ಬೆಂಗಳೂರು : ದೇವಸ್ಥಾನಗಳಲ್ಲಿ ಹೆಚ್ಚಿನ ಶಬ್ದವನ್ನುಂಟು ಮಾಡುತ್ತಿರುವ ಸಿಲಿಕಾನ್ ಸಿಟಿಯ ದೇಗುಲಗಳಿಗೆ ಪೊಲೀಸರು ನೋಟಿಸ್ ನೀಡುತ್ತಿದ್ದಾರೆ. ಈಗ ಬಸವನಗುಡಿ ಪೊಲೀಸ್ ಠಾಣೆಯಿಂದ ದೊಡ್ಡ ಗಣಪತಿ ದೇವಸ್ಥಾನದ ಆಡಳಿತ ಮಂಡಳಿಗೆ ನೋಟಿಸ್ ನೀಡಿರುವುದು ಬೆಳಕಿಗೆ ಬಂದಿದೆ.
ರಾಜಧಾನಿಯ ಸುಪ್ರಸಿದ್ದ ದೊಡ್ಡ ಗಣಪತಿ ದೇವಸ್ಥಾನದಲ್ಲಿ ನಿಗದಿತ ಡೆಸಿಬಲ್ ಶಬ್ದಕ್ಕಿಂತ ಹೆಚ್ಚಿನ ಶಬ್ದವನ್ನು ಉಂಟು ಮಾಡಲಾಗುತ್ತಿದೆ ಎಂದು ನೋಟಿಸ್ ನೀಡಲಾಗಿದೆ. ದೇವಸ್ಥಾನಗಳ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಸೂಚನೆಯ ಹೊರತಾಗಿಯೂ ಹೆಚ್ಚಿನ ಶಬ್ದ ಬರುವಂತೆ ಘಂಟೆ ಹೊಡೆದಲ್ಲಿ ಪ್ರಕರಣ ದಾಖಲು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಢಮರುಗ, ಧ್ವನಿ ವರ್ಧಕ ಯಂತ್ರಗಳಿಂದ ಧ್ವನಿ ಹೊರಡಿಸಬಾರದು ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ. ಹೆಚ್ಚಿನ ಶಬ್ದ ಕೇಳಿ ಬಂದಲ್ಲಿ ನಾಯ್ಸ್ ಪೊಲ್ಯೂಷನ್ ರೇಗುಲೇಷನ್ ಅಂಡ್ ಕಂಟ್ರೋಲ್ ರೂಲ್ಸ್ 2000ರ ಅಡಿಯಲ್ಲಿ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.