ಬೆಂಗಳೂರು: ಸ್ನೇಹಿತೆಯನ್ನ ನಂಬಿ ರೂಪದರ್ಶಿಯೊಬ್ಬರು ಮೋಸ ಹೋಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.
ಪುಣೆ ಮೂಲದ ರೂಪದರ್ಶಿ ರೂಪ ರಿಝಾವ್ಲ್ ವಂಚನೆಗೊಳಗಾದ ರೂಪದರ್ಶಿ. ಈಕೆ ತನ್ನ ತಾಯಿಯ ಜೊತೆ ಪುಣೆಯಲ್ಲಿ ವಾಸವಿದ್ದು, ಮಾಡಲಿಂಗ್ ಮಾಡುತ್ತಾ ಜೀವನ ನಡೆಸುತ್ತಿದ್ದಳು. ಆದರೆ, ಕೋವಿಡ್ ಕಾರಣ ಮಾಡೆಲಿಂಗ್ ಅವಕಾಶ ಕಡಿಮೆಯಾಗಿತ್ತು.
15 ದಿನಗಳ ಹಿಂದೆ ಬೆಂಗಳೂರು ನಗರಕ್ಕೆ ಕೆಲಸ ಹುಡುಕಿ ಬಂದು, ನಗರದ ವಿಠಲ್ ಮಲ್ಯ ರಸ್ತೆಯ ಐಟಿಸಿ ಗಾರ್ಡೇನಿಯಾ ಹತ್ತಿರದ ರಮಣಶ್ರೀ ಹೋಟೆಲ್ನಲ್ಲಿ ಉಳಿದುಕೊಂಡಿದ್ರು. ಬೆಂಗಳೂರಿನ ಸ್ನೇಹಿತೆ ಚಾಂದಿನಿ ಎಂಬವರ ಮೂಲಕ ಸೂಫಿಯಾ ಅಲಿಯಾಸ್ ಮಾಯಾ ಎಂಬಾಕೆಯ ಪರಿಚಯವಾಗಿತ್ತು.
ಮಾಯಾ, ತಿಂಗಳಿಗೆ 70,000 ಸಂಬಳ, ವಸತಿ ಸೌಕರ್ಯ ಇರುವ ಮಾಡೆಲಿಂಗ್ ಕೆಲಸ ಕೊಡಿಸುವುದಾಗಿ ತಿಳಿಸಿದ್ದಾಳೆ. ಅಲ್ಲದೇ ಹೋಟೆಲ್ನಲ್ಲಿ ಇರಬೇಡ ನನ್ನ ಮನೆಗೆ ಬಾ ಎಂದು ರಮಣಶ್ರೀ ಹೋಟೆಲ್ ಬಳಿ ಕ್ಯಾಬ್ ಕಳುಹಿಸಿದ್ದಾಳೆ. ಲಗೇಜ್ ಹಾಗೂ ತನ್ನ ಬಳಿ ಇದ್ದ ಹಣವನ್ನು ತೆಗೆದುಕೊಂಡು ತಾವರಕೆರೆ ಸದ್ದುಗುಂಟೆ ಪಾಳ್ಯದಲ್ಲಿನ ಮಾಯ ಮನೆ ಬಳಿ ತೆರಳಿದ್ದಾಳೆ. ತನ್ನ ಬಳಿ ಅಧಿಕ ಮೊತ್ತದ ಹಣ ಇದ್ದ ಕಾರಣ ಅಮ್ಮನಿಗೆ ಹಣ ಡೆಪಾಸಿಟ್ ಮಾಡಬೇಕು, ಎಟಿಎಂ ಬಳಿ ಹೋಗೋಣ ಎಂದು ರೂಪದರ್ಶಿ ಕೇಳಿಕೊಂಡಿದ್ದಾರೆ. ಇದಕ್ಕೆ ಸದ್ಯ ವಿಶ್ರಾಂತಿ ತೆಗೆದುಕೊ ಎಂದ ಮಾಯಾ, ರಾತ್ರಿ 12 ಗಂಟೆ ವೇಳೆಗೆ ಕಾರಿನಲ್ಲಿ ಕರೆದೊಯ್ದಿದ್ದಾಳೆ.
ಆದರೆ ಎಟಿಎಂಗೆ ಕರೆದೊಯ್ಯದೇ ಎರಡು ಗಂಟೆಗಳ ಕಾಲ ಸುತ್ತಾಡಿಸಿ ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣ ಬಳಿ ಕಾರು ನಿಲ್ಲಿಸಿದ್ದಾಳೆ. ನಂತರ ಮೋಸ ಮಾಡುವ ಉದ್ದೆಶದಿಂದ ಕಾರಿನ ಹಿಂಭಾಗದಲ್ಲಿ ಬ್ಲಾಂಕೆಟ್ ಇದೆ ತೆಗೆದುಕೋ ಎಂದು ಹೇಳಿದ್ದಾಳೆ. ರೂಪದರ್ಶಿ ಕಾರಿನಿಂದ ಇಳಿಯುತಿದ್ದಂತೆ ತಕ್ಷಣ ಕಾರು ಚಾಲನೆ ಮಾಡಿಕೊಂಡು ಎರಡು ಮೊಬೈಲ್ ಫೋನ್, ಮೂರು ಲಕ್ಷ ಕ್ಯಾಶ್ ಇದ್ದ ಬ್ಯಾಗ್ ಸಮೆತ ಎಸ್ಕೇಪ್ ಆಗಿದ್ದಾಳೆ. ಸದ್ಯ ರೂಪದರ್ಶಿ ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.