ್ಷಿಕ ಅಂದಾಜು ಸುಮಾರು 25,800 ಕೋಟಿ ರೂ. ಬೊಕ್ಕಸದ ಮೇಲೆ ಹೊರೆ ಬೀಳಲಿದೆ. ಅದೇ ರೀತಿ ಬಿಪಿಎಲ್ ಚೀಟಿದಾರರ ಕುಟುಂಬದ ದುಡಿಯುವ ಮಹಿಳೆಗೆ ಪ್ರತಿ ತಿಂಗಳು 2,000 ರೂ. ಧನಸಹಾಯ ನೀಡುವ ಭರವಸೆಯನ್ನು ಕಾಂಗ್ರೆಸ್ ಘೋಷಿಸಿದೆ. ಪ್ರಸಕ್ತ ರಾಜ್ಯದಲ್ಲಿ 1.28 ಕೋಟಿ ಬಿಪಿಎಲ್ ಚೀಟಿದಾರರು ಇದ್ದಾರೆ. ಬಿಪಿಎಲ್ ಕುಟುಂಬದ ಮಹಿಳೆಯರಿಗೆ ನೀಡುವ ಮಾಸಿಕ 2,000 ರೂ. ಗೃಹಲಕ್ಷ್ಮಿ ಯೋಜನೆಯಿಂದ ಬೊಕ್ಕಸದ ಮೇಲೆ ವಾರ್ಷಿಕ ಸುಮಾರು 30,000 ಕೋಟಿ ರೂ. ಹೊರೆ ಬೀಳುತ್ತೆ ಎಂದು ಅಂದಾಜಿಸಲಾಗಿದೆ.
ಇನ್ನೂ ಮಹಿಳೆಯರಿಗೆ ಸರ್ಕಾರಿ ಬಸ್ನಲ್ಲಿ ಉಚಿತ ಬಸ್ ಪ್ರಯಾಣದ ಭರವಸೆಯನ್ನು ಕಾಂಗ್ರೆಸ್ ಘೋಷಿಸಿದೆ. ಈ ಉಚಿತ ಯೋಜನೆಯಿಂದ ಅಂದಾಜು ವಾರ್ಚಿಕೆ 3,000 ಕೋಟಿಗೂ ಹೆಚ್ಚು ಹೊರೆ ಬೀಳುವ ಅಂದಾಜು ಮಾಡಲಾಗಿದೆ. ಆದರೆ, ಈ ಯೋಜನೆಗಾಗಿನ ವೆಚ್ಚದ ನಿಖರ ಅಂಕಿ - ಅಂಶ ಸರ್ಕಾರಿ ಬಸ್ನಲ್ಲಿ ಓಡಾಡುವ ಒಟ್ಟು ಮಹಿಳೆಯರು ಸಂಖ್ಯೆಯ ಆಧಾರದಲ್ಲಿ ಗೊತ್ತಾಗಲಿದೆ. ಅಂದರೆ ಈ ಮೂರು ಪ್ರಮುಖ ಉಚಿತ ಭರವಸೆಗಳಿಂದ ಬೊಕ್ಕಸದ ಮೇಲೆ ಅಂದಾಜು ಸುಮಾರು 58,000 ಕೋಟಿ ರೂ. ಹೊರೆ ಬೀಳಲಿದೆ.
ಬಿಜೆಪಿಯ ಪ್ರಮುಖ ಉಚಿತ ಯೋಜನೆಗಳ ಹೊರೆ ಎಷ್ಟು?: ಇತ್ತ ಬಿಜೆಪಿ ಕೂಡ ಉಚಿತ ಭರವಸೆ ನೀಡುವಲ್ಲಿ ಹಿಂದೆ ಬಿದ್ದಿಲ್ಲ. ಪ್ರಮುಖವಾಗಿ ಬಿಪಿಎಲ್ ಕುಟುಂಬಕ್ಕೆ ಅರ್ಧ ಲೀಟರ್ ನಂದಿನಿ ಹಾಲನ್ನು ಉಚಿತವಾಗಿ ನೀಡುವ ಭರವಸೆ ನೀಡಿದೆ. ಅರ್ಧ ಲೀಟರ್ ನಂದಿನಿ ಹಾಲಿನ ದರ 20 ರೂ. ಇದೆ. ರಾಜ್ಯದಲ್ಲಿ ಒಟ್ಟು 1.17 ಕೋಟಿ ಬಿಪಿಎಲ್ ಚೀಟಿ ಹೊಂದಿರುವ ಕುಟುಂಬಗಳಿವೆ ಇದೆ. ಪ್ರತಿ ದಿನ ಅರ್ಧ ಲೀಟರ್ ನಂದಿನಿ ಹಾಲು ನೀಡುವ ಈ ಯೋಜನೆಯಿಂದ ಬೊಕ್ಕಸದ ಮೇಲೆ ವಾರ್ಷಿಕ ಸುಮಾರು 8,000 ಕೋಟಿ ರೂ. ವೆಚ್ಚವಾಗಲಿದೆ.
ಬಿಪಿಎಲ್ ಕುಟುಂಬಕ್ಕೆ ವಾರ್ಷಿಕ ಮೂರು ಉಚಿತ ಎಲ್‌ಪಿಜಿ ಸಿಲಿಂಡರ್ ಪೂರೈಕೆ ಬಿಜೆಪಿಯ ಮತ್ತೊಂದು ಮಹತ್ವದ ಘೋಷಣೆಯಾಗಿದೆ. ಯುಗಾದಿ, ಗಣೇಶ್ ಚತುರ್ಥಿ ಮತ್ತು ದೀಪಾವಳಿ ವೇಳೆ ಉಚಿತ ಎಲ್ ಪಿಜಿ ಸಿಲಿಂಡರ್ ನೀಡುವ ಭರವಸೆ ನೀಡಿದೆ. ಅದರಂತೆ ಗೃಹ ಬಳಕೆಯ ಸಿಲಿಂಡರ್ ಬೆಲೆ ಸದ್ಯ ಸುಮಾರು 1,055 ರೂ. ಇದೆ. 1.77 ಕೋಟಿ ಬಿಪಿಎಲ್ ಕಾರ್ಡ್ದಾರರಿಗೆ ಮೂರು ಬಾರಿ ಉಚಿತ ಸಿಲಿಂಡರ್ ನೀಡಿದರೆ, ವಾರ್ಷಿಕ ಸುಮಾರು 3,700 ಕೋಟಿ ರೂ. ವೆಚ್ಚ ತಗುಲಲಿದೆ. ಆ ಮೂಲಕ ಈ ಪ್ರಮುಖ ಎರಡು ಉಚಿತ ಭರವಸೆಗಳಿಂದ ಸರ್ಕಾರದ ಬೊಕ್ಕಸದ ಮೇಲೆ ಅಂದಾಜು ಸುಮಾರು 12,000 ಕೋಟಿ ರೂ. ಹೊರೆ ಬೀಳಲಿದೆ.
ಸರ್ಕಾರದ ಆರ್ಥಿಕತೆ ಮೇಲಾಗುವ ಹೊರೆ ಎಷ್ಟು?: 2022-23ರಲ್ಲಿ ರಾಜ್ಯ ಬಜೆಟ್ ನಲ್ಲಿ ಆದಾಯ ಕೊರತೆ 14,699 ಕೋಟಿ ರೂ. ಇತ್ತು. ಕಾಂಗ್ರೆಸ್ ಗೃಹಲಕ್ಷ್ಮಿ ಯೋಜನೆಯಿಂದ ಬೊಕ್ಕಸದ ಮೇಲೆ ವಾರ್ಷಿಕ 30,000 ಕೋಟಿ ರೂ. ಹೊರೆ ಆಗುತ್ತದೆ. ಆ ಮೂಲಕ ಬಂಡವಾಳ ವೆಚ್ಚ 46,955 ಕೋಟಿ ರೂ. ನಿಂದ 16,300 ಕೋಟಿ ರೂ.ಗೆ ಇಳಿಕೆಯಾಗಲಿದೆ. ಜೊತೆಗೆ ಆದಾಯ ಕೊರತೆ 45,000 ಕೋಟಿ ರೂ. ಗೂ ಅಧಿಕವಾಗಲಿದೆ. ಬಂಡವಾಳ ವೆಚ್ಚಕ್ಕೆ ಅಲ್ಪ ಹಣ ಸಿಗುವುದರಿಂದ ಮೂಲ ಅಭಿವೃದ್ಧಿ ಮೇಲೆ ಪರಿಣಾಮ ಬೀರಲಿದೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ. ಇನ್ನು ಮಧ್ಯಮಾವಧಿ ಹಣಕಾಸು ಯೋಜನೆ 2022-26ರ ಪ್ರಕಾರ ಒಟ್ಟು ಆದಾಯ ಸಂಗ್ರಹದ 90% ರಷ್ಟು ಬದ್ಧ ವೆಚ್ಚಕ್ಕೆ ಹೋಗುತ್ತದೆ.
ಉಚಿತ ಭರವಸೆಗಳಿಂದ ರಾಜ್ಯದ ಆರ್ಥಿಕ ಆರೋಗ್ಯದ ಮೇಲಾಗುವ ಪರಿಣಾಮ ಅರಿಯಲು ರಾಜ್ಯದ ವಿತ್ತೀಯ ಕೊರತೆ ಹಾಗೂ ಜಿಎಸ್ಡಿಪಿ ಜೊತೆ ಅವುಗಳನ್ನು ತುಲನೆ ಮಾಡಬೇಕು. ಕಾಯ್ದೆ ಪ್ರಕಾರ ವಿತ್ತೀಯ ಕೊರತೆ ಜಿಎಸ್ ಡಿಪಿಯ 3% ಮಿತಿಯೊಳಗೆ ಇರಬೇಕು. 2023-24 ಸಾಲಿನಲ್ಲಿ ಕರ್ನಾಟಕದ ಜಿಎಸ್ ಡಿಪಿ 23.33 ಲಕ್ಷ ಕೋಟಿ ರೂ. ಇದೆ. ಇನ್ನು ವಿತ್ತೀಯ ಕೊರತೆ 60,531 ಕೋಟಿ ರೂ. ಇದೆ. ಕಾಂಗ್ರೆಸ್ ನ ಪ್ರಮುಖ ಉಚಿತ ಭರವಸೆಗಳಿಂದ ಬೊಕ್ಕಸದ ಮೇಲೆ ಸುಮಾರು 58,000 ಕೋಟಿ ರೂ. ಹೊರೆ ಬೀಳುತ್ತೆ. ಅದರಂತೆ ಒಟ್ಟು ವಿತ್ತೀಯ ಕೊರತೆಯ 95.81% ಉಚಿತಗಳಿಗೆ ಹೋಗುತ್ತದೆ. ಇತ್ತ ಬಿಜೆಪಿಯ ಎರಡು ಉಚಿತ ಭರವಸೆಗಳಿಗೆ ಆಗುವ ವೆಚ್ಚ ಅಂದಾಜು ಸುಮಾರು 12,000 ಕೋಟಿ ರೂ. ಅಂದರೆ, ಒಟ್ಟು ವಿತ್ತೀಯ ಕೊರತೆಯ ಸುಮಾರು 19% ಆಗಲಿದೆ.
ವೆಚ್ಚ ಸರಿದೂಗಿಸಲು ತೆರಿಗೆ ಹೊರೆ, ಸಾಲವೇ ಗತಿ: ಇಷ್ಟು ದೊಡ್ಡ ಪ್ರಮಾಣದ ವೆಚ್ಚ ಸರಿದೂಗಿಸಲು ದೊಡ್ಡ ಪ್ರಮಾಣದ ಸಾಲದ ಮೊರೆ ಹೋಗಲೇ ಬೇಕು. ಜೊತೆಗೆ ಜನರ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಬೇಕು. ಕೇವಲ ವೆಚ್ಚ ಕಡಿತಗಳಿಂದ ಇಷ್ಟು ದೊಡ್ಡ ಪ್ರಮಾಣದ ಉಚಿತಗಳ ವೆಚ್ಚದ ಮೊತ್ತವನ್ನು ಭರಿಸುವುದು ಕಷ್ಟಸಾಧ್ಯ ಎಂಬುದು ಆರ್ಥಿಕ ಇಲಾಖೆ ಅಧಿಕಾರಿಗಳ ಅಭಿಪ್ರಾಯ. ಈ ಉಚಿತಗಳ ವೆಚ್ಚವನ್ನು ಸರಿದೂಗಿಸಲು ಜನರ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಲೇಬೇಕಾದ ಅನಿವಾರ್ಯತೆ ಬರಲಿದೆ. ಜೊತೆಗೆ ದೊಡ್ಡ ಪ್ರಮಾಣದ ಸಾಲದ ಮೊರೆ ಹೋಗುವುದು ಅನಿವಾರ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2023-24 ಸಾಲಿನಲ್ಲಿ ರಾಜ್ಯದ ಒಟ್ಟು ಹೊಣೆಗಾರಿಕೆ ಮೊತ್ತ ಸುಮಾರು 5,64,896 ಲಕ್ಷ ಕೋಟಿ ರೂ. ತಲುಪಲಿದೆ.
ರಾಜ್ಯದ ಸಾಲ 3 ಲಕ್ಷ ಕೋಟಿ ರೂ.: ಕರ್ನಾಟಕದ ಸಾಲದ ಒಟ್ಟು ಹೊಣೆಗಾರಿಕೆ 2013-14ರಲ್ಲಿ ಸುಮಾರು 1.36 ಲಕ್ಷ ಕೋಟಿ ರೂ. ಇತ್ತು. ಆಗಿನ ಸಿದ್ದರಾಮಯ್ಯ ಸರ್ಕಾರದ ಅನೇಕ ಉಚಿತ ಯೋಜನೆ, ಸಾಲ ಮನ್ನಾದಿಂದ ಸಾಲದ ಹೊರೆ ಹಠಾತ್ ಏರಿಕೆ ಕಂಡಿತು. 65 ವರ್ಷದಲ್ಲಿ ರಾಜ್ಯ ಒಟ್ಟು 1,30,000 ಕೋಟಿ ರೂ. ಸಾಲ ಮಾಡಿತ್ತು. ಸಿದ್ದರಾಮಯ್ಯ ತಮ್ಮ ಐದು ವರ್ಷದ ಅಧಿಕಾರವಧಿಯಲ್ಲಿ ಸುಮಾರು 1,28,000 ಕೋಟಿ ರೂ. ಸಾಲ ಮಾಡಿದ್ದರು. ಅಲ್ಲಿಂದ ಸಾಲದ ಪ್ರಮಾಣ ಜಾಸ್ತಿಯಾಗುತ್ತಾ ಹೋಯಿತು. ಇತ್ತ ಕೋವಿಡ್ ಮತ್ತು ಲಾಕ್ ಡೌನ್ ನಿಂದ ಆದ ಆರ್ಥಿಕ ಸಂಕಷ್ಟದ ಹಿನ್ನೆಲೆ ರಾಜ್ಯ ಸರ್ಕಾರ ಮತ್ತೆ ಭಾರೀ ಮೊತ್ತದ ಸಾಲದ ಮೊರೆ ಹೋಗಬೇಕಾಯಿತು. 2018-2023ರ ಸಮ್ಮಿಶ್ರ ಹಾಗೂ ಬಿಜೆಪಿ ಸರ್ಕಾರದ ಐದು ವರ್ಷಗಳಲ್ಲಿ ರಾಜ್ಯದ ಒಟ್ಟು ಸಾಲದ ಹೊಣೆಗಾರಿಕೆ ಸುಮಾರು 3 ಲಕ್ಷ ಕೋಟಿ ರೂ. ರಷ್ಟು ಹೆಚ್ಚಾಗಿತ್ತು.
ರಾಜ್ಯ ಸರ್ಕಾರದ ಒಟ್ಟು ಬಾಕಿ ಸಾಲ ವೇಗವಾಗಿ ಏರಿಕೆ ಕಾಣುತ್ತಿದ್ದು, ಹೆಚ್ಚಿನ ಬಡ್ಡಿ ಪಾವತಿ ಮಾಡಲಾಗುತ್ತಿದೆ. ಹೀಗಾಗಿ ಅನೇಕ ಯೋಜನೆಗಳ ವೆಚ್ಚ ಕಡಿತ ಮಾಡಿ, ಅವುಗಳನ್ನು ತರ್ಕಬದ್ಧಗೊಳಿಸಬೇಕು. ಜೊತೆಗೆ ಸಹಾಯಧನಗಳ ಭಾರವನ್ನು ಕಡಿತಗೊಳಿಸುವಂತೆ ರಾಜ್ಯ ಮಧ್ಯಮಾವಧಿ ವಿತ್ತೀಯ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಇದೀಗ ಆರ್ಥಿಕತೆ ಸಹಜತೆಗೆ ಮರಳಿದ್ದು, ರಾಜಕೀಯ ಪಕ್ಷಗಳ ಈ ಭರಪೂರ ಉಚಿತಗಳ ಗ್ಯಾರಂಟಿಗಳಿಂದ ಮತ್ತೆ ರಾಜ್ಯದ ಆರ್ಥಿಕತೆ ಮಂಡಿಯೂರುವುದು ಗ್ಯಾರಂಟಿ ಎಂಬ ಆತಂಕ ಆರ್ಥಿಕ ತಜ್ಞರದ್ದಾಗಿದೆ.
ಇದನ್ನೂ ಓದಿ: ಬಿಜೆಪಿ ಸರ್ಕಾರ ಡಬಲ್ ಎಂಜಿನ್ ಸರ್ಕಾರವಲ್ಲ, ಟ್ರಬಲ್ ಎಂಜಿನ್ ಸರ್ಕಾರ: ನಟಿ ರಮ್ಯಾ