ಬೆಂಗಳೂರು: 13 ದಿನಗಳ ಕಾಲ ನಗರದ ಲಾಡ್ಜ್ವೊಂದರಲ್ಲಿ ಸಂಸಾರ ಸಮೇತ ವಾಸ್ತವ್ಯ ಹೂಡಿದ್ದ ಗೋವಾ ಮೂಲದ ವ್ಯಕ್ತಿಯೋರ್ವ ಬಿಲ್ ಪಾವತಿಸಿದೆ ಓಡಿ ಹೋಗಿರುವ ಘಟನೆ ನಡೆದಿದ್ದು, ಈ ಕುರಿತು ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜನವರಿ 1ರಂದು ಗೋವಾದಿಂದ ನಗರಕ್ಕೆ ಬಂದಿದ್ದ ಗೋವಾ ಮೂಲದ ಸ್ವಪಿಲ್ ನಾಯಕ್ ಎಂಬಾತ ಗಾಂಧಿ ನಗರದಲ್ಲಿನ ಜಿಯಾನ್ ಹೋಟೆಲ್ಗೆ ಆಗಮಿಸಿ 93 ಸಾವಿರ ರೂ. ಮುಂಗಡವಾಗಿ ಪಾವತಿಸಿ ಐವರು ಅಂಗರಕ್ಷಕರೊಂದಿಗೆ ವಾಸ್ತವ್ಯ ಹೂಡಿದ್ದ. ತದನಂತರ ಜ. 9ರಂದು ಇಬ್ಬರು ಮಕ್ಕಳ ಸಮೇತ ಈತನ ಪತ್ನಿ ಕೂಡ ಹೋಟೆಲ್ಗೆ ಆಗಮಿಸಿದ್ದು, ಅವರಿಗೂ ಸಹ ಈತ ಬೇರೆ ರೂಮ್ ವ್ಯವಸ್ಥೆ ಮಾಡಿಕೊಟ್ಟಿದ್ದ.
ಈ ವೇಳೆ ಟ್ರಾವೆಲರ್ ಆಗಿದ್ದ ರವೀಂದ್ರ ಎಂಬ ವ್ಯಕ್ತಿ ಪರಿಚಯವಾಗಿದ್ದು, ತನ್ನ ಮೂವರು ಅಂಗರಕ್ಷಕರೊಂದಿಗೆ ಗೋವಾಕ್ಕೆ ತೆರಳಿ ಮತ್ತೆ ಜನವರಿ 15ರಂದು ಹೋಟೆಲ್ಗೆ ಬಂದು ಹೆಂಡತಿ-ಮಕ್ಕಳ ಸಮೇತ ಹೋಟೆಲ್ನಿಂದ ಪರಾರಿಯಾಗಿದ್ದಾನೆ ಎಂದು ಜಿಯಾನ್ ಹೋಟೆಲ್ ಮ್ಯಾನೇಜರ್ ಎಲ್.ಎನ್.ರಾಜು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಹೋಟೆಲ್ ರೂಮ್ ಹಾಗೂ ಊಟದ ವೆಚ್ಚ ಸೇರಿದಂತೆ 1.43 ಲಕ್ಷ ರೂಪಾಯಿ ಬಿಲ್ ನೀಡುವುದು ಬಾಕಿ ಇದೆ ಎಂದು ಮ್ಯಾನೇಜರ್ ಪೊಲೀಸರಿಗೆ ತಿಳಿಸಿದ್ದಾನೆ.
ಮ್ಯಾನೇಜರ್ ರಾಜು ನೀಡಿದ ದೂರಿನ ಮೇರೆಗೆ ಸ್ವಪಿಲ್ ನಾಯಕ್ ಎಂಬಾತನ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.