ಬೆಂಗಳೂರು: ಮ್ಯಾಟ್ರಿಮೋನಿ ಮೂಲಕ ಯುವಕನೋರ್ವನಿಗೆ ಯುವತಿ ಹಾಗು ಆಕೆಯ ತಂದೆ ಮೋಸ ಮಾಡಿ ಲಕ್ಷಾಂತರ ರುಪಾಯಿ ಹಣ ದೋಚಿರುವ ಘಟನೆ ನಗರದಲ್ಲಿ ನಡೆದಿದೆ.
ಅಮೇರಿಕಾದಲ್ಲಿ ಉದ್ಯೋಗದಲ್ಲಿದ್ದ ಟೆಕ್ಕಿ ಜ್ಯೋತಿಕೃಷ್ಣನ್ಗೆ ರಮ್ಯಾ ಎಂಬಾಕೆ ವಂಚನೆ ಮಾಡಿದ್ದಾರೆ. 2013ರಲ್ಲಿ ಭಾರತ್ ಮ್ಯಾಟ್ರಿಮೊನಿ ಡಾಟ್ಕಾಮ್ಮೂಲಕ ರಮ್ಯಎಂಬಾಕೆ ಜ್ಯೋತಿಕೃಷ್ಣನ್ಗೆ ಪರಿಚಯವಾಗಿದ್ದಳು. ಬಳಿಕ ಆಕೆಯ ತಂದೆಯೂ ಜ್ಯೋತಿ ಕೃಷ್ಣನ್ ಜೊತೆ ಮಾತನಾಡಿ, ರಮ್ಯ ಐಎಎಸ್ ಮಾಡುತ್ತಿದ್ದು 2 ವರ್ಷಗಳ ಬಳಿಕ ಮದುವೆ ಮಾಡಿಕೊಡುವುದಾಗಿ ಹೇಳಿದ್ದರು.
ಇದಾದ ನಂತರ ಹಣದ ಸಮಸ್ಯೆಯಿದೆ ಎಂದು ಹೇಳಿ ಟೆಕ್ಕಿ ಜ್ಯೋತಿಕೃಷ್ಣನ್ನಿಂದ ಹಣ ಲಪಟಾಯಿಸಲು ತಂದೆ ಮಗಳು ಪ್ಲಾನ್ ಮಾಡಿದ್ದಾರೆ. ಅಂತೆಯೇ ಇವರ ಮೋಸದ ಬಲೆಗೆ ಬಿದ್ದ ಜ್ಯೋತಿ ಕೃಷ್ಣನ್ ಅವರು ಕೇಳಿದಾಗಲೆಲ್ಲ ಹಣ ನೀಡಿದ್ದಾನೆ. ಇನ್ನು2017ರಲ್ಲಿ ಮದುವೆ ಹಾಗೂ ತುರ್ತು ವೈದ್ಯಕೀಯ ಖರ್ಚಿನ ಹೆಸರಿನಲ್ಲಿ 10 ಲಕ್ಷ ಪಡೆದಿದ್ದರು.
ನಂತರ 2017ರಲ್ಲಿ ಮತ್ತೆ ಬೆಂಗಳೂರಿಗೆ ಬಂದಿದ್ದ ಜ್ಯೋತಿಕೃಷ್ಣನ್ ಜೊತೆ ಮಾತನಾಡಿದ್ದ ರಮ್ಯ ತಂದೆ ಕುಟಿರಾಮ್, 2018ರಲ್ಲಿ ರಮ್ಯಾಳನ್ನು ನಿಮಗೆ ಮದುವೆ ಮಾಡಿಕೊಡ್ತೀವಿ ಎಂದು ಹೇಳಿದ್ದರು. ತಂದೆ-ಮಗಳ ಮಾತು ನಂಬಿ ಮತ್ತೆ ವಿದೇಶಕ್ಕೆ ತೆರಳಿದ್ದ ಟೆಕ್ಕಿ ಜ್ಯೋತಿಕೃಷ್ಣನ್, 2019ರಲ್ಲಿ ಅಮೇರಿಕಾದಿಂದ ಬೆಂಗಳೂರಿಗೆ ಬಂದಾಗ ಶಾಕೊಂದು ಕಾದಿತ್ತು. ಯಾಕಂದ್ರೆ ಆತ ಬರೋದಿಕ್ಕೂ ಮುನ್ನ ಮನೆ ಖಾಲಿ ಮಾಡಿಕೊಂಡು ರಮ್ಯ ಹಾಗೂ ಆಕೆಯ ತಂದೆ ನಾಪತ್ತೆಯಾಗಿದ್ದರು. ಅವರು ದೂರವಾಣಿ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಒಟ್ಟಾರೆಯಾಗಿ ಇವರ ಮೇಲೆ ಸುಮಾರು 18 ಲಕ್ಷ ಲಪಟಾಯಿಸಿರುವ ಆರೋಪವಿದೆ.
ಸದ್ಯ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರರರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.